Friday, November 22, 2024
Homeರಾಜಕೀಯ | Politicsಸ್ಪೀಕರ್ ಸ್ಥಾನದ ಕುರಿತು ಹೇಳಿಕೆ, ಜಮೀರ್ ವಜಾಕ್ಕೆ ಪಟ್ಟು, ವಿಧಾನಸಭೆಯಲ್ಲಿ ವಾಕ್ಸಮರ

ಸ್ಪೀಕರ್ ಸ್ಥಾನದ ಕುರಿತು ಹೇಳಿಕೆ, ಜಮೀರ್ ವಜಾಕ್ಕೆ ಪಟ್ಟು, ವಿಧಾನಸಭೆಯಲ್ಲಿ ವಾಕ್ಸಮರ

ಬೆಳಗಾವಿ,ಡಿ.11- ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮ್ಮದ್ಖಾನ್ ತೆಲಂಗಾಣ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಸ್ಪೀಕರ್ ಸ್ಥಾನದ ಕುರಿತು ನೀಡಿದ್ದ ಹೇಳಿಕೆ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಆಡಳಿತ ಮತ್ತು ವಿರೋಧಪಕ್ಷಗಳ ನಡುವೆ ವಾಕ್ಸಮರ ನಡೆದಿದ್ದಲ್ಲದೆ, ಕೆಲಕಾಲ ಕಲಾಪ ಮುಂದೂಡಬೇಕಾಯಿತು.ನಂತರ ಬಿಜೆಪಿ ಜಮೀರ್ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಧರಣಿ ನಡೆಸಿತು.


ಸಂತಾಪ ಸೂಚನೆಯ ಬಳಿಕ ಹಡಗಲಿ ಕ್ಷೇತ್ರದ ಬಿಜೆಪಿ ಶಾಸಕ ಕೃಷ್ಣಾನಾಯಕ್ ತಮ್ಮ ಕ್ಷೇತ್ರದಲ್ಲಿ 3 ವರ್ಷಗಳಿಂದ ಕೈಗೊಳ್ಳಲಾದ ವಿವಿಧ ವಸತಿ ಯೋಜನೆಯಡಿ ಮಂಜೂರಾದ ಮನೆಗಳ ವಿವರ ಕೇಳಿದರು.ಸಚಿವ ಜಮೀರ್ ಉತ್ತರ ಒದಗಿಸಲಾಗಿದೆ ಎಂದು ತಿಳಿಸಿದರು.
ಕೃಷ್ಣಾ ನಾಯಕ್ ಉಪಪ್ರಶ್ನೆ ಕೇಳುವ ಹಂತದಲ್ಲಿ ಎದ್ದುನಿಂತ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಜಮೀರ್ ಅಹಮ್ಮದ್ಖಾನ್ರವರು ಪೀಠಕ್ಕೆ ಅಗೌರವ ಆಗುವಂತೆ ನಡೆದುಕೊಂಡಿದ್ದಾರೆ. ಹಿಂದೂಗಳ ಭಾವನೆಯನ್ನು ಕೆಣಕಿದ್ದಾರೆ. ಅವರು ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸಲು ನಾವು ಒಪ್ಪುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.


ಬಿಜೆಪಿಯ ಸುರೇಶ್ಕುಮಾರ್, ಡಾ.ಸಿ.ಎನ್.ಅಶ್ವತ್ಥನಾರಾಯಣ ಸೇರಿದಂತೆ ಇತರೆ ಶಾಸಕರು ವಿಪಕ್ಷ ನಾಯಕರಿಗೆ ಬೆಂಬಲ ವ್ಯಕ್ತಪಡಿಸಿದರು.ಈ ಹಂತದಲ್ಲಿ ಸಭಾಧ್ಯಕ್ಷರು ಪೀಠದ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ವಿಪಕ್ಷಗಳಿಗೆ ತಿಳಿ ಹೇಳಿದರು. ಆದರೆ ಅದನ್ನು ಕೇಳಿಸಿಕೊಳ್ಳದ ವಿರೋಧ ಪಕ್ಷದ ನಾಯಕರು ಜಮೀರ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. ಈ ಹಂತದಲ್ಲಿ ಆಡಳಿತ ಪಕ್ಷದ ಕಡೆಯಿಂದ ಸಚಿವರಾದ ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಕೃಷ್ಣಾಭೈರೇಗೌಡ, ಶಾಸಕರಾದ ನರೇಂದ್ರಸ್ವಾಮಿ, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಮತ್ತಿತರರು ಬಿಜೆಪಿಯ ನಡವಳಿಕೆಯನ್ನು ತರಾಟೆಗೆ ತೆಗೆದುಕೊಂಡರು.

ಈರುಳ್ಳಿ ನಂತರ ಈಗ ಬೆಳ್ಳುಳ್ಳಿ ಬೆಲೆ ಏರಿಕೆ


ಆಡಳಿತ ಮತ್ತು ವಿರೋಧಪಕ್ಷಗಳ ನಡುವೆ ವಾಕ್ಸಮರಗಳು ಜೋರಾಗಿದ್ದವು. ಬಿಜೆಪಿಯವರು ಜಮೀರ್ ವಿರುದ್ಧ ಆಕ್ರೋಶ ಹೊರಹಾಕಿದರೆ, ಆಡಳಿತ ಪಕ್ಷದ ಸದಸ್ಯರು ಬಿಜೆಪಿಯವರಿಗೆ ಬರ, ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಆಸಕ್ತಿಯಿಲ್ಲ. ಹೀಗಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.ಸಭಾಧ್ಯಕ್ಷರು ಸದನದ ಸಮಯ ಹಾಳು ಮಾಡಬೇಡಿ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರ್.ಅಶೋಕ್, ಸಚಿವರ ಹೇಳಿಕೆ ಆಘಾತಕಾರಿ. ನಾವೇನು ಗುಲಾಮರೇ? ಎಂದು ಪ್ರಶ್ನಿಸಿದರು.
ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಭಾಧ್ಯಕ್ಷರೇ ಶಾಸಕ ಜಮೀರ್ ಅವರನ್ನು ಹೊರಹಾಕಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ನೋಟೀಸ್ ನೀಡದೇ ಯಾವುದೇ ವಿಚಾರಗಳನ್ನೂ ಮುಗುಮ್ಮಾಗಿ ಚರ್ಚೆ ಮಾಡಬೇಡಿ. ನೀವು ಪ್ರಸ್ತಾಪಿಸಲು ಬಯಸುವ ವಿಚಾರಗಳನ್ನು ನೋಟೀಸ್ ಮೂಲಕ ನೀಡಿ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಸಲಹೆ ನೀಡಿದರು.

ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಇದೇ ವಿಚಾರವಾಗಿ ಗದ್ದಲ ಹೆಚ್ಚಾದಾಗ ಕೆಲಕಾಲ ಕಲಾಪವನ್ನು ಸಭಾಧ್ಯಕ್ಷರು ಮುಂದೂಡಿದರು.
ನಂತರ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಏಕಾಏಕಿ ಚರ್ಚೆ ಮಾಡುವುದು ಸರಿಯಲ್ಲ. ನೋಟೀಸ್ ನೀಡಿ ನಿಮ್ಮ ಪ್ರಸ್ತಾವನೆಗೆ ಅವಕಾಶ ನೀಡಲಾಗುವುದು. ಈಗ ಬರ ಮತ್ತು ಉತ್ತರಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡಿ ಎಂದು ಸಲಹೆ ನೀಡಿದರು. ಮುಂದುವರೆದು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡರು.

ಜಮೀರ್ ಅಹಮ್ಮದ್ ಖಾನ್ರವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಸಭಾಧ್ಯಕ್ಷರ ಬಾವಿಗೆ ಇಳಿದು ಧರಣಿ ಆರಂಭಿಸಿದರು.
ಆರ್.ಅಶೋಕ್ ಅವರು ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ಅಪಚಾರ ಎಸಗುತ್ತಿದೆ. ಹಿಂದೂಗಳನ್ನು ಎರಡನೇ ದರ್ಜೆಯ ನಾಗರಿಕರಂತೆ ನೋಡಲಾಗುತ್ತಿದೆ. ನಾವು ನಮಸ್ಕಾರ ಎನ್ನುವುದು ವ್ಯಕ್ತಿಗತವಾಗಕ್ಕಲ್ಲ, ಪೀಠಕ್ಕಾಗಿ. ಸಭಾಧ್ಯಕ್ಷರು ಜಮೀರ್ ಅವರ ಹೇಳಿಕೆಯನ್ನು ಬೆಂಬಲಿಸುತ್ತಾರೆಯೇ, ತಮ್ಮ ವೈವಕ್ತಿಕ ಅಭಿಪ್ರಾಯಗಳೇನು, ಜಮೀರ್ ಅವರನ್ನು ರಕ್ಷಣೆ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.
ಪೀಠಕ್ಕೆ ಧರ್ಮದ ಕಳಂಕ ಅಂಟಿಕೊಂಡಿದೆ. ಈ ಹಿಂದೆ ಭೂಕಂಪದ ಸಂದರ್ಭದಲ್ಲಿ ಆಗಿನ ಸಚಿವ ಜಮೀರ್ ಅಹಮ್ಮದ್ ಖಾನ್ ಕ್ರಿಶ್ಚಿಯನ್ನರನ್ನು ನಿಂದಿಸದ್ದಕ್ಕಾಗಿ ದೇವರು ಶಿಕ್ಷೆ ಕೊಟ್ಟಿದ್ದಾನೆ ಎಂದಿದ್ದರು. ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಕ್ಷಣವೇ ಜಾನ್ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದರು. ಈಗ ಸಿದ್ದರಾಮಯ್ಯನವರಿಗೆ ಅಂತಹ ಧೈರ್ಯ, ತಾಕತ್ತು ಇಲ್ಲವೇ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.


ಕಾಂಗ್ರೆಸ್ನವರಿಗೆ ಹಿಂದೂಗಳ ಮತಗಳನ್ನು ಕೇಳಿದರೆ, ಹಿಂದೂಪರ ಮತಗಳು ಬೇಡವೇ, ಕಾಂಗ್ರೆಸ್ನವರು ಕೋಮುವಾದಿಗಳು ಎಂದು ಕಿಡಿಕಾರಿದರು.ಕೂಡಲೇ ಜಮೀರ್ ಅವರನ್ನು ವಜಾಗೊಳಿಸಿ ಬಹುಸಂಖ್ಯಾತ ಹಿಂದೂಗಳನ್ನು ಅವಹೇಳನ ಮಾಡುವುದು ಸಂವಿಧಾನಕ್ಕೆ ಕಪ್ಪು ಚುಕ್ಕೆ ಇಟ್ಟಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಧರಣಿ ನಡೆಸುತ್ತಿದ್ದ ಬಿಜೆಪಿ ಸದಸ್ಯರು ಜಮೀರ್ ಅಹಮ್ಮದ್ ಖಾನ್ರ ವಿರುದ್ಧ ಕ್ಕಾರ ಕೂಗಿದರು.


ಈ ಸರ್ಕಾರ ಆಡಳಿತ ನಡೆಸುವ ಯೋಗ್ಯತೆ ಕಳೆದುಕೊಂಡಿದೆ. ಸಚಿವ ಜಮೀರ್ ಅಹಮ್ಮದ್ನವರನ್ನಷ್ಟೇ ಅಲ್ಲ ಸರ್ಕಾರವನ್ನೇ ವಜಾ ಮಾಡಬೇಕಿದೆ. ಹಿಂದೂಗಳಿಗೆ ಅವಮಾನವಾಗುತ್ತಿದೆ ಎಂದು ದೂರಿದರು.ಪಾಕಿಸ್ತಾನದ ಏಜೆಂಟ್ ಅಹಮ್ಮದ್ ಆಲಿ ಜಿನ್ಹಾ ಎಂಬೆಲ್ಲಾ ಘೋಷಣೆಗಳನ್ನು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು.ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಚಿವ ಕೃಷ್ಣಭೈರೇಗೌಡ, ಜಮೀರ್ ಅವರ ಹೇಳಿಕೆಯಿಂದ ಪೀಠಕ್ಕೆ ಅಗೌರವವಾಗಿಲ್ಲ. ಬದಲಾಗಿ ಗೌರವ ಹೆಚ್ಚಾಗಿದೆ. ಬಿಜೆಪಿಯವರು ಯಾವುದೇ ವಿಚಾರವನ್ನು ಚರ್ಚೆ ಮಾಡಲು ಸ್ವಾತಂತ್ರ್ಯ ಹೊಂದಿದ್ದಾರೆ. ಆದರೆ ಅದಕ್ಕೂ ಮುನ್ನ ನೋಟೀಸ್ ನೀಡಬೇಕು.


ಬಿಜೆಪಿಯವರು ಬರ ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಚರ್ಚೆ ಮಾಡಲು ಸಿದ್ಧವಿಲ್ಲ. ಅದಕ್ಕಾಗಿ ರಾಜಕೀಯ ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಸದನದ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಸಮಾಜವನ್ನು ವಿಭಜಿಸುವ ಸಿದ್ಧಾಂತ ಅವರದು. ಜವಾಬ್ದಾರಿಯುತ ವಿರೋಧಪಕ್ಷವಾಗಿ ಚರ್ಚೆಯಲ್ಲಿ ಭಾಗವಹಿಸದೆ ಜನರಿಗೆ ದ್ರೋಹವೆಸಗುತ್ತಿದ್ದಾರೆ ಎಂದು ಕಿಡಿಕಾರಿದರು.
ಆದರೆ ಇದಕ್ಕೆ ಕಿವಿಗೊಡದೆ ಬಿಜೆಪಿ ಸದಸ್ಯರು ಘೋಷಣೆ ಕೂಗುವುದನ್ನು ಮುಂದುವರೆಸಿದರು.

ಈ ವೇಳೆ ಸಭಾಧ್ಯಕ್ಷರು ಸದನದ ಹೊರಗೆ ಮಾತನಾಡಿರುವ ವಿಚಾರವನ್ನು ಮುಂದಿಟ್ಟುಕೊಂಡು ಇಲ್ಲಿ ಚರ್ಚೆ ಮಾಡುವುದು ಸರಿಯಲ್ಲ. ಜಮೀರ್ ಅವರ ಹೇಳಿಕೆಯ ಬಗ್ಗೆ ಈಗಾಗಲೇ ನಾನು ಸ್ಪಷ್ಟನೆ ನೀಡಿದ್ದೇನೆ. ಒಂದು ವೇಳೆ ನಿಮಗೆ ಚರ್ಚೆ ಮಾಡಲು ಆಸಕ್ತಿ ಇದ್ದರೆ ನೋಟೀಸ್ ಕೊಡಿ. ಸಮಯ ನೀಡುತ್ತೇನೆ. ಏಕಾಏಕಿ ಪ್ರಸ್ತಾಪ ಮಾಡುವುದು, ಧರಣಿ ನಡೆಸುವುದು ಸರಿಯಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬುವುದಕ್ಕಿಂತಲೂ ರಾಜ್ಯದ ಬರ, ಉತ್ತರ ಕರ್ನಾಟಕದ ಸಮಸ್ಯೆಗಳು ಮಹತ್ವದ್ದಾಗಿವೆ ಎಂದು ಹೇಳಿದರು.

ಜಮೀರ್ ಅವರ ಹೇಳಿಕೆ ನೀಡಿ ಒಂದು ತಿಂಗಳು ಮುಗಿದಿದೆ. ಸದನದ ಹೊರಗೆ ಈ ವಿಷಯವನ್ನು ಚರ್ಚೆ ಮಾಡಬಹುದು. ಕೋಟ್ಯಂತರ ರೂ. ಖರ್ಚು ಮಾಡಿ ಸದನ ನಡೆಸಲಾಗುತ್ತಿದೆ. ಇಲ್ಲಿ ಕ್ಷುಲ್ಲಕ ವಿಚಾರವನ್ನು ಪ್ರಸ್ತಾಪಿಸಿ ಸದನದ ಸಮಯ ಹಾಳು ಮಾಡುವುದು ಸರಿಯಲ್ಲ. ಈಗಾಗಲೇ ಒಂದು ವಾರ ಕಲಾಪ ನಡೆದಿದೆ. ಆಗೆಲ್ಲಾ ನೀವು ಸುಮ್ಮನೆ ಇದ್ರಿ. ಈಗ ಪ್ರಸ್ತಾಪ ಮಾಡಿ ಗಲಾಟೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಆದರೂ ವಿಪಕ್ಷಗಳ ಶಾಸಕರು ಧರಣಿ ಮುಂದುವರೆಸಿದರು. ಇದರ ನಡುವೆಯೇ ಸಭಾಧ್ಯಕ್ಷರು ಪ್ರಶ್ನೋತ್ತರವನ್ನು ಮುಂದುವರೆಸಿದರು. ನಂತರ ಶಾಸನ ರಚನೆ ಕಲಾಪದಲ್ಲಿ ಜಿಎಸ್ಟಿ ತಿದ್ದುಪಡಿ, ವೈದ್ಯಕೀಯ ಕೋರ್ಸ್ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವೆ, ಸ್ಟಾಂಪ್ ತಿದ್ದುಪಡಿ ವಿಧೇಯಕ ಸೇರಿದಂತೆ 5 ವಿಧೇಯಕಗಳನ್ನು ಪರ್ಯಾಲೋಚನೆಗೊಳಪಡಿಸಿ ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು.

RELATED ARTICLES

Latest News