Home Blog

ರೈತರ ಕಿಚ್ಚು ಸರ್ಕಾರವನ್ನು ಆಹುತಿ ತೆಗೆದುಕೊಳ್ಳದೇ ಬಿಡುವುದಿಲ್ಲ : ಅಶೋಕ್‌ ಆಕ್ರೋಶ

ಬೆಂಗಳೂರು, ನ.7-ಕಬ್ಬು ಬೆಳೆಗಾರರ ಬದುಕಿನ ಜತೆ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿದೆ, ಇದೇ ವರ್ತನೆ ಮುಂದುವರಿದರೆ ರೈತರ ಹೋರಾಟದ ಕಿಚ್ಚು ಸರ್ಕಾರವನ್ನೇ ಆಹುತಿ ತೆಗೆದುಕೊಳ್ಳದೇ ಬಿಡುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎಂಟು ದಿನಗಳಿಂದ ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟ ಹಾಗೂ ಇತರೆ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ನ್ಯಾಯಯುತ ಬೆಲೆಗೆ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಚಳವಳಿ ಇತರೆ ಜಿಲ್ಲೆಗಳಿಗೂ ಹರಡುತ್ತಿದೆ. ಅನೇಕ ಮಠಗಳ ಧರ್ಮಗುರುಗಳು ಬೆಂಬಲ ನೀಡಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.

ಆದರೂ ಸರ್ಕಾರದಿಂದ ಸಕಾರಾತಕ ಸ್ಪಂದನೆ ಇಲ್ಲದಿರುವುದು ದುರದೃಷ್ಟಕರ ಎಂದು ಪತ್ರಿಕಾ ಹೇಳಿಕೆಯಲ್ಲಿ ಹರಿಹಾಯ್ದಿದ್ದಾರೆ.ರೈತರನ್ನು ಬೀದಿಯಲ್ಲಿ ಕೂರಿಸಿರುವ ಸರ್ಕಾರ, ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಮಾತುಕತೆ ನಡೆಸಬೇಕು ಎಂಬ ನಾಟಕ ಆಡುತ್ತಿದೆ. ಮುಂಚಿತವಾಗಿ ಬೆಳೆಗಾರರು ಮತ್ತು ಕಾರ್ಖಾನೆ ಮಾಲೀಕರ ಜತೆ ಸಮಾಲೋಚಿಸಿ ಬೆಲೆ ನಿಗದಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು? ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳು ಆಗ ಏನು ಮಾಡುತ್ತಿದ್ದರು? ರಾಜ್ಯ ಸರ್ಕಾರ ಉದಾರವಾಗಿ ನಡೆದುಕೊಂಡು ಬೊಕ್ಕಸದಿಂದ ನೆರವು ನೀಡಲು ಇರುವ ತೊಂದರೆ ಏನು? ಪ್ರತಿ ಟನ್‌ ಗೆ 500 ರೂ. ಸಹಾಯಧನ ನೀಡಲಿ ಎಂದು ಆಗ್ರಹಿಸಿದ್ದಾರೆ.

ಕಬ್ಬು ಮತ್ತು ಉಪ ಉತ್ಪನ್ನಗಳ ವಹಿವಾಟು, ವಿದ್ಯುತ್‌ ಉತ್ಪಾದನೆಯಿಂದ ರಾಜ್ಯದ ಬೊಕ್ಕಸಕ್ಕೆ ಬಹು ದೊಡ್ಡ ಆದಾಯ ಬರುತ್ತಿದೆ. ಆದರೆ ಅದನ್ನು ಮರೆ ಮಾಚಿದ ಸಿಎಂ ಸಿದ್ದರಾಮಯ್ಯ, ಕೇಂದ್ರದ ವಿರುದ್ಧ ಆರೋಪ ಮಾಡುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಎಫ್‌ಆರ್ಪಿ ನಿಗದಿ, ರಿಕವರಿ ಆಧರಿತ ದರ, ಸಾಗಾಟ ಮತ್ತು ಕಟಾವು ವೆಚ್ಚ ಇತ್ಯಾದಿ ವಿವರಣೆ ನೀಡಿ ಸುದ್ದಿಗೋಷ್ಠಿಯಲ್ಲಿ ತಿಪ್ಪೇ ಸಾರಿಸುವ ಕೆಲಸ ಮಾಡಿದ್ದಾರೆ.
ಪ್ರಧಾನಿಯವರ ಭೇಟಿಗೆ ಸಮಯ ಕೇಳಿ ಪತ್ರ ಬರೆಯುವೆ ಎಂದು ಗೊಸುಂಬೆ ನಾಟಕ ಆಡಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ. ಅಧಿಕಾರಕ್ಕೆ ಬಂದ ದಿನದಿಂದಲೂ ಸಿದ್ದರಾಮಯ್ಯ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸಿಕೊಂಡು ಬಂದಿದೆ. ಇದರಿಂದ ಎರಡೂವರೆ ಸಾವಿರಕ್ಕೂ ಅಧಿಕ ರೈತರು ಆತಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಾವಿನ ಸಮಾಧಿ ಮೇಲೆ ಇವರು ಅಧಿಕಾರದ ಮೋಜು ಮಸ್ತಿ ನಡೆಸಿದ್ದಾರೆ. ಇಂತಹ ದರಿದ್ರ, ಜನವಿರೋಧಿ, ರೈತ ವಿರೋಧಿ ಸರ್ಕಾರವನ್ನು ಕರ್ನಾಟಕದ ಜನತೆ ಹಿಂದೆಂದೂ ಕಂಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕಾರ್ಖಾನೆ ಆಡಳಿತ ಮಂಡಳಿಗಳು ಪ್ರತಿ ಟನ್‌ ಕಬ್ಬಿಗೆ 3,500 ರೂ. ದರ ನಿಗದಿ ಮಾಡಿ ತಕ್ಷಣವೇ ಹಣ ಪಾವತಿ ಮಾಡುತ್ತಿವೆ. ಅಲ್ಲಿ ನೀಡಲು ಸಾಧ್ಯ ಇರುವಾಗ ರಾಜ್ಯದಲ್ಲಿ ಏಕೆ ಸಾಧ್ಯವಿಲ್ಲ? ಈ ಸರ್ಕಾರಕ್ಕೆ ರೈತರ ಪರ ಕಾಳಜಿ ಇದಿದ್ದರೆ ಬೆಳೆಗಾರರು ಬೀದಿಗೆ ಇಳಿಯುವ ಮುಂಚೆ ಅಗತ್ಯ ಕ್ರಮ ಕೈಗೊಳ್ಳಬೇಕಿತ್ತು. ಈ ಸರ್ಕಾರಕ್ಕೆ ರೈತರು ಕಾಲ ಕಸದಂತೆ ಆಗಿದ್ದಾರೆ ಎಂದು ಟೀಕಿಸಿದ್ದಾರೆ.

ಗೂಬೆ ಕೂರಿಸಬೇಡಿ ಕೇಂದ್ರ ಸರ್ಕಾರ ಷುಗರ್‌ ಹಿಯರ್‌ ಆರಂಭಕ್ಕೆ ಮೊದಲು ಎಫ್‌‍ಆರ್ಪಿ ದರ ನಿಗದಿ ಮಾಡುತ್ತದೆ. ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ನುಣುಚಿಕೊಳ್ಳುವ ತಂತ್ರ ಅನುಸರಿಸಿದ್ದಾರೆ. ಆದರೆ, ಕಾರ್ಖಾನೆಗಳು ಉತ್ಪಾದಿಸುವ ಉಪ ಉತ್ಪನ್ನಗಳ ವಹಿವಾಟಿನಲ್ಲೂ ರೈತರಿಗೆ ಪಾಲು ಕೊಡಿಸಲು ಕಾನೂನಿನ ಪ್ರಕಾರವೇ ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಆದರೆ ಸತ್ಯವನ್ನು ಮರೆಮಾಚಿ ಎಲ್ಲ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದು ಎಂಬಂತೆ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ನಾಟಕ ಆಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಹಿಂದೆ ಯಡಿಯೂರಪ್ಪ ಮತ್ತು ಬೊಮಾಯಿ ಅವರ ಸರ್ಕಾರಗಳಿದ್ದಾಗ ಬಿಜೆಪಿ ಬೆಳೆಗಾರರಿಗೆ ನ್ಯಾಯಯುತ ದರ ಕೊಡಿಸುವ ಕೆಲಸ ಮಾಡಿದೆ. ಈಗಲೂ ಕಾಲ ಮಿಂಚಿಲ್ಲ, ತಮದು ರೈತ ಪರ ಸರ್ಕಾರ ಎಂದು ಮೊಸಳೆ ಕಣ್ಣೀರು ಸುರಿಸುವ ಸಿದ್ದರಾಮಯ್ಯ ರೈತ ಪರವಾದ ಆದೇಶ ಹೊರಡಿಸಲಿ. ಕಾರ್ಖಾನೆಗಳ ಪಾಲಿನ ಹಣದ ಜತೆಗೆ ಸರ್ಕಾರವು ಕೊಂಚ ಹಣ ನೀಡಲಿ, ಸಂಕಷ್ಟದಲ್ಲಿರುವ ರೈತರ ನೆರವಿಗೆ ಮುಂದಾಗಲಿ ಎಂದು ಆಗ್ರಹಿಸಿದ್ದಾರೆ.

ಇಂದಿರಾಗಾಂಧಿ ಏರ್​ಪೋರ್ಟ್​​ನಲ್ಲಿ ತಾಂತ್ರಿಕ ಸಮಸ್ಯೆ : 100ಕ್ಕೂ ಹೆಚ್ಚು ವಿಮಾನ ಹಾರಾಟ ವಿಳಂಭ

ನವದೆಹಲಿ, ನ. 7-ತಾಂತ್ರಿಕ ಸಮಸ್ಯೆಗಳಿಂದಾಗಿ ಇಂದು ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ 100 ಕ್ಕೂ ಹೆಚ್ಚು ವಿಮಾನಗಳ ಹಾರಟ ವಿಳಂಬವಾಗಿವೆ. ವಾಯು ಸಂಚಾರ ನಿಯಂತ್ರಣವು ಸಮಸ್ಯೆಗಳನ್ನು ಅಧಿಕಾರಿಗಳು ಸರಿಪಡಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾದ ರಾಷ್ಟ್ರ ರಾಜಧಾನಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿದಿನ 1,500 ಕ್ಕೂ ಹೆಚ್ಚು ವಿಮಾನಗಳ ಚಲನೆಯನ್ನು ನಿರ್ವಹಿಸುತ್ತದೆ.

ತಾಂತ್ರಿಕ ಸಮಸ್ಯೆಗಳಿಂದಾಗಿ ವಾಯು ಸಂಚಾರ ನಿಯಂತ್ರಕರು ಸ್ವಯಂಚಾಲಿತವಾಗಿ ವಿಮಾನ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಆಟೋ ಟ್ರ್ಯಾಕ್‌ ಸಿಸ್ಟಮ್‌ಗಾಗಿ ಮಾಹಿತಿಯನ್ನು ಒದಗಿಸುವ ಸ್ವಯಂಚಾಲಿತ ಸಂದೇಶ ಸ್ವಿಚಿಂಗ್‌ ಸಿಸ್ಟಮ್‌ನಲ್ಲಿ ಕೆಲವು ಸಮಸ್ಯೆಗಳಿವೆ, ಇದು ವಿಮಾನ ಸೇವೆ ತಡವಾಗಿದೆ ಎಂದು ಮೂಲಗಳು ತಿಳಿಸಿವೆ. ಸಿಸ್ಟಮ್‌ ಸಮಸ್ಯೆಗಳು ಮುಂದುವರಿದಿರುವುದರಿಂದ, ವಾಯು ಸಂಚಾರ ನಿಯಂತ್ರಕರು ಲಭ್ಯವಿರುವ ಡೇಟಾದೊಂದಿಗೆ ಹಸ್ತಚಾಲಿತವಾಗಿ ವಿಮಾನ ಹಾರಟ ಸಿದ್ಧಪಡಿಸುತ್ತಿದ್ದಾರೆ, ಇದು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ ಮತ್ತು ಪರಿಣಾಮವಾಗಿ, ಅನೇಕ ವಿಮಾನಗಳು ವಿಳಂಬವಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.

ಈ ಸಮಸ್ಯೆಗಳು ವಿಮಾನ ನಿಲ್ದಾಣದಲ್ಲಿ ವಾಯು ಸಂಚಾರ ದಟ್ಟಣೆಗೆ ಕಾರಣವಾಗುತ್ತಿದ್ದು, ಅಧಿಕಾರಿಗಳು ಸಮಸ್ಯೆಗಳನ್ನು ಸರಿಪಡಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಶುಕ್ರವಾರ ಬೆಳಿಗ್ಗೆ ವಿಮಾನ ನಿಲ್ದಾಣದಲ್ಲಿ 100 ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ ಎಂದು ಮೂಲಗಳು ತಿಳಿಸಿವೆ. ವಿಮಾನ ಟ್ರ್ಯಾಕಿಂಗ್‌ ವೆಬ್‌ಸೈಟ್‌‍ 24. ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ನಿರ್ಗಮನಕ್ಕೆ ಸುಮಾರು 50 ನಿಮಿಷಗಳ ವಿಳಂಬವಾಗಿದೆ.

ಮಗನ ನಿಗೂಢ ಸಾವು : ಪಂಜಾಬ್‌ನ ಮಾಜಿ ಡಿಜಿಪಿ ವಿರುದ್ಧ ಸಿಬಿಐ ಪ್ರಕರಣ ದಾಖಲು

ನವದೆಹಲಿ, ನ.7-ಹರಿಯಾಣದ ಪಂಚಕುಲದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಅವರ ಅಕ್ವಿಲ್‌ ಅಖ್ತರ್‌ (35) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ಮಾಜಿ ಡಿಜಿಪಿ ಮೊಹಮದ್‌ ಮುಸ್ತಫಾ, ಅವರ ಪತ್ನಿ ರಜಿಯಾ ಸುಲ್ತಾನಾ ಮತ್ತು ಇತರರ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ. ಎಫ್‌ಐಆರ್‌ ಪ್ರಕಾರ ಮೃತರು ಮತ್ತು ಅವರ ಕುಟುಂಬದ ನಡುವೆ ಅಸಮಾಧಾದಿಮದ ಈ ಕೊಲೆ ನಡೆದಿರು ಶಂಕೆ ವ್ಯಕ್ತವಾಗಿದೆ.

ಕೇಂದ್ರ ತನಿಖಾ ದಳ (ಸಿಬಿಐ) ನವೆಂಬರ್‌ 6 ರಂದು ಅಖಿಲ್‌ ಅಖ್ತರ್‌ ಕೊಲೆ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಿದೆ. ಪಂಚಕುಲದ ಮಾನ್ಸಾ ದೇವಿ ಮಂದಿರ ಬಳಿಯ ಸೆಕ್ಟರ್‌ 4 ರಲ್ಲಿ ಪ್ರಸ್ತುತ ವಾಸಿಸುತ್ತಿರುವ ಪಂಜಾಬ್‌ನ ಮಾಜಿ ಡಿಜಿಪಿ ಮೊಹಮದ್‌ ಮುಸ್ತಫಾ ಮತ್ತು ಪಂಜಾಬ್‌ನ ಮಾಜಿ ಪಿಡಬ್ಲ್ಯೂಡಿ ಸಚಿವೆ ರಜಿಯಾ ಸುಲ್ತಾನಾ ಅವರ ಪುತ್ರ ಅಕ್ವಿಲ್‌ ಅಖ್ತರ್‌ ಅಕ್ಟೋಬರ್‌ 16 ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂಬ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಸಿಬಿಐ ವಕ್ತಾರರು ತಡರಾತ್ರಿ ತಿಳಿಸಿದ್ದಾರೆ.

ಅಖ್ತರ್‌ ಅವರ ಪತ್ನಿ, ಸಹೋದರಿ ಸುಲ್ತಾನ ಆರೋಪಿಗಳೆಂದು ತಿಳಿಸಲಾಗಿದೆ. ಅಖ್ತರ್‌ ಆಗಸ್ಟ್‌ 27 ರಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್‌ ಮಾಡಿ, ತನ್ನ ಪತ್ನಿ ಮತ್ತು ತಂದೆಯ ನಡುವೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿದ್ದರು ಮತ್ತು ಅವರ ತಾಯಿ ಮತ್ತು ಸಹೋದರಿ ಸೇರಿದಂತೆ ಅವರ ಇಡೀ ಕುಟುಂಬವು ಅವರನ್ನು ಕೊಲ್ಲಲು ಅಥವಾ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸುತ್ತಿದೆ ಎಂದು ಉಲ್ಲೇಖಿಸಿದ್ದರು ಎಂದು ಸಂಸ್ಥೆ ತಿಳಿಸಿದೆ. ಪಂಚಕುಲ ಪೊಲೀಸರು ಆರಂಭದಲ್ಲಿ ದಾಖಲಿಸಿದ್ದ ಪ್ರಕರಣವನ್ನು ಹರಿಯಾಣ ಸರ್ಕಾರ ಸಿಬಿಐಗೆ ಹಸ್ತಾಂತರಿಸಿತ್ತು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-11-2025)

ನಿತ್ಯ ನೀತಿ : ಯಾರು ಏನಾದರೂ ಹೇಳಿಕೊಳ್ಳಲಿ ನೀವು ಸಮಾಧಾನದಿಂದಿರಿ. ಏಕೆಂದರೆ, ಸೂರ್ಯನ ಬಿಸಿಲು ಎಷ್ಟೇ ಜೋರಾಗಿದ್ದರೂ ಎಂದಿಗೂ ಸಮುದ್ರ ಬತ್ತುವುದಿಲ್ಲ.

ಪಂಚಾಂಗ : ಶುಕ್ರವಾರ, 07-11-2025
ಶೋಭಕೃತ್‌ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು:ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಕೃಷ್ಣ / ತಿಥಿ: ದ್ವಿತೀಯ / ನಕ್ಷತ್ರ:ರೋಹಿಣಿ / ಯೋಗ: ಪರಿಘ / ಕರಣ: ವಣಿಜ
ಸೂರ್ಯೋದಯ – ಬೆ.06.15
ಸೂರ್ಯಾಸ್ತ – 5.52
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ : Horoscope
ಮೇಷ
: ನಿರೀಕ್ಷಿತ ಧನಾಗಮನವಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.
ವೃಷಭ: ಧಾರ್ಮಿಕ ಕಾರ್ಯಗಳಿಗೆ ಹಣ ವ್ಯಯ ಮಾಡುವಿರಿ. ಮಕ್ಕಳಿಂದ ಸಂತೋಷ ಸಿಗಲಿದೆ.
ಮಿಥುನ: ಸೌಜನ್ಯತೆಯಿಂದ ನಡೆದುಕೊಳ್ಳುವುದ ರಿಂದ ನೆರೆಹೊರೆಯವರು ನಿಮಗೆ ಸ್ಪಂದಿಸುವರು.

ಕಟಕ: ವ್ಯವಹಾರಕ್ಕೆ ಸಂಬಂಽಸಿದಂತೆ ಕಾನೂನು ವಿಷಯದಲ್ಲಿ ಹೆಚ್ಚಿನ ಸಲಹೆ ಪಡೆಯುವುದು ಅನಿವಾರ್ಯವಾಗಲಿದೆ.
ಸಿಂಹ: ಅನಗತ್ಯ ಚರ್ಚೆಗಳಿಗೆ ಆಸ್ಪದ ನೀಡದಿರಿ. ಸಾಲ ಮಾಡುವ ಸ್ಥಿತಿ ತಂದುಕೊಳ್ಳಬೇಡಿ.
ಕನ್ಯಾ: ಕೆಲಸ-ಕಾರ್ಯಗಳಲ್ಲಿ ಜನಪ್ರಿಯತೆ ಗಳಿಸುವಿರಿ. ನಿರೀಕ್ಷಿತ ಸ್ಥಾನಮಾನ ಸಿಗಲಿದೆ.

ತುಲಾ: ಲೇವಾದೇವಿ ವ್ಯವ ಹಾರ ನಡೆಸುವುದು ಸರಿಯಲ್ಲ.
ವೃಶ್ಚಿಕ: ಶುಭ ಸಮಾರಂಭ ಗಳು ನಡೆಯುವುದರಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
ಧನುಸ್ಸು: ವಿದ್ಯೆಯ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಂತಸದ ದಿನ.

ಮಕರ: ಪತ್ನಿಯ ಸಹಕಾರದಿಂದ ನಿಮ್ಮ ಕೆಲಸ-ಕಾರ್ಯಗಳು ಸುಸೂತ್ರವಾಗಿ ನೆರವೇರಲಿವೆ.
ಕುಂಭ: ಭೂಮಿ, ಆಸ್ತಿ ವಿಚಾರಗಳಲ್ಲಿ ಪ್ರಗತಿ ಕಾಣುವಿರಿ. ಮಕ್ಕಳಿಂದ ಶುಭವಾರ್ತೆ ಕೇಳುವಿರಿ.
ಮೀನ: ಕಹಿ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ. ಹಿರಿಯರ ಮಾತುಗಳನ್ನು ಗೌರವಿಸಿ.

ಮತಗಳ್ಳತನ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಳ್ಳದ ಬ್ಲಾಕ್‌ ಕಾಂಗ್ರೆಸ್‌‍ ಅಧ್ಯಕ್ಷರ ವಜಾ: ಡಿಕೆಶಿ ಎಚ್ಚರಿಕೆ

ಬೆಂಗಳೂರು, ನ.6- ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಿ ಸಂಗ್ರಹ ಅಭಿಯಾನದಲ್ಲಿ ಕೆಲಸ ಮಾಡದೇ ಇರುವ ಬ್ಲಾಕ್‌ ಕಾಂಗ್ರೆಸ್‌‍ ಅಧ್ಯಕ್ಷರನ್ನು ನಿರ್ಧಾಕ್ಷಿಣ್ಯವಾಗಿ ವಜಾಗೊಳಿಸಲಾಗುವುದು ಹಾಗೂ ಶಾಸಕರ ವಿರುದ್ಧ ಕೂಡ ಹೈಕಮಾಂಡ್‌ಗೆ ವರದಿ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಸಿ ದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಗಂಭೀರವಾದ ವಿಚಾರ. ರಾಹುಲ್‌ ಗಾಂಧಿ ಅವರು ನಿನ್ನೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹರಿಯಾಣದ ಮತಗಳ್ಳತನವನ್ನು ದಾಖಲೆ ಸಹಿತ ಬಹಿರಂಗ ಪಡಿಸಿದ್ದಾರೆ. ಕರ್ನಾಟಕದಲ್ಲೂ ಮತಗಳ್ಳತನವಾಗಿರುವ ಉದಾಹರಣೆಗಳಿವೆ ಎಂದರು.

ಮತಗಳ್ಳತನದ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ರಾಜ್ಯ ಹಾಗೂ ದೇಶಾದ್ಯಂತ ಸಂಗ್ರಹಿಸಿರುವ ಸಹಿಗಳನ್ನು ಇದೇ 9 ರಂದು ದೆಹಲಿಗೆ ತರಲಾಗುವುದು. ಅದನ್ನು ಎಐಸಿಸಿ ಕ್ರೊಢೀಕರಿಸಿ ಪಕ್ಷದ ವರಿಷ್ಠರು ಚುನಾವಣಾ ಆಯೋಗಕ್ಕೆ ಸಲ್ಲಿಸಲಿದ್ದಾರೆ ಎಂದರು.
ಎಐಸಿಸಿಯ ಮುಖಂಡರು ನಿನ್ನೆ ರಾತ್ರಿ ಕೂಡ ಝೂಮ್‌ ಮೀಟಿಂಗ್‌ನಲ್ಲಿ ಸಭೆ ನಡೆಸಿ, ಮತಗಳ್ಳತನ ಪ್ರಕರಣದಲ್ಲಿ ಕೆಲಸ ಮಾಡದೇ ಇರುವವರನ್ನು ಮುಲಾಜಿಲ್ಲದೆ, ಸಮಯಕೊಡದೆ ವಜಾಗೊಳಿಸಿ ಎಂದಿದ್ದಾರೆ.

ಶಾಸಕರು, ಸಚಿವರ ಬಗ್ಗೆ ಪಕ್ಷಕ್ಕೆ ವರದಿ ನೀಡಿ ಎಂದು ಸೂಚಿಸಲಾಗಿದೆ. ಬ್ಲಾಕ್‌ ಕಾಂಗ್ರೆಸ್‌‍ ಅಧ್ಯಕ್ಷರನ್ನು ವಜಾಗೊಳಿಸಲು ನನಗೆ ಅಧಿಕಾರವಿದೆ, ಕ್ರಮತೆಗೆದುಕೊಳ್ಳುತ್ತೇನೆ. ಕೆಲವು ಶಾಸಕರು ಕೆಲಸ ಮಾಡಿಲ್ಲ, ಅವರ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಲಾಗುವುದು. ಅನಂತರವೂ ಎಚ್ಚೆತ್ತುಕೊಳ್ಳದೇ ಹೋದರೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

ಕರ್ನಾಟಕದಲ್ಲಿ ಇಲ್ಲಿವರೆಗೂ ಸುಮಾರು 80 ಲಕ್ಷ ಸಹಿ ಸಂಗ್ರಹವಾಗಿದೆ. ಚುನಾವಣಾ ಆಯೋಗ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರು ದೇವರಿದ್ದಂತೆ. ಅವರಿಗೆ ವಿಷಯ ತಿಳಿಸುತ್ತೇವೆ ಎಂದರು.ಬೆಂಗಳೂರು ಗ್ರಾಮಾಂತರ ಲೋಕಾಸಭಾ ಕ್ಷೇತ್ರಕ್ಕೆ ಒಳಪಡುವ ಕನಕಪುರ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಏನಾಗಿದೆ ಎಂದು ಗೊತ್ತಿದೆ. ಸೋಲಾಗಿರುವುದರಿಂದ ಆ ಕ್ಷೇತ್ರದ ಬಗ್ಗೆ ಚರ್ಚೆ ಮಾಡುವುದು ಸೂಕ್ತವಲ್ಲ, ಕೆಲವು ಕಡೆ ಬೂತ್‌ ಏಜೆಂಟರ್‌ಗಳೇ ಇರಲಿಲ್ಲ ಎಂದರು.
ಕರ್ನಾಟಕವಷ್ಟೇ ಅಲ್ಲ, ಮಹಾರಾಷ್ಟ್ರ, ಹರಿಯಾಣ ಬೇರೆ ಬೇರೆ ರಾಜ್ಯಗಳಲ್ಲೂ ಮತಗಳ್ಳತನವಾಗಿದೆ. ಒಂದೊಂದೇ ಕ್ಷೇತ್ರಗಳಿಂದಲೂ ಮಾಹಿತಿಯನ್ನು ತಂದುಕೊಡು ತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾವೇರಿ ನದಿ ವಿವಾದಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ಪೀಠ ಸ್ಥಾಪಿಸುವುದಾಗಿ ಸುಪ್ರೀಂಕೋರ್ಟ್‌ ಹೇಳಿದೆ. ಅದಕ್ಕಾಗಿ ಗುರುವಾರ ಸಮಯ ನೀಡಲಾಗಿದೆ. ಕರ್ನಾಟಕಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

ಸರಕಾರಿ ಸ್ವತ್ತುಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳ ಚಟವಟಿಕೆಗಳು ನಡೆಯಬೇಕಾದರೆ ಅನುಮತಿ ಪಡೆಯಬೇಕೆಂದು ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು. ಹಿಂದಿನ ಜಗದೀಶ್‌ಶೆಟ್ಟರ್‌ ಅವರ ಸರ್ಕಾರದ ಆದೇಶವನ್ನೇ ಪುನರ್‌ ಜಾರಿಗೊಳಿಸಿದ್ದೇವೆ. ಎಲ್ಲಿಯೂ ಆರ್‌ಎಸ್‌‍ಎಸ್‌‍ ಹೆಸರನ್ನು ಉಲ್ಲೇಖಿಸಿಲ್ಲ. ಈ ವಿಚಾರವಾಗಿ ಹೈಕೋರ್ಟ್‌ ತೀರ್ಪಿನಿಂದ ಸರ್ಕಾರಕ್ಕೆ ಹಿನ್ನೆಡೆಯಾಗಿದೆ ಎಂದು ಭಾವಿಸಬೇಕಿಲ್ಲ. ಕಾನೂನು ತಜ್ಞರ ತಂಡ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.

ಚಿಲ್ಲರೆ ಕೇಳುವ ಹಾಗೂ ಲಗ್ನ ಪತ್ರಿಕೆ ನೀಡುವ ನೆಪದಲ್ಲಿ ಎರಡು ಕಡೆ ದರೋಡೆ

ಬೆಂಗಳೂರು,ನ.6-ಚಿಲ್ಲರೆ ಕೇಳುವ ನೆಪದಲ್ಲಿ ಹಾಲಿನ ವ್ಯಾಪಾರಿಯ ಗಮನ ಸೆಳೆದು ಹಣ ಎಗರಿಸಿ ಪರಾರಿಯಾಗಿದ್ದ ಆರೋಪಿಯನ್ನು ಸುಬ್ರಹಣ್ಯನಗರ ಠಾಣೆ ಪೊಲೀಸರು ಬಂಧಿಸಿ 20 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ. ಮನೆಗಳಿಗೆ ಹಾಗೂ ಅಂಗಡಿಗಳಿಗೆ ಹಾಲನ್ನು ಮಾರಾಟ ಮಾಡುವ ವ್ಯಾಪಾರಿ ಹನುಮಂತಯ್ಯ ಎಂಬುವರು ಮಾರಾಟದಿಂದ ಬಂದಿದ್ದ 20 ಸಾವಿರ ಹಣವನ್ನು ಜೇಬಿನಲ್ಲಿಟ್ಟುಕೊಂಡು ಸುಬ್ರಹಣ್ಯನಗರದ ಬ್ಯಾಂಕ್‌ವೊಂದರ ಬಳಿ ಆಟೋಗಾಗಿ ಕಾಯುತ್ತಿದ್ದರು.

ಆ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ದರೋಡೆಕೋರ ಬಂದು 500 ರೂ.ಗೆ ಚಿಲ್ಲರೆ ಕೊಡಿ ಎಂದು ಕೇಳಿದ್ದಾನೆ. ಆಗ ಹಾಲಿನ ವ್ಯಾಪಾರಿ ಜೈಲಿನಲ್ಲಿದ್ದ 20 ಸಾವಿರ ಹಣವಿದ್ದ ಕಂತೆಯನ್ನು ತೆಗೆದು ಚಿಲ್ಲರೆ ಕೊಡುತ್ತಿದ್ದಾಗ, ದುಡ್ಡನ್ನು ಹೀಗೆ ಇಟ್ಟಿದ್ದೀರಲಾ ಸರಿಯಾಗಿ ಜೋಡಿಸಿಕೊಡುತ್ತೇನೆ ಎಂದು ಹೇಳಿ ನೋಟಿನ ಕಂತೆಯನ್ನು ಪಡೆದುಕೊಂಡು ಜೋಡಿಸುವ ರೀತಿ ನಟಿಸಿ ಅವರ ಗಮನ ಬೇರೆಡೆ ಸೆಳೆದು ಹಣದೊಂದಿಗೆ ಪರಾರಿಯಾಗಿದ್ದಾನೆ.
ಸಹಾಯಕ್ಕಾಗಿ ಹಾಲಿನ ವ್ಯಾಪಾರಿ ಕೂಗಿಕೊಳ್ಳುವಷ್ಟರಲ್ಲಿ ದರೋಡೆಕೋರ ಕಣರೆಯಾಗಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಘಟನಾ ಸ್ಥಳದಲ್ಲಿನ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿ ದ್ವಿಚಕ್ರ ವಾಹನದ ನಂಬರ್‌ ಪತ್ತೆಹಚ್ಚಿ ಆರೋಪಿ ಮೊಹಮದ್‌ ಸಿಖಂದರ್‌(52) ಎಂಬಾತನನ್ನು ಪಾದರಾಯನಪುರದಲ್ಲಿ ಬಂಧಿಸಿ 20 ಸಾವಿರ ಹಣವನ್ನು ವಶಕ್ಕೆ ಪಡೆದುಕೊಂಡು, ಠಾಣೆಗೆ ಕರೆದೊಯ್ದು ನೋಟೀಸ್‌‍ ಜಾರಿ ಮಾಡಿ ಕಳುಹಿಸಿದ್ದಾರೆ. ಈ ಪ್ರಕರಣವನ್ನು ಇನ್‌ಸ್ಪೆಕ್ಟರ್‌ ಸುರೇಶ್‌ ಹಾಗೂ ಸಿಬ್ಬಂದಿ ತಂಡ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.


ಲಗ್ನಪತ್ರಿಕೆ ನೀಡುವ ನೆಪದಲ್ಲಿ ಬಂದು ಚಿನ್ನಾಭರಣ ದರೋಡೆ..
ಆನೇಕಲ್‌,ನ.6- ಲಗ್ನಪತ್ರಿಕೆ ನೀಡುವ ನೆಪದಲ್ಲಿ ಬಂದ ಮಹಿಳೆಯೊಬ್ಬಳು ಒಂಟಿ ಮನೆ ಒಡತಿಗೆ ಕತ್ತಿ ಹಿಡಿದು ಬೆದರಿಸಿ, ಮತ್ತೊಬ್ಬನೊಂದಿಗೆ ಸೇರಿಕೊಂಡು ಚಿನ್ನಾಭರಣ ದರೋಡೆ ಮಾಡಿರುವ ಘಟನೆ ತಾಲ್ಲೂಕಿನ ನೆರಳೂರು ಗ್ರಾಮದಲ್ಲಿ ನಡೆದಿದೆ.

ನೆರಳೂರು ಗ್ರಾಮದ ಹೊರವಲಯದಲ್ಲಿ ವಾಸವಾಗಿರುವ ನಾಗವೇಣಿ ರವಿಕುಮಾರ್‌ ಎಂಬುವರ ಮನೆಗೆ ನಿನ್ನೆ ಮಧ್ಯಾಹ್ನ 2.30ರ ಸುಮಾರಿನಲ್ಲಿ ಅಪರಿಚಿತ ಮಹಿಳೆಯೊಬ್ಬಳು ಆಗಮಿಸಿ ಬಾಗಿಲು ಬಡಿದು, ಲಗ್ನಪತ್ರಿಕೆ ನೀಡಬೇಕು ಎಂದು ಹೇಳಿದ್ದಾಳೆ.

ದೂರದ ಸಂಬಂಧಿಗಳಿರಬಹುದು ಎಂದು ಭಾವಿಸಿದ ಮನೆಯೊಡತಿ ನಾಗವೇಣಿ ಬಾಗಿಲು ತೆರೆದು ಆಕೆಯನ್ನು ಒಳಗೆ ಆಹ್ವಾನಿಸಿದ್ದಾರೆ. ಮನೆಯೊಳಗೆ ಬಂದ ಆಕೆ ಕುರ್ಚಿಯ ಮೇಲೆ ಕುಳಿತುಕೊಂಡು ಕುಡಿಯಲು ನೀರು ಕೇಳಿದ್ದಾಳೆ. ನಾಗವೇಣಿ ಅವರು ನೀರು ತರಲು ಅಡುಗೆ ಮನೆಗೆ ತೆರಳುತ್ತಿದ್ದಾಗಲೇ, ಆಕೆ ದಿಢೀರನೆ ಎದ್ದು ಹಿಂಬಾಲಿಸಿಕೊಂಡು ಹೋಗಿ ನಾಗವೇಣಿಯ ಬಾಯಿಯನ್ನು ಭದ್ರವಾಗಿ ಮುಚ್ಚಿ ಕಿರುಚದಂತೆ ಕುತ್ತಿಗೆಗೆ ಕತ್ತಿ ಹಿಡಿದು ಬೆದರಿಸಿದ್ದಾಳೆ.

ಬಳಿಕ ಕೆಲವೇ ನಿಮಿಷಗಳಲ್ಲಿ ಮುಸುಕುಧಾರಿಯೊಬ್ಬ ಮನೆಯೊಳಗೆ ಪ್ರವೇಶಿಸಿದ್ದಾನೆ. ಆನಂತರ ಇಬ್ಬರೂ ಸೇರಿಕೊಂಡು ಮನೆಯ ಒಡತಿಯನ್ನು ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ, ಕುರ್ಚಿಯಲ್ಲಿ ಕೂರಿಸಿ ಅವರ ಕೈಗಳನ್ನು ವೇಲಿನಿಂದ ಬಿಗಿದು ಕಟ್ಟಿಹಾಕಿದ್ದಾರೆ.
ಮನೆಯಲ್ಲಿರುವ ಚಿನ್ನಾಭರಣಗಳು ಎಲ್ಲೆಲ್ಲಿವೆ ಹೇಳು. ಇಲ್ಲದಿದ್ದರೆ ನಿನ್ನನ್ನು ಕೊಲ್ಲುತ್ತೇವೆ ಎಂದು ಕುತ್ತಿಗೆಗೆ ಚಾಕು ಒತ್ತಿ ಹಿಡಿದು ಬೆದರಿಕೆ ಹಾಕಿದ್ದಾರೆ. ಜೀವಭಯದಿಂದ ಹೆದರಿದ ನಾಗವೇಣಿ ಅವರು ಆಭರಣಗಳಿರುವ ಬೀರುಗಳ (ಅಲ್ಮೇರಾಗಳ) ಸ್ಥಳ ಮತ್ತು ಬೀಗದ ಕೀಗಳಿರುವ ಜಾಗವನ್ನು ತಿಳಿಸಿದ್ದಾರೆ.

ಆಗ ಇವರಿಬ್ಬರೂ ಕೈಗೆ ಸಿಕ್ಕ ಎಲ್ಲಾ ಚಿನ್ನಾಭರಣಗಳನ್ನು ದೋಚಿ ಹೊರಬಾಗಿಲಿನ ಚಿಲುಕ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಕೆಲ ನಿಮಿಷದ ಬಳಿಕ ಕೈಗಳನ್ನು ಬಿಡಿಸಿಕೊಂಡು ಹೊರಗೆ ಹೋಗಿ ಸಹಾಯಕ್ಕೆ ಕೂಗಿಕೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಮೋಹನ್‌ಕುಮಾರ್‌ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಅತ್ತಿಬೆಲೆ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ತಂಡ ರಚನೆ:
ಆರೋಪಿಗಳ ಬಂಧನಕ್ಕಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡು ಹಲವು ಮಾಹಿತಿಗಳನ್ನು ಕಲೆ ಹಾಕುತ್ತಿವೆ.

ಪೊಲೀಸರಿಗೆ ಸವಾಲಾಗಿದ್ದ ನಟೋರಿಯಸ್‌‍ ಕಳ್ಳನ ರೋಚಕ ಕಥೆ

ಬೆಂಗಳೂರು,ನ.6- ಐಷಾರಾಮಿ ಮನೆಗಳಲ್ಲಿ ಕಳ್ಳತನ ಮಾಡಿದ ಹಣ, ಆಭರಣಗಳಲ್ಲಿ ಸ್ವಲ್ಪ ಹುಂಡಿಗೂ ಹಾಕಿ, ಮನೆಗೂ ಕೊಟ್ಟು ಉಳಿದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ ನಟೋರಿಯಸ್‌‍ ಕಳ್ಳನ ಕಥೆಯೇ ರೋಚಕ.

ಐದು ಜಿಲ್ಲೆಗಳ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್‌‍ ಕಳ್ಳ ಅಸ್ಲಾಂ ಪಾಷ 20 ವರ್ಷಗಳಿಂದಲೂ ಈ ವೃತ್ತಿಯಲ್ಲೇ ತೊಡಗಿದ್ದು, ಇದುವರೆಗೂ ಮಾಡಿರುವುದು 150ಕ್ಕೂ ಹೆಚ್ಚು ಕಳ್ಳತನ.

ಈತನ ತಂದೆತಾಯಿಗೆ 7 ಮಂದಿ ಮಕ್ಕಳು. ಆ ಪೈಕಿ ಮೂವರು ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಆರೋಪಿ ಅಸ್ಲಾಂ ಕಳ್ಳತನ ಮಾಡಿದ ಹಣ ವನ್ನು ಕುಟುಂಬಕ್ಕೂ ಸ್ವಲ್ಪ ಕೊಡುತ್ತಿದ್ದನಂತೆ. ಆರೋಪಿ ಹಗಲಿನ ಸಮಯದಲ್ಲಿ ಬೀಗ ಹಾಕಿರುವ ಮನೆಗಳನ್ನು ಹಾಗೂ ಐಷಾರಾಮಿ ಮನೆಗಳನ್ನು ಗುರುತಿಸುತ್ತಿದ್ದನು. ರಾತ್ರಿಯಾಗುತ್ತಿದ್ದಂತೆ ಆ ಮನೆಗಳಲ್ಲಿ ಕೈಚಳಕ ತೋರಿಸಿ ಹಣ, ಆಭರಣಗಳನ್ನು ಕಳ್ಳತನ ಮಾಡಿಕೊಂಡು ಬೇರೆ ಜಿಲ್ಲೆಗಳಿಗೆ ಪರಾರಿಯಾಗುತ್ತಿದ್ದನು.

ತದನಂತರದಲ್ಲಿ ಆ ಜಿಲ್ಲೆಗಳಲ್ಲಿ ಕಳ್ಳತನ ಮಾಡಿ ಮತ್ತೆ ವಾಪಸ್‌‍ ಬೆಂಗಳೂರು ಹಾಗೂ ಇನ್ನಿತರ ಕಡೆಗಳಲ್ಲಿ ತಲೆಮರೆಸಿಕೊಳ್ಳುತ್ತಿದ್ದನು. ಹಾಗಾಗಿಯೇ ಆರೋಪಿ ಜಾಗ ಬದಲಿಸುತ್ತಿದ್ದರಿಂದ ಪೊಲೀಸರಿಗೆ ಆತನನ್ನು ಬಂಧಿಸುವುದು ಸವಾಲಾಗಿತ್ತು. ಆರೋಪಿಯು ಕಳ್ಳತನ ಮಾಡಿದ ಜಿಲ್ಲೆಗಳಿಗೆ ಒಂದು ವರ್ಷ ಸುಳಿಯುತ್ತಿರಲಿಲ್ಲ. ಆರೋಪಿಯ ಮತ್ತೊಂದು ವಿಶೇಷವೆಂದರೆ ಕಳ್ಳತನ ಮಾಡಿದ ನಂತರ ಪ್ರತಿ ಬಾರಿ ಅಜೀರ್‌ ದರ್ಗಾಕ್ಕೆ ಹೋಗಿ ಸ್ವಲ್ಪ ಹಣ, ಆಭರಣಗಳನ್ನು ಹುಂಡಿಗೆ ಹಾಕಿ ಪ್ರಾರ್ಥನೆ ಸಲ್ಲಿಸಿ ಉಳಿದ ಹಣದಲ್ಲಿ ಮೋಜು-ಮಸ್ತಿಗಾಗಿ ಗೋವಾಗೆ ಹೋಗುತ್ತಿದ್ದನಂತೆ.

ವಿದ್ಯಾರಣ್ಯಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಮನೆಯ ಕಿಟಕಿಯಲ್ಲಿ ಕೈ ತೂರಿಸಿ ಮಹಿಳೆಯ ಸರ ಅಪಹರಣ ಮಾಡಿದ್ದ ಪ್ರಕರಣದಲ್ಲಿ ಆರೋಪಿ ಸಿಕ್ಕಿಬಿದ್ದಿದ್ದು, ಈತನ ವಿಚಾರಣೆ ವೇಳೆ ಹಲವು ಮಾಹಿತಿಗಳು ಬೆಳಕಿಗೆ ಬಂದಿವೆ. ಆರೋಪಿಯು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳ ಪೊಲೀಸರಿಗೆ ಬೇಕಾಗಿದ್ದನು. ಇದೀಗ ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.

ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ವಿದೇಶಿ ಡ್ರಗ್ಸ್ ಜಾಲ..!

ಬೆಂಗಳೂರು, ನ.6- ಪೊಲೀಸರು ಎಷ್ಟೇ ಹದ್ದಿನ ಕಣ್ಣಿಟ್ಟರೂ ಸಹ ಮಾದಕ ವಸ್ತುಗಳ ಸಾಗಣೆ ಮತ್ತು ಮಾರಾಟ ನಿರಂತರವಾಗಿ ರಾಜಧಾನಿ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ನಡೆಯುತ್ತಲೇ ಇದೆ. ಕರ್ನಾಟಕ ರಾಜ್ಯವನ್ನು ಮಾದಕ ವಸ್ತುಗಳಿಂದ ಮುಕ್ತ ಮಾಡಲು ಬೆಂಗಳೂರು ನಗರ ಪೊಲೀಸರು ಸೇರಿದಂತೆ ರಾಜ್ಯ ಪೊಲೀಸರು ಪಣ ತೊಟ್ಟಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್‌‍ ಮಹಾ ನಿರ್ದೇಶಕರ ದರ್ಜೆಯ ಅಧಿಕಾರಿಗಳ ನೇತೃತ್ವದಲ್ಲಿ ಮಾದಕ ವಸ್ತು ನಿಗ್ರಹ ಪಡೆಯನ್ನು ಸಹ ಸರ್ಕಾರ ರಚಿಸಿ ದಂಧೆಕೋರರ ವಿರುದ್ಧ
ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ವಿವಿಧ ಮಾದರಿಯ ಮಾದಕ ವಸ್ತುಗಳು ಬೆಂಗಳೂರು ನಗರಕ್ಕೆ ನೆರೆಯ ರಾಜ್ಯಗಳಲ್ಲದೆ ವಿದೇಶಗಳಿಂದಲೂ ಬರುತ್ತಿವೆ. ಇವುಗಳ ಸಾಗಾಟ ಮತ್ತು ಮಾರಾಟ ಬಹಳ ಗೌಪ್ಯವಾಗಿರುತ್ತದೆ.

ಬೆಂಗಳೂರು ನಗರ ಪೊಲೀಸರು ಈ ವರ್ಷದ ಜನವರಿಯಿಂದ ಅಕ್ಟೋಬರ್‌ ಮೊದಲನೆ ವಾರದವರೆಗೂ 711 ಪ್ರಕರಣಗಳಲ್ಲಿ ಒಟ್ಟು 1048 ಮಂದಿ ಆರೋಪಿಗಳನ್ನು ಬಂಧಿಸಿ 81.21 ಕೋಟಿ ರೂ. ಬೆಲೆಯ 1486.58 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳಲ್ಲಿ 35 ಮಂದಿ ವಿದೇಶಿಯರು ಸೇರಿದ್ದಾರೆ. ಇವರುಗಳಲ್ಲಿ ನೈಜೀರಿಯಾ ಪ್ರಜೆಗಳು ಹೆಚ್ಚು ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ವಿದ್ಯಾಭ್ಯಾಸ, ಪ್ರವಾಸ, ವೈದ್ಯಕೀಯ ಹೀಗೆ ಮುಂತಾದ ವೀಸಾಗಳ ಮೇಲೆ ಬೆಂಗಳೂರು ನಗರಕ್ಕೆ ಬಂದ ಕೆಲವು ವಿದೇಶಿಗರು ವೀಸಾ ಅವಧಿ ಮುಗಿದಿದ್ದರೂ ಸಹ ತಮ ತಮ ದೇಶಗಳಿಗೆ ತೆರಳದೆ ಇಲ್ಲಿ ಉಳಿದುಕೊಳ್ಳುತ್ತಾರೆ. ಈ ರೀತಿ ಅಕ್ರಮವಾಗಿ ನಗರದಲ್ಲಿ ನೆಲೆಸಿರುವ ಕೆಲವು ವಿದೇಶಿಗರು ಮಾದಕ ವಸ್ತು ಸಾಗಾಟ ಮತ್ತು ಮಾರಾಟ ದಂಧೆಯಲ್ಲಿ ತೊಡಗಿಕೊಂಡು ಸುಲಭವಾಗಿ ಹಣ ಸಂಪಾದಿಸಿ ವಿಲಾಸಿ ಜೀವನ ನಡೆಸುತ್ತಿದ್ದಾರೆ.

ಇಂತಹ ಬಹುತೇಕ ಆರೋಪಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲೇ ಬಾಡಿಗೆ ಮನೆಗಳನ್ನು ಮಾಡಿಕೊಂಡು ವಾಸಿಸುತ್ತಿದ್ದಾರೆ. ಬೆಂಗಳೂರು ನಗರ ಪೊಲೀಸರು ಮಾಹಿತಿ ಸಂಗ್ರಹಿಸಿ ಆಗಾಗ್ಗೆ ಇಂತಹವರುಗಳ ಮನೆಗಳ ಮೇಲೆ ದಾಳಿ ಮಾಡಿ ಬಂಧಿಸುತ್ತಿದ್ದಾರೆ. ಪಾಸ್‌‍ಪೋರ್ಟ್‌, ವೀಸಾ ಹಾಗೂ ಇನ್ನಿತರ ದಾಖಲೆಗಳ ಪರಿಶೀಲನೆ, ವೀಸಾ ಅವಧಿ ಮುಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಆದರೂ ಸಹ ವಿದೇಶಿ ಡ್ರಗ್‌್ಸ ದಂಧೆಕೋರರ ಸಂಖ್ಯೆ ಕಡಿಮೆಯಾಗುತ್ತಿಲ್ಲ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿಗೆ ವಿದೇಶಗಳಿಂದ ನಗರ ಮತ್ತು ರಾಜ್ಯಕ್ಕೆ ಬರುವ ಎಲ್ಲಾ ಪಾರ್ಸಲ್‌ಗಳ ಮೇಲೂ ಸಹ ಬೆಂಗಳೂರು ನಗರ ಪೊಲೀಸರು ನಿಗಾ ವಹಿಸುತ್ತಿದ್ದಾರೆ.

ಬಸ್‌‍, ರೈಲ್ವೆ ಹಾಗೂ ವಿಮಾನ ನಿಲ್ದಾಣಗಳಲ್ಲೂ ಸಹ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಸಹ ವಿದೇಶಗಳಿಂದ ನಗರಕ್ಕೆ ಮಾದಕ ವಸ್ತುಗಳು ಬರುತ್ತಿರುವುದು ನಿಂತಿಲ್ಲ. ರಾಜ್ಯ ಸರ್ಕಾರದ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಕೇಂದ್ರ ಗೃಹ ಮತ್ತು ವಿದೇಶಾಂಗ ಖಾತೆ ಸಚಿವರುಗಳನ್ನು ಭೇಟಿ ಮಾಡಿ ವಿದೇಶಗಳಿಂದ ಭಾರತ ದೇಶಕ್ಕೆ ನಿರಂತರವಾಗಿ ಬರುತ್ತಿರುವ ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ತಡೆಗಟ್ಟುವಂತೆ ಮನವಿ ಮಾಡಿ ಒತ್ತಾಯಿಸಬೇಕು.

ವೀಸಾ ಅವಧಿ ಮುಗಿದು ಅಕ್ರಮವಾಗಿ ನಗರದಲ್ಲಿ ನೆಲೆಸಿರುವ ವಿದೇಶಿಗರನ್ನು ಎಫ್‌ಆರ್‌ಆರ್‌ಒ ಅಧಿಕಾರಿಗಳು ಜತೆ ಸೇರಿ ಬೆಂಗಳೂರು ನಗರ ಪೊಲೀಸರು ಪತ್ತೆ ಹಚ್ಚಿ ಹೊರಹಾಕದಿದ್ದರೆ ರಾಜಧಾನಿ ಬೆಂಗಳೂರು ಮಾದಕ ವಸ್ತು ರಾಜಧಾನಿಯಾಗುತ್ತದೆ. ಎಚ್ಚರ..! ಎಚ್ಚರ..!

ಮತ್ತಷ್ಟು ತೀವ್ರಗೊಂಡ ರೈತರ ಪ್ರತಿಭಟನೆ, 8ನೇ ದಿನಕ್ಕೆ ಕಾಲಿಟ್ಟ ಕಿಚ್ಚು

ಬೆಂಗಳೂರು,ನ.6-ಅತ್ತ ಹಾವು ಸಾಯಲಿಲ್ಲ, ಇತ್ತ ಕೋಲು ಮುರಿಯಲಿಲ್ಲ ಎಂಬಂತಾಗಿದೆ ಕಬ್ಬುಬೆಳೆಗಾರರ ಹೋರಾಟ. ಸರ್ಕಾರ ತಮ ಬೆಳೆಗೆ ಸೂಕ್ತವಾದ ಬೆಲೆ ನಿಗಧಿ ಮಾಡುವಂತೆ ನಡೆಸುತ್ತಿರುವ ರೈತರ ಹೋರಾಟ 8ನೇ ದಿನಕ್ಕೆ ಕಾಲಿಟ್ಟಿದ್ದರೂ, ಸರ್ಕಾರ ಮಾತ್ರ ಕೇಂದ್ರದ ಕಡೆ ಕೈ ತೋರಿಸಿ ತನ್ನ ಜವಬ್ದಾರಿಯಿಂದ ನುಣಿಚಿಕೊಳ್ಳುವ ಚಾಣಕ್ಷತನ ಮೆರದಿದೆ.

ಪ್ರತಿ ಟನ್‌ ಕಬ್ಬಿಗೆ 3,500 ರೂ. ನಿಗಧಿ ಮಾಡಬೇಕೆಂದು ಪಟ್ಟು ಹಿಡಿದಿರುವ ಕಬ್ಬು ಬೆಳೆಗಾರರು, ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದು, 8ನೇ ದಿನಕ್ಕೆ ಕಾಲಿಟ್ಟಿದೆ.

ಇದರ ನಡುವೆಯೇ ಸಚಿವ ಸಂಪುಟ ಸಭೆ ಇಂದು ನಡೆಯಲಿದ್ದು, ಸರ್ಕಾರ ಬೆಲೆ ನಿಗಧಿ ಮಾಡುವ ಸಾಧ್ಯತೆ ಇದೆ. ಸಂಜೆಯೊಳಗೆ ರೈತರ ಬೇಡಿಕೆಗೆ ಸರ್ಕಾರ ಒಪ್ಪಿಕೊಳ್ಳದಿದ್ದರೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.

ರೈತರ ಕಿಚ್ಚು ಹೆಚ್ಚಾಗುತ್ತಿದ್ದಂತೆಯೇ ಸರ್ಕಾರ ಹಿರಿಯ ಸಚಿವ ಹೆಚ್‌.ಕೆ.ಪಾಟೀಲ್‌ರನ್ನು ಸಂಧಾನಕ್ಕೆ ಕಳುಹಿಸಿದ್ದು ಮಾತುಕತೆ ವಿಫಲವಾಗಿದೆ. ಹಲವು ಸಂಘಟನೆಗಳು ರೈತರ ಹೋರಾಟಕ್ಕೆ ಬೆಂಬಲ ನೀಡಿವೆ. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಭಟನೆಯ ಆಖಾಡಕ್ಕಿಳಿದ ನಂತರ ರೈತರ ಹೋರಾಟ ತೀವ್ರಗತಿ ಪಡೆದುಕೊಂಡಿದೆ.

ಬೆಳಗಾವಿ ಹಾಗೂ ವಿಜಯಪುರ ಕಬ್ಬು ಹೋರಾಟಗಾರರು ಸಚಿವರ ಮನವಿಗೆ ಮಣೆ ಹಾಕದೇ ಸಂಜೆವರೆಗಿನ ಅಂತಿಮ ಗಡುವು ಕೊಟ್ಟಿದ್ದಾರೆ. ಸಂಜೆಯೊಳಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವಿಗೆ ಬರದಿದ್ದರೆ ಪಂಜಾಬ್‌ ಮಾದರಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಿಂದ ಆರಂಭವಾದ ಹೋರಾಟ ರಾಜ್ಯದ ಎಲ್ಲ ಭಾಗಗಳಿಗೂ ವ್ಯಾಪಿಸಿದೆ.

ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ರೈತರು ರಸ್ತೆ ತಡೆ, ಧರಣಿ, ರ್ಯಾಲಿ ಮತ್ತು ಪ್ರತಿಭಟನೆಗಳ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬೆಳಗಾವಿಯ ಪ್ರಮುಖ ಹೆದ್ದಾರಿಗಳು ಹಾಗೂ ನಗರ ಪ್ರದೇಶಗಳಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಪ್ರತಿಭಟನೆಗಳ ತೀವ್ರತೆ ಹೆಚ್ಚುತ್ತಿರುವಂತೆ ಹಾಲು, ಹಣ್ಣು, ತರಕಾರಿ ಪೂರೈಕೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಸಣ್ಣಪುಟ್ಟ ವ್ಯಾಪಾರ ಮಳಿಗೆಗಳು ಮುಚ್ಚಲ್ಪಟ್ಟಿದ್ದು, ಹಳ್ಳಿಗಳಿಂದ ನಗರಗಳಿಗೆ ಸರಕು ಸಾಗಣೆ ನಿಂತು ಹೋಗಿದೆ. ಹಲವೆಡೆ ಸಭೆ, ಮದುವೆ, ಸಾರ್ವಜನಿಕ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ.

ಕಳೆದ ಮೂರು ದಿನಗಳಿಂದ ಅನೇಕ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಓದು ಹಾಳಾಗುತ್ತಿರುವಂತೆಯೇ, ದಿನಗೂಲಿ ಆದಾಯದ ಮೇಲೆ ಬದುಕುವ ವರ್ಗಕ್ಕೆ ಸಂಕಷ್ಟ ಎದುರಾಗಿದೆ. ರೈತರು ತಮ ಬೇಡಿಕೆಗಳ ಬಗ್ಗೆ ಸರ್ಕಾರದಿಂದ ಸ್ಪಷ್ಟ ಪ್ರತಿಕ್ರಿಯೆ ಬಯಸುತ್ತಿದ್ದರೂ, ಸರ್ಕಾರ ಮೌನ ಕಾಯ್ದುಕೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಹೋರಾಟಗಾರರು ಹಿಂದೆ ಸರಿಯುವ ಸೂಚನೆ ಇಲ್ಲದಿರುವುದರಿಂದ ರಾಜ್ಯದಲ್ಲಿ ಆರ್ಥಿಕ ಅಸ್ತವ್ಯಸ್ತತೆ ಹೆಚ್ಚುವ ಸಾಧ್ಯತೆಗಳಿವೆ.

ಈ ಹೋರಾಟ ಮುಂದುವರಿದರೆ ರಾಜ್ಯದ ಕೃಷಿ ವಲಯದ ಜೊತೆಗೆ ಸಾರಿಗೆ, ವಾಣಿಜ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೂ ತೀವ್ರ ನಷ್ಟ ಸಂಭವಿಸಬಹುದು. ಸರ್ಕಾರ ತಕ್ಷಣ ಮಧ್ಯಸ್ಥಿಕೆ ವಹಿಸಿ ರೈತರ ಬೇಡಿಕೆಗಳಿಗೆ ತುರ್ತು ಪರಿಹಾರ ನೀಡದಿದ್ದರೆ, ಆರ್ಥಿಕ ಸಂಕಷ್ಟ ರಾಜ್ಯದ ಎಲ್ಲ ವರ್ಗಗಳಿಗೂ ತಟ್ಟುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಸರ್ಕಾರ ಮತ್ತು ರೈತರ ಮಧ್ಯೆ ಮಾತುಕತೆ ನಡೆಯದಿದ್ದರೆ, ಹೋರಾಟ ಇನ್ನಷ್ಟು ಉಗ್ರಗೊಳ್ಳುವ ಲಕ್ಷಣಗಳಿವೆ. ಜನಜೀವನ ಈಗಾಗಲೇ ಅಸ್ತವ್ಯಸ್ತಗೊಂಡಿದೆ. ಒಟ್ಟಾರೆಯಾಗಿ ಈ ಬಿಕ್ಕಟ್ಟಿನ ಹೊರೆ ಯಾರು ನಿಭಾಯಿಸಲಿದ್ದಾರೆ? ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಈ ಕುರಿತು ಮಾತನಾಡಿರುವ ರೈತ ಮುಖಂಡ ಶಶಿಕಾಂತ ಗುರೂಜಿ, ಕಳೆದ ಏಳು ದಿನಗಳಿಂದ ನಮ ಹೋರಾಟದ ಫಲವಾಗಿ ಇಂದು ಸಚಿವರು ಕಬ್ಬಿಗೆ ಸೂಕ್ತವಾದ ಬೆಲೆ ನಿಗದಿಪಡಿಸುತ್ತಾರೆಂದು ತಿಳಿದುಬಂದಿದೆ. ಆದರೆ ಸಚಿವರು ಎಲ್ಲಾ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತೇನೆ, ನಾನು ಕಬ್ಬಿಗೆ ಬೆಲೆ ನಿಗಧಿಪಡಿಸುವುದಿಲ್ಲ ಎಂದು ಹೇಳಿದ್ದಾರೆ.

ಗುರುವಾರ ರಾತ್ರಿ 8 ಗಂಟೆವರೆಗೆ ಸರ್ಕಾರಕ್ಕೆ ಕಾಲಾವಕಾಶ ನೀಡಿದ್ದೇವೆ. ಒಂದು ವೇಳೆ ನಮಗೆ ಸೂಕ್ತ ಬೆಲೆ ನೀಡದಿದ್ದರೆ, ಶುಕ್ರವಾರ ರಾಜ್ಯಾದ್ಯಂತ ಸುಮಾರು 50 ಲಕ್ಷ ಕಬ್ಬು ಬೆಳೆಗಾರರು ಆಯಾ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್‌ ಮಾಡಿ ಹೋರಾಟ ಮುಂದುವರಿಸುತ್ತೇವೆ. ನಮ ಹೋರಾಟ ಮುಂದುವರಿಯುತ್ತದೆ. ನಾವು ಕಬ್ಬಿಗೆ ಸೂಕ್ತ ಬೆಲೆಯನ್ನು ಪಡೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಸಕ್ಕರೆ ಕಾರ್ಖಾನೆಗಳಿಂದ 3,500 ರೂ. ದರ ನಿಗಧಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಕಳೆದ ಭಾನುವಾರ ಪ್ರತಿಭಟನಾ ಸ್ಥಳಕ್ಕಾಗಮಿಸಿದ್ದ ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಎಸ್‌‍ಪಿ ಅವರು ನೇತೃತ್ವದಲ್ಲಿ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಈ ಸಂಧಾನ ಸಭೆ ವಿಫಲವಾಗಿತ್ತು.

ಸರ್ಕಾರದಿಂದ ರೈತರ ನಿರ್ಲಕ್ಷ್ಯ : ಬಿ.ವೈ ವಿಜಯೇಂದ್ರ ಆಕ್ರೋಶ

ಬೆಂಗಳೂರು.ನ.6- ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೂ ರೈತಪರವಾದ ಒಂದೇ ಒಂದು ಯೋಜನೆಯನ್ನೂ ರೂಪಿಸಲಿಲ್ಲ. ನೆರೆ ಸಂಕಷ್ಟಿತರಿಗೆ ಪರಿಹಾರ ನೀಡಲಿಲ್ಲ, ಕನಿಷ್ಠಪಕ್ಷ ರೈತರ ಸಂಕಷ್ಟಗಳನ್ನೂ ಆಲಿಸಲಿಲ್ಲ, ರೈತರನ್ನು ವಿಪರೀತ ತಾತ್ಸಾರದಿಂದ ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಳಿ ನಡೆಸಿದ್ದಾರೆ.

ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ರೈತರೆಂದರೆ ಕಾಂಗ್ರೆಸ್‌‍ ಸರ್ಕಾರಕ್ಕೆ ಅಸಡ್ಡೆಯಾಗಿದೆ. ಸರ್ಕಾರ ರೈತರನ್ನು ಅತ್ಯಂತ ನಿಕೃಷ್ಟವಾಗಿ ಕಾಣುತ್ತಿರುವ ಧೋರಣೆಯಿಂದಾಗಿ ರೈತ ಸಮುದಾಯ ಹತಾಶೆಯ ಹಂಚಿಕೆ ತಲುಪಿದೆ. ರೈತರ ಬದುಕನ್ನು ಹಸನು ಮಾಡುತ್ತೇವೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್‌‍ ಸರ್ಕಾರ, ಅಧಿಕಾರಕ್ಕೆ ಬಂದ ಬಳಿಕ ತಮ ಕುರ್ಚಿ ಕಿತ್ತಾಟದಲ್ಲಿ ಮುಳುಗಿ ಆಡಳಿತ ವ್ಯವಸ್ಥೆಯನ್ನೇ ತುಕ್ಕು ಹಿಡಿಸಿ, ಭ್ರಷ್ಟಾಚಾರದ ಕೂಪವಾಗಿಸಿದ ಪರಿಣಾಮ ರೈತರು ಕಚೇರಿಗಳಿಗೆ ನಿತ್ಯವೂ ಅಲೆಯುವ ದುಸ್ಥಿತಿ ಬಂದೊದಗಿದೆ ಎಂದು ಕಿಡಿಕಾರಿದ್ದಾರೆ.

ಸರ್ಕಾರಿ ಕಚೇರಿಗಳಿಗೆ ನಿತ್ಯವೂ ಅಲೆದು ತಮ ಕೆಲಸಗಳಾಗದೇ ಮನನೊಂದು ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಆತಹತ್ಯೆಗೆ ಯತ್ನಿಸಿ ಸಾವಿಗೀಡಾಗಿರುವ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಯ ರೈತ ಮಂಜೇಗೌಡರ ಸಾವು ಆಘಾತ ತಂದಿದೆ. ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನಲ್ಲಿ ಬೆಳೆ ಹಾನಿ ಪರಿಹಾರ ಸಿಗದಿದ್ದಕ್ಕೆ ರೈತ ಸಿದ್ದನಗೌಡ ಹಿರೇಗೌಡ್ರ ಆತಹತ್ಯೆಗೆ ಯತ್ನಿಸಿ ಸಾವುಬದುಕಿನ ನಡುವೆ ಹೋರಾಡುತ್ತಿರುವುದು ದುರ್ದೈವದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ವಿದ್ಯಾನಿಧಿ, ರೈತಶಕ್ತಿ ಯೋಜನೆ, ಕಿಸಾನ್‌ ಸಮಾನ್‌ ನಿಧಿಯನ್ನು ನಿಲ್ಲಿಸಿದೆ. 25 ಸಾವಿರಕ್ಕೆ ಸಿಗುತ್ತಿದ್ದ ಟಿಸಿ ಸಂಪರ್ಕ ಇಂದು ಕನಿಷ್ಠ 3 ಲಕ್ಷ ಬೇಕಾಗಿದೆ. ಇದಕ್ಕಾಗಿ ರೈತರು ಸಾಲ ಮಾಡಬೇಕಾದ ಪರಿಸ್ಥಿತಿಯನ್ನು ಸರ್ಕಾರ ತಂದೊಡ್ಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕೂಡಲೇ ಆತಹತ್ಯೆಗೀಡಾದ ರೈತ ಮಂಜೇಗೌಡ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಿ, ಗದಗ ಜಿಲ್ಲೆಯ ರೈತ ಸಿದ್ದನಗೌಡ ಹಿರೇಗೌಡ್ರರ ಬೆಳೆ ಪರಿಹಾರ ನೀಡಿ, ಅವರ ಚಿಕಿತ್ಸೆಗೆ ಸೂಕ್ತ ನೆರವು ಕಲ್ಪಿಸಲಿ. ಈ ರೀತಿಯ ಘಟನೆಗಳು ಮರುಕಳಿಸದಂತೆ ಅಧಿಕಾರಿ ವರ್ಗಕ್ಕೆ ಸರ್ಕಾರ ಬಿಸಿ ಮುಟ್ಟಿಸುವ ಕೆಲಸಕ್ಕೆ ಮುಂದಾಗಲಿ ಎಂದು ವಿಜಯೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.