ಬೆಂಗಳೂರು, ನ.17- ಕೆಲಸ ಕೊಟ್ಟಿದ್ದ ಚಿನ್ನಾಭರಣ ವ್ಯಾಪಾರಿಯ ಕಣ್ತಪ್ಪಿಸಿ ಅಂಗಡಿ ಕೀ ಕಳ್ಳತನ ಮಾಡಿ ಇಬ್ಬರು ಸ್ನೇಹಿತರೊಂದಿಗೆ ಸೇರಿಕೊಂಡು ಪುರಾತನ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ರಾಜಸ್ಥಾನದ ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿ 1 ಕೋಟಿ 2 ಲಕ್ಷ ಮೌಲ್ಯದ ಚಿನ್ನಾಭರಣ, 5.50 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನ ಮೂಲದ ಕೇತರಾಮ್, ಈತನ ಸ್ನೇಹಿತ ರಾಕೇಶ್ ಬಂಧಿತ ಆರೋಪಿಗಳು. ಮತ್ತೊಬ್ಬ ತಲೆಮರೆಸಿಕೊಂಡಿದ್ದು, ಈತನ ಪತ್ತೆಕಾರ್ಯ ಮುಂದುವರೆದಿದೆ. ನಗರತ್‍ಪೇಟೆಯ ಕಾಂಚನಾ ಜ್ಯುವೆಲರ್ಸ್ ಅಂಗಡಿ ಮಾಲೀಕರಾದ ಅರವಿಂದ್ ಕುನೂರ್ ತಾಡೆ ಅವರ ಬಳಿ ಆರೋಪಿ ಕೇತರಾಮ್ ಎರಡು ತಿಂಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದನು.
ಆ ಸಂದರ್ಭದಲ್ಲಿ ಮಾಲೀಕನ ನಂಬಿಕೆ-ವಿಶ್ವಾಸ ಗಳಿಸಿ ಅವರ ವ್ಯವಹಾರಗಳನ್ನೆಲ್ಲ ತಿಳಿದುಕೊಂಡಿದ್ದಾನೆ. ಹೇಗಾದರೂ ಮಾಡಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಊರಿಗೆ ಹೋಗಿ ಐಷಾರಾಮಿ ಜೀವನ ನಡೆಸಬಹುದು ಎಂದು ಯೋಚಿಸಿದ್ದಾನೆ. ಈ ನಡುವೆ ದಸರಾ ಹಬ್ಬದ ನಿಮಿತ್ತ ಅರವಿಂದ್‍ಕುಮಾರ್ ಅವರು ಮುಂಬೈಗೆ ತೆರಳುವ ಸಂದರ್ಭದಲ್ಲಿ ಅವರ ಬ್ಯಾಗ್‍ನಲ್ಲಿದ್ದ ಅಂಗಡಿಯ ಬೀಗವನ್ನು ಆರೋಪಿ ಕೇತರಾಮ್ ಕಳವು ಮಾಡಿದ್ದಾನೆ.
ನಂತರ ತನ್ನ ಊರಿನ ಸ್ನೇಹಿತರಾದ ರಾಕೇಶ್ ಹಾಗೂ ಮತ್ತೊಬ್ಬನನ್ನು ಕರೆಸಿಕೊಂಡು ಅ.29ರಂದು ಎಂದಿನಂತೆ ಅಂಗಡಿ ಬೀಗ ತೆರೆದು ಕಸ ಗುಡಿಸುವವನಂತೆ ನಾಟಕವಾಡಿದ್ದಾನೆ. ಆ ವೇಳೆ ಅಂಗಡಿಯ ಸಿಸಿಟಿವಿ ಸ್ಥಗಿತಗೊಳಿಸಿದ್ದಾನೆ. ಇನ್ನಿಬ್ಬರು ಅಂಗಡಿಯಲ್ಲಿದ್ದ 4 ಕೆಜಿ ಚಿನ್ನಾಭರಣ, 34 ಕೆಜಿ ಬೆಳ್ಳಿ ವಸ್ತುಗಳು, 9 ಲಕ್ಷ ಹಣವನ್ನು ಬ್ಯಾಗ್‍ಗಳಿಗೆ ತುಂಬಿಕೊಂಡಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಸೇನಾ ಕಾರ್ಯಾಚರಣೆ: ಐವರು ಉಗ್ರರ ಹತ್ಯೆ
ಬಳಿಕ ಕೇತರಾಮ್ ಅಂಗಡಿಗೆ ಬೀಗ ಹಾಕಿ ಅವರೊಂದಿಗೆ ಪರಾರಿಯಾಗಿದ್ದನು. ಅಕ್ಕಪಕ್ಕದವರು ಅನುಮಾನಗೊಂಡು ಅಂಗಡಿ ಮಾಲೀಕರ ಮಗನಿಗೆ ತಿಳಿಸಿದ್ದಾರೆ. ಮಾಲೀಕರ ಮಗ ಬಂದು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಹಲಸೂರು ಗೇಟ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೊದಲ ಪ್ರಮುಖ ಆರೋಪಿ ಕೇತರಾಮ್‍ನನ್ನು ಬಂಸಿ ನಂತರ ಮತ್ತೊಬ್ಬನನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 1 ಕೋಟಿ 2 ಲಕ್ಷ ಬೆಲೆಬಾಳುವ 1 ಕೆಜಿ 624 ಗ್ರಾಂ ಚಿನ್ನಾಭರಣ, 6 ಕೆಜಿ 455 ಗ್ರಾಂ ಬೆಳ್ಳಿ, 5.50 ಲಕ್ಷ ನಗದು, ಹಳೆಯ ನೋಟುಗಳು, ಕೈಗಡಿಯಾರಗಳು ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ಹಲಸೂರು ಗೇಟ್ ಹಾಗೂ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗಳ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.
ಆರೋಪಿ ರಾಕೇಶ್ ವಿರುದ್ಧ ಸಿಟಿ ಮಾರ್ಕೆಟ್, ಹಲಸೂರು, ವರ್ತೂರು, ಬ್ಯಾಡರಹಳ್ಳಿ, ತಾವರೆಕೆರೆ ಪೊಲೀಸ್ ಠಾಣೆಗಳಲ್ಲಿ ಎನ್‍ಡಿಪಿಎಸ್ ಕಾಯ್ದೆ, ಮನೆಗಳವು, ಹಗಲು ಕನ್ನಗಳವು ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಹೋಗಿ ಬಂದಿರುತ್ತಾನೆ. ಹಲಸೂರು ಗೇಟ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಹನುಮಂತ ಕೆ.ಭಜಂತ್ರಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.