ಮುಂಬೈ.ಫೆ.21- ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತು ನಟಿ ಧನಶ್ರೀ ಅಧಿಕೃತವಾಗಿ ಬೇರೆ ಬೇರೆಯಾಗಿದ್ದಾರೆ. ಯುಜುವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ವಿಚ್ಛೇದನದ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಮಾತು ಕೇಳಿ ಬರುತ್ತಿದ್ದವು. ಇಬ್ಬರ ನಡುವೆ ಸಂಬಂಧ ಸರಿಯಿಲ್ಲ ಎನ್ನುವ ಬಗ್ಗೆ ವದಂತಿಗಳು ಹರಿದಾಡುತ್ತಿರುವಾಗಲೇ, ಯಜುವೇಂದ್ರ ಮತ್ತು ಧನಶ್ರೀ ವಿಚ್ಚೇದನ ಪಡೆದಿದ್ದಾರೆ.
ಮುಂಬೈನಲ್ಲಿರುವ ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ದಂಪತಿಯ ವಿಚ್ಛೇದನದ ಬಗ್ಗೆ ವಿಚಾರಣೆ ನಡೆಯಿತು. ಚಹಲ್ ಮತ್ತು ಧನಶ್ರೀ ಇಬ್ಬರೂ ಬೆಳಿಗ್ಗೆ 11 ಗಂಟೆಯಿಂದ ವಿಚಾರಣೆಗೆ ಹಾಜರಾಗಿದ್ದರು. ನ್ಯಾಯಾಲಯವು ಸುಮಾರು 45 ನಿಮಿಷಗಳ ಕಾಲ ನಡೆದ ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಅವರಿಗೆ ಸೂಚಿಸಿತು. ಅಲ್ಲಿ ಅವರು ಪರಸ್ಪರ ಒಪ್ಪಿಗೆಯ ಮೂಲಕ ವಿವಾಹ ವಿಚ್ಚೇಧನ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.
ಚಹಲ್ ಮತ್ತು ಧನಶ್ರೀ ಹೊಂದಾಣಿಕೆಯ ಸಮಸ್ಯೆ ಕಾರಣವನ್ನು ನೀಡಿದ್ದಾರೆ. ಪ್ರಕರಣವನ್ನು ಪರಿಶೀಲಿಸಿದ ನಂತರ ಮತ್ತು ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಂಡ ನಂತರ ನ್ಯಾಯಾಧೀಶರು ಅಧಿಕೃತವಾಗಿ ಅವರ ವಿಚ್ಛೇದನದ ತೀರ್ಪು ಪ್ರಕಟಿಸಿದರು.
ಡಿವೋರ್ಸ್ ಪಡೆದ ನಂತರ ಚಹಲ್ ಕೈಮಗಿಯುತ್ತಿರುವ ಹನುಮಂತನ ಫೋಟೋ ಹಾಕಿದ್ದಾರೆ. ದೇವರು ನನ್ನನ್ನು ಎಷ್ಟೋ ಬಾರಿ ಕಾಪಾಡಿದ್ದಾನೆ. ನಾನು ಅವುಗಳನ್ನು ಸಂಖ್ಯೆಯಲ್ಲಿ ಎಣಿಸಲು ಸಹ ಸಾಧ್ಯವಿಲ್ಲ. ಕೆಲವೊಮ್ಮೆ ದೇವರು ನನ್ನ ಅರಿವಿಗೆ ಬಾರದೆಯೋ ನನ್ನ ಜೊತೆ ನಿಂತಿದ್ದಾನೆ. ನನಗೆ ತಿಳಿಯದೇ ನನ್ನನ್ನು ಬೆಂಬಲಿಸಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು ಎಂದು ಚಹಲ್ ಬರೆದುಕೊಂಡಿದ್ದಾರೆ.
ಭಾರತದ ಖ್ಯಾತ ಜೋಡಿಗಳಲ್ಲಿ ಒಬ್ಬರಾಗಿದ್ದ ಚಹಲ್ ಮತ್ತು ಧನಶ್ರೀ 2020ರ ಡಿಸೆಂಬರ್ನ ನಲ್ಲಿ ಮದುವೆಯಾಗಿದ್ದರು. ಆ ಬಳಿಕ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಬ್ರೇಕ್ ಅಪ್‌ಗೆ ಮುಂದಾಗಿದ್ದಾರೆ ಎಂದು ಎರಡು ವರ್ಷದ ಹಿಂದೆ ಸುದ್ದಿ ಪ್ರಕಟವಾಗಿತ್ತು. ನಂತರ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ತೆರೆ ಎಳೆದಿದ್ದರು. ಕೊರೋನಾ ಕಾಲದ ಲಾಕ್‌ಡೌನ್ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು ಎಂದು ಧನಶ್ರೀ ಹೇಳಿದ್ದರು.
ಹಿಂದೆ ಚಹಲ್ ಹೊಸ ಜೀವನ ಆರಂಭ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಅದೇ ಸಮಯಕ್ಕೆ ಧನಶ್ರೀ ತಮ್ಮ ಇನ್ಸಾಗ್ರಾಮ್ ಖಾತೆಯಲ್ಲಿದ್ದ ಸರ್ ನೇಮ್ ಚಹಲ್ ಪದವನ್ನು ಕಿತ್ತುಹಾಕಿ ಧನಶ್ರೀ ವರ್ಮಾ ಎಂದು ಬದಲಾವಣೆ ಮಾಡಿಕೊಂಡಿದ್ದರು.
ಸದ್ಯ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯಲು ಚಹಲ್ ವಿಫಲರಾಗಿದ್ದು 2023ರ ಜನವರಿಯಲ್ಲಿ ಕೊನೆಯ ಏಕದಿನ ಪಂದ್ಯವಾಡಿದ್ದರೆ, 2023ರ ಆಗಸ್ಟ್‌ನಲ್ಲಿ ಕೊನೆಯ ಟಿ-20 ಪಂದ್ಯ ಆಡಿದ್ದರು.
ಐಪಿಎಲ್ 2025 ರ ಮೆಗಾ ಹರಾಜಿಗೆ ಮೊದಲು ಚಹಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡದಿಂದ ಕೈಬಿಟ್ಟಿತ್ತು. ನಂತರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್ ಕಿಂಗ್ಸ್ 18 ಕೋಟಿ ರೂ. ನೀಡಿ ಚಹಲ್ ಅವರನ್ನು ಖರೀದಿಸಿತ್ತು. ಚಹಲ್ 160 ಐಪಿಎಲ್ ಪಂದ್ಯವಾಡಿ 22.44 ರ ಸರಾಸರಿಯಲ್ಲಿ 205 ವಿಕೆಟ್ ಪಡೆದಿದ್ದಾರೆ.