ಬೆಂಗಳೂರು,ಆ.12– ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಬೀದಿನಾಯಿಗಳ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂಬ ಗಂಭೀರ ಚರ್ಚೆ ವಿಧಾನಪರಿಷತ್‌ನಲ್ಲಿ ನಡೆಯಿತು. ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಭೋಜೇ ಗೌಡ ಅವರು ವಿಷಯ ಪ್ರಸ್ತಾಪಿಸಿ ಬೆಂಗಳೂರಿನ ಕಬ್ಬನ್‌ಪಾರ್ಕ್, ಲಾಲ್‌ಬಾಗ್, ಹೈಕೋರ್ಟ್ ಸೇರಿದಂತೆ ಮತ್ತಿತರ ಕಡೆ ನಾಯಿಗಳ ಹಾವಳಿ ವಿಪರೀತವಾಗಿದೆ.
ಕೇವಲ ಬೆಂಗಳೂರು ಮಾತ್ರವಲ್ಲದೆ ತುಮಕೂರು , ಚಿಕ್ಕಮಗಳೂರು ಸೇರಿದಂತೆ ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಈ ನಾಯಿಗಳು ಸುಪ್ರೀಂಕೋರ್ಟ್ ನ್ಯಾಯಾಧೀಶರು, ಹೈಕೋರ್ಟ್ ನ್ಯಾಯಾಧೀಶರು, ಶಾಸಕರ ಮಕ್ಕಳಿಗೆ ಕಚ್ಚುವುದಿಲ್ಲ. ಏಕೆಂದರೆ ಇವರೆಲ್ಲರೂ ಕಾರಿನಲ್ಲಿ ಬರುತ್ತಾರೆ ಎಂದರು.
ಬಡವರು, ಆರ್ಥಿಕವಾಗಿ ಹಿಂದುಳಿದವರು ತೀರಾ ಸಂಕಷ್ಟ ಸ್ಥಿತಿಯಲ್ಲಿರುವವರು ಸರ್ಕಾರಿ ಶಾಲೆಗಳಿಗೆ ಹೋಗುವ ಹಾಗೂ ಖಾಸಗಿ ವಾಹನಗಳಲ್ಲಿ ದುಡ್ಡು ಕೊಟ್ಟು ಹೋಗಲು ಸಾಧ್ಯವಿಲ್ಲದವರು ಬೀದಿಯಲ್ಲಿ ನಡೆದುಕೊಂಡು ಹೋಗುವಾಗ ಏಕಾಏಕಿ ಬಂದು ನಾಯಿಗಳು ಕಚ್ಚುತ್ತವೆ ಎಂದು ಸದನದ ಗಮನ ಸೆಳೆದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕಡೆ ಸರ್ಕಾರ ಬಿರಿಯಾನಿ ಭಾಗ್ಯ ಒದಗಿಸಿದೆ. ಇದನ್ನು ತಿಂದ ನಾಯಿಗಳು, ಹಿರಿಯರು, ವಯಸ್ಕರು, ವೃದ್ಧರು, ಶಾಲಾ ಮಕ್ಕಳು ವಾಯುವಿಹಾರ ನಡೆಸುವವರ ಮೇಲೆ ದಾಳಿ ಮಾಡುತ್ತಿವೆ. ಅನೇಕ ಕಡೆ ಸಾವನ್ನಪ್ಪಿರುವ ಪ್ರಕರಣಗಳು ಜರುಗಿವೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸೋಮವಾರವಷ್ಟೇ ದೆಹಲಿಯಲ್ಲಿ ಬೀದಿನಾಯಿಗಳನ್ನು ತತ್‌ಕ್ಷಣವೇ ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಯಾರಾದರೂ ತಡೆಯಲು ಬಂದರೆ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕಾನೂನುಕ್ರಮ ಜರುಗಿಸಬೇಕೆಂದು ಸೂಚನೆ ಕೊಟ್ಟಿದೆ. ನಮ ರಾಜ್ಯದಲ್ಲೂ ಇದು ಏಕೆ ಸಾಧ್ಯವಾಗಿಲ್ಲ ಎಂದು ಭೋಜೇಗೌಡ ಪ್ರಶ್ನೆ ಮಾಡಿದರು.
ಸುಪ್ರೀಂಕೋರ್ಟ್ ಈ ಹಿಂದೆ ವಾಸ್ತವ ಸ್ಥಿತಿ ಅರಿತುಕೊಂಡು ಆದೇಶ ನೀಡಿರಬಹುದು. ಈಗಿನ ವಸ್ತುಸ್ಥಿತಿಯನ್ನು ತಿಳಿಸಿ. ಬೀದಿನಾಯಿಗಳು ನ್ಯಾಯಾಧೀಶರಿಗೂ ಕಚ್ಚಿದರೆ ಏನು ಮಾಡಬೇಕೆಂದು ಪ್ರಶ್ನೆ ಮಾಡಿ. ಇದೇನು ನ್ಯಾಯಾಂಗ ನಿಂದನೆಯಾಗುವುದಿಲ್ಲ. ದೆಹಲಿಯಲ್ಲಿ ಆ ಆದೇಶ ನೀಡಿರುವಾಗ ನಮಲ್ಲಿ ಕೂಡ ಇದು ಏಕೆ ಬರಬಾರದೆಂದು ಕೇಳಿದರು.
ಒಂದು ವೇಳೆ ಪ್ರಾಣಿ ದಯಾಸಂಘದವರು ನಾಯಿಗಳ ಸ್ಥಳಾಂತರಕ್ಕೆ ಅಡ್ಡಿಪಡಿಸಿದರೆ ಅವರ ಮನೆಗೆ ನಾಯಿಗಳನ್ನು ಬಿಟ್ಟು ಬನ್ನಿ. ಇವರು ಪ್ರಾಣಿ ದಯಾಸಂಘದವರಲ್ಲ. ಅದರ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವ ಸಂಘದವರು ಎಂದು ಆಕ್ರೋಶ ವ್ಯಕ್ತಪಡಿಸಿದರು.ಆಗ ಸಚಿವ ರಹೀಮ್ ಖಾನ್ ಅವರು, ಬೀದಿನಾಯಿಗಳ ಉಪಟಳವನ್ನು ತಪ್ಪಿಸಲು ಸರ್ಕಾರ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದೆ. ನಾಯಿಗಳಿಗೆ ಶಸ್ತ್ರ ಚಿಕಿತ್ಸೆ, ಗಾಯಗೊಂಡವರಿಗೆ ಉಚಿತ ಔಷಧಿ ವಿತರಣೆ ಸೇರಿದಂತೆ ಮತ್ತಿತರ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ವಿವರಿಸಿದರು.
ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನಡೆಸಬೇಕಾದರೆ ಕೇರಳದಿಂದ ಬರಬೇಕು. ಸುಪ್ರೀಂಕೋರ್ಟ್ ಆದೇಶವಿರುವುದರಿಂದ ಕೆಲವು ಬಿಗಿಯಾದ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೂ ಸದಸ್ಯರ ಕಳಕಳಿಯನ್ನು ಗಮನದಲ್ಲಿಟ್ಟುಕೊಂಡು ಕಾನೂನು ತಜ್ಞರು ಅಡ್ವೋಕೇಟ್ ಜನರಲ್ ಮತ್ತಿತರರ ಅಭಿಪ್ರಾಯ ಪಡೆದು ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುವುದಾಗಿ ರಹೀಮ್ ಖಾನ್ ತಿಳಿಸಿದರು.