Tuesday, December 3, 2024
Homeಬೆಂಗಳೂರುಆನ್ಲೈನ್ ಜಾಬ್ ಟಾಸ್ಕ್ ಹೆಸರಲ್ಲಿ 6 ಕೋಟಿ ರೂ. ವಂಚನೆ, 10 ಮಂದಿ ಬಂಧನ

ಆನ್ಲೈನ್ ಜಾಬ್ ಟಾಸ್ಕ್ ಹೆಸರಲ್ಲಿ 6 ಕೋಟಿ ರೂ. ವಂಚನೆ, 10 ಮಂದಿ ಬಂಧನ

10 arrested in online job task Fraud

ಬೆಂಗಳೂರು,ಸೆ.27- ಆನ್ಲೈನ್ ಜಾಬ್ ಟಾಸ್ಕ್ ಹೆಸರಲ್ಲಿ ಆರು ಕೋಟಿ ರೂ. ಹಣವನ್ನು ಪಡೆದು ವಂಚಿಸುತ್ತಿದ್ದ ನಗರದ ಹತ್ತು ಮಂದಿ ಆರೋಪಿಗಳನ್ನು ಉತ್ತರ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 72 ಮೊಬೈಲ್ ಫೋನ್ಗಳು, 182 ಡೆಬಿಟ್ ಕಾರ್ಡ್ಗಳು, 2 ಲ್ಯಾಪ್ಟಾಪ್, ವಿವಿಧ ಕಂಪನಿಯ 133 ಸಿಮ್ ಕಾರ್ಡ್ಗಳು, 127 ಬ್ಯಾಂಕ್ ಪಾಸ್ಪುಸ್ತಕಗಳು ಹಾಗೂ 1.74 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳೆಲ್ಲರೂ ನಗರದವರಾಗಿದ್ದು, ಈ ಪ್ರಕರಣಗಳಂತೆಯೇ ಭಾರತದಾದ್ಯಂತ ವಿವಿಧ 21 ರಾಜ್ಯಗಳಲ್ಲಿ ಒಟ್ಟು 122 ಎನ್ಸಿಆರ್ಪಿ ಪ್ರಕರಣಗಳು ಇವರುಗಳ ವಿರುದ್ಧ ದಾಖಲಾಗಿರುತ್ತವೆ.ಆಂಧ್ರಪ್ರದೇಶದಲ್ಲಿ 10, ಅಸ್ಸಾ 1, ಬಿಹಾರ 6, ಚಂಡೀಗಢ 1, ಛತ್ತೀಸ್ಗಢ 3, ದೆಹಲಿ 3, ಗುಜರಾತ್ 7, ಹರಿಯಾಣ 1, ಹಿಮಾಚಲ ಪ್ರದೇಶ 1, ಕರ್ನಾಟಕ 9, ಕೇರಳ 2, ಮಧ್ಯಪ್ರದೇಶ 1, ಮಹಾರಾಷ್ಟ್ರ 12, ಒಡಿಸ್ಸಾ 2, ಪಂಜಾಬ್ 4, ರಾಜಸ್ತಾನ 5, ತಮಿಳುನಾಡು 20, ತೆಲಂಗಾಣ 12, ಉತ್ತರಪ್ರದೇಶ 16, ಉತ್ತರಾಖಂಡ 3, ಪಶ್ಚಿಮ ಬಂಗಾಳ 3 ಮತ್ತು ಬೆಂಗಳೂರು ನಗರದ ಉತ್ತರ ಸಿಇಎನ್ ಪೊಲೀಸ್ ಠಾಣೆಯಲ್ಲಿ 3 ಪ್ರಕರಣಗಳು ಪತ್ತೆಯಾಗಿರುತ್ತವೆ.

ಬಾಗಲಗುಂಟೆಯ ಟಿ. ದಾಸರಹಳ್ಳಿ ನಿವಾಸಿಯೊಬ್ಬರ ಮೊಬೈಲ್ಗೆ ಅಪರಿಚಿತ ವ್ಯಕ್ತಿಯು ವಾಟ್ಸಪ್ ಮೂಲಕ ಮೆಸೇಜ್ ಮಾಡಿ ಆನ್ಲೈನ್ ಜಾಬ್ ನೀಡುವುದಾಗಿ ನಂಬಿಸಿದ್ದಾನೆ. ನಂತರ ವಾಟ್ಸಪ್ ಮೂಲಕ ಅವರಿಗೆ ಕೆಲವು ಲಿಂಕ್ಗಳನ್ನು ಕಳುಹಿಸಿ, ಟೆಲಿಗ್ರಾಂ ಗ್ರೂಪ್ಗೆ ಸೇರ್ಪಡಿಸಿ, ಟಾಸ್ಕ್ಗಳನ್ನು ನೀಡಿದ್ದು, ಈ ಟಾಸ್ಕ್ನಲ್ಲಿ ಐಷಾರಾಮಿ ಹೋಟೆಲ್ಗಳ ರೀವ್ಯೂವನ್ನು ಮಾಡುವಂತೆ ತಿಳಿಸಿದ್ದಾನೆ.ರೀವ್ಯೂ ಮಾಡುವ ಸಮಯದಲ್ಲಿ 150 ರಿಂದ 200 ರೂ. ಹಣವನ್ನು ಸಲ್ಲಿಸಿ ರೀವ್ಯೂ ರಿಪೋರ್ಟ್ ಅನ್ನು ಕಳುಹಿಸಿದ್ದಲ್ಲಿ ಕೂಡಲೇ ಅಪರಿಚಿತ ವ್ಯಕ್ತಿಯು 400 ರಿಂದ 500 ರೂ. ಹಣವನ್ನು ಅಕೌಂಟ್ಗೆ ಹಾಕುತ್ತಿದ್ದನು.

ಇದೇ ರೀತಿ ಹಲವಾರು ರೀವ್ಯೂ ರಿಪೋರ್ಟ್ಗಳನ್ನು ತರಿಸಿಕೊಂಡು ಹೆಚ್ಚಿನ ಹಣವನ್ನು ಸಂದಾಯ ಮಾಡಿ, ನಂಬಿಕೆ ಬರುವಂತೆ ಅಪರಿಚಿತ ವ್ಯಕ್ತಿಯು ನಡೆದುಕೊಂಡಿದ್ದಾನೆ. ಕ್ರಿಪ್ರೋ ಕರೆನ್ಸಿ ಟ್ರೇಡಿಂಗ್ ಇನ್ವೆಸ್ಟ್ಮೆಂಟ್ ಮಾಡಿದ್ದಲ್ಲಿ ಹೆಚ್ಚಿನ ಲಾಭ ಬರುವುದಾಗಿ ಅವರನ್ನು ನಂಬಿಸಿದ ವಂಚಕ ಹಂತಹಂತವಾಗಿ ಒಟ್ಟು 25,37,815 ರೂ.ಗಳನ್ನು ತನ್ನ ಅಕೌಂಟಿಗೆ ವರ್ಗಾಹಿಸಿಕೊಂಡಿದ್ದಾನೆ.ತದನಂತರದಲ್ಲಿ ತಾನು ಮೋಸ ಹೋಗಿರುವುದಾಗಿ ಅರಿತು ಸಿ.ಇ.ಎನ್. ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಪಿರ್ಯಾದುದಾರರು ದೂರು ನೀಡಿದ್ದಾರೆ.

ತನಿಖೆಯನ್ನು ಕೈಗೊಂಡ ಸೈಬರ್ಕ್ರೈಂ ಪೊಲೀಸರು ವಿವಿಧ ಬ್ಯಾಂಕ್ಗಳ ಅಕೌಂಟ್ಗಳಿಗೆ ಹಣವು ವರ್ಗಾವಣೆಯಾಗಿರುವ ಖಾತೆಗಳ ಖಾತೆದಾರರ ವಿವರಗಳನ್ನು ಸಂಪೂರ್ಣವಾಗಿ ಪಡೆದುಕೊಂಡು, ಈ ಜಾಲದಲ್ಲಿ ತೊಡಗಿಸಿಕೊಂಡಿದ್ದ ಒಟ್ಟು 10 ಮಂದಿಯ ಪೈಕಿ 7 ಮಂದಿಯನ್ನು ಆರ್.ಟಿ.ನಗರದ 13ನೇ ಕ್ರಾಸ್ನ ಕಾಫಿಡೇ ಮುಂಭಾಗ ಮೊಬೈಲ್ಗಳು ಹಾಗೂ ಮೂರು ಬ್ಯಾಗ್ಗಳ ಸಮೇತ ವಶಕ್ಕೆ ಪಡೆದಿದ್ದಾರೆ.

ನಂತರ ಠಾಣೆಗೆ ಕರೆತಂದು ಮೂರು ಬ್ಯಾಗ್ಗಳನ್ನು ಪರಿಶೀಲಿಸಿ ಅದರಲ್ಲಿದ್ದ 99 ಡೆಬಿಟ್ ಕಾರ್ಡ್ಗಳು, 50 ಬ್ಯಾಂಕ್ ಪಾಸ್ ಪುಸ್ತಕಗಳು, 41 ಸಿಮ್ ಕಾರ್ಡ್ಗಳು, 1 ಲ್ಯಾಪ್ಟಾಪ್, 23 ಮೊಬೈಲ್ಫೋನ್ಗಳು ಹಾಗೂ 1.24 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
7 ಮಂದಿಯನ್ನು ವಿಚಾರಣೆಗೊಳಪಡಿಸಿದಾಗ, ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ತಲೆಮರೆಸಿಕೊಂಡಿರುವ ಇತರ ಮೂವರು ಸಹಚರರ ಬಗ್ಗೆ ಮಾಹಿತಿಯನ್ನು ನೀಡಿ, ಅವರು ಚೀನಾ ದೇಶಕ್ಕೆ ಹೋಗಿದ್ದು, ಚೀನಾದಲ್ಲಿ ಸೈಬರ್ ವಂಚಕರನ್ನು ಭೇಟಿ ಮಾಡಿ, ನಗರಕ್ಕೆ ವಾಪಸ್ಬಂದಿರುವುದಾಗಿ ತಿಳಿಸಿದ್ದಾರೆ.

ತನಿಖೆ ಮುಂದುವರೆಸಿ ತಲೆಮರೆಸಿಕೊಂಡಿದ್ದ ಮೂವರ ವಿರುದ್ಧ ಲುಕ್ಔಟ್ ನೋಟಿಸ್ (ಎಲ್.ಓ.ಸಿ) ಅನ್ನು ಹೊರಡಿಸಲಾಗಿತ್ತು.ನಂತರ ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮೂವರನ್ನು ನಗರದ ವಿಮಾನನಿಲ್ದಾಣದ ಅಧಿಕಾರಿಗಳು ಅವರ ವಶಕ್ಕೆ ಪಡೆದು, ನಂತರ ಈ ಪ್ರಕರಣದ ತನಿಖಾಧಿಕಾರಿಯವರಿಗೆ ಹಸ್ತಾಂತರಿಸಿದ್ದಾರೆ. ವಶಕ್ಕೆ ಪಡೆದ ಈ ಮೂವರು ವ್ಯಕ್ತಿಗಳಿಂದ 6 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ.

ಒಟ್ಟು 10 ಆರೋಪಿಗಳ ಪೈಕಿ ಇಬ್ಬರು ಆರೋಪಿಗಳು ನೆಲಗದರನಹಳ್ಳಿ, ಪೀಣ್ಯಾ ಪೊಲೀಸ್ಠಾಣೆಯ ವ್ಯಾಪ್ತಿಯಲ್ಲಿ ಒಂದು ಕಛೇರಿಯನ್ನು ಹೊಂದಿದ್ದು, ಕಛೇರಿಯಲ್ಲಿ ಆರೋಪಿತನು ಕೃತ್ಯಕ್ಕೆ ಉಪಯೋಗಿಸಿದ 47 ಬ್ಯಾಂಕ್ ಪಾಸ್ ಬುಕ್ಗಳು, 48 ಸಿಮ್ ಕಾರ್ಡ್ಗಳು, 31 ಡೆಬಿಟ್ ಕಾರ್ಡ್ಗಳು, 9 ಮೊಬೈಲ್ ಫೋನ್ಗಳನ್ನು ಹಾಜರು ಪಡಿಸಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ.

ಮೂವರು ಆರೋಪಿಗಳು ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಒಂದು ಪಿ.ಜಿ ಯಲ್ಲಿ ವಾಸವಾಗಿದ್ದು, ಪಿ.ಜಿ ಯಲ್ಲಿಟ್ಟಿದ್ದ 52 ಡೆಬಿಟ್ ಕಾರ್ಡ್ಗಳು, 34 ಮೊಬೈಲ್ ಫೋನ್ಗಳು, 40 ಸಿಮ್ಕಾರ್ಡ್ಗಳು, 1 ಲ್ಯಾಪ್ಟಾಪ್ ಹಾಗೂ 30 ಬ್ಯಾಂಕ್ ಪಾಸ್ ಬುಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇತರೆ ಆರೋಪಿಗಳ ಮನೆಗಳನ್ನು ಶೋಧಿಸಲಾಗಿ, ಕೃತ್ಯಕ್ಕೆ ಬಳಸಿದ ಯಾವುದೇ ಉಪಯುಕ್ತ ಮಾಹಿತಿ, ವಸ್ತುಗಳು ಲಭ್ಯವಾಗಿಲ್ಲ.10 ಆರೋಪಿಗಳ ಪೈಕಿ 5 ಆರೋಪಿಗಳು ವಿವಿಧ ಎ.ಟಿ.ಎಂ ನಿಂದ ಹಣ ಪಡೆದಿದ್ದು ಆ ಎ.ಟಿ.ಎಂ ಗಳಲ್ಲಿ ತನಿಖೆ ಕೈಗೊಳ್ಳಲಾಗಿದೆ.

ತನಿಖೆಯನ್ನು ಮುಂದುವರೆಸಿ, ಈ ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ 127 ವಿವಿಧ ಬ್ಯಾಂಕ್ ಪಾಸ್ ಪುಸ್ತಕಗಳ ಆಧಾರದ ಮೇಲೆ, ಒಟ್ಟು 7,34,768 ರೂ. ಗಳನ್ನು ಫ್ರೀಜ್ ಮಾಡಿ ತನಿಖೆ ಮುಂದುವರೆಸಿದ್ದಾರೆ.ಈ ಪ್ರಕರಣವನ್ನು ಸಿ.ಇ.ಎನ್. ಕ್ರೈಂ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಶಿವರತ್ನ ಹಾಗೂ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News