ಬೆಂಗಳೂರು, ಫೆ.25- ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ಗಳಲ್ಲಿ ಶಾಸಕರ ವಾಹನಗಳಿಗೆ ಶೂನ್ಯ ಫಾಸ್ಟ್‌ಟ್ಯಾಗ್ ಒದಗಿಸಲಿದೆ.ವಿಧಾನಸಭಾ ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಈ ಸೌಲಭ್ಯ ಪಡೆಯಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕಾಗಿದೆ.
ಶೂನ್ಯ ಫಾಸ್ಟ್‌ಟ್ಯಾಗ್ ಹೊಂದಲು ಪ್ರಾಧಿಕಾರದ ವೆಬ್‌ಸೈಟ್ https://exemptedfastag.nhai.org/exemptedfastag/ ನಲ್ಲಿ ಅರ್ಜಿಯ ನಮೂನೆಯನ್ನು ಭರ್ತಿ ಮಾಡಿ, ಅದರ ಪ್ರತಿಯನ್ನು ಬೆಂಗಳೂರಿನಲ್ಲಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗಳಿಗೆ ಕಳುಹಿಸಬೇಕು. ಈ ಅವಕಾಶವನ್ನು ಶಾಸಕರು ಉಪಯೋಗಿಸಿಕೊಳ್ಳಬೇಕೆಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭೆಯ ಅಂದಾಜುಗಳ ಸಮಿತಿಯು ಜ.24 ರಂದು ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ಬರುವ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ವತಿಯಿಂದ ನಿರ್ವಹಿಸಲಾಗುವ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ ಸುಗಮ ಸಂಚಾರ ಸರಳೀಕರಣಗೊಳಿಸುವ ಕುರಿತು ಸಭೆ ನಡೆಸಿತ್ತು.
ಸಮಿತಿ ಸಭೆಯಲ್ಲಿ ಟೋಲ್ ಪ್ಲಾಜಾಗಳಲ್ಲಿ ಅಡೆತಡೆಯಿಂದ ಶಾಸಕರಿಗೆ ಆಗುತ್ತಿರುವ ತೊಂದರೆ ಕುರಿತು ವಿಸ್ತ್ರತವಾಗಿ ಚರ್ಚಿಸುವ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಮಾತನಾಡಿ, ವಿಧಾನಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ಶೂನ್ಯ ಫಾಸ್ಟ್‌ಟ್ಯಾಗ್ ಒದಗಿಸಲು ಅವಕಾಶವಿದೆ.
ಕೋರಿಕೆಗಳನ್ನು ಸಲ್ಲಿಸಿದರೆ, ಈ ಸೌಲಭ್ಯವನ್ನು ಒದಗಿಸುವುದಾಗಿ ತಿಳಿಸಿರುತ್ತಾರೆ ಎಂದು ಅವರು ಹೇಳಿದ್ದಾರೆ.