ಬೆಂಗಳೂರು,ಡಿ.29- ಹೊಸ ವರ್ಷ ಸ್ವಾಗತಕ್ಕೆ ಸಿಲಿಕಾನ್ ಸಿಟಿ ಸಜ್ಜಾಗುತ್ತಿದ್ದು, ಭದ್ರತಾ ದೃಷ್ಟಿಯಿಂದ ಪೊಲೀಸರು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್ ಮುಂತಾದ ರಸ್ತೆಗಳಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸಹ ಅದ್ಧೂರಿ ವರ್ಷಾಚರಣೆ ಸಂಭ್ರಮ ನಡೆಯಲಿದ್ದು, ಸಾರ್ವಜನಿಕರ ಭದ್ರತಾ ದೃಷ್ಟಿಯಿಂದ ಸಿ.ಸಿ.ಕ್ಯಾಮೆರಾಗಳ ಅಳವಡಿಕೆ, ವಾಚ್ ಟವರ್, ವುಮೆನ್‌್ಸ ಸೇಫ್ಟಿಲ್ಯಾಂಡ್, ಹೆಲ್ತ್ ಸೆಂಟರ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ನಗರದ ಪ್ರಮುಖ ಆಕರ್ಷಣೆ ಸ್ಥಳಗಳಾದ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಎಂ.ಜಿ.ರಸ್ತೆ, ರಿಚಂಡ್ ಜಂಕ್ಷನ್ ಸೇರಿದಂತೆ ಕೇಂದ್ರ ವಿಭಾಗದ ಪ್ರಮುಖ ಸ್ಥಳಗಳಲ್ಲಿ ಈಗಿರುವ ಸಿಸಿಟಿವಿ ಕ್ಯಾಮೆರಾಗಳ ಜೊತೆಗೆ ಹೆಚ್ಚುವರಿಯಾಗಿ 400 ಕ್ಯಾಮೆರಾಗಳನ್ನು ಜೋಡಿಸಲಾಗುತ್ತಿದೆ. ಇದೇ ರೀತಿ ಇಂದಿರಾನಗರ, ಕೋರಮಂಗಲ, ಮಾರತಹಳ್ಳಿ, ಎಚ್‌ಎಸ್‌ಆರ್ ಲೇಔಟ್ ಮುಂತಾದ ಪ್ರಮುಖ ಸ್ಥಳಗಳಲ್ಲಿ ಸಿದ್ದತೆ ನಡೆಯುತ್ತಿದೆ.
ವಿಶೇಷವಾಗಿ ಕೇಂದ್ರ ವಿಭಾಗದ ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ, ಒಪೇರಾ ಜಂಕ್ಷನ್, ರೆಸಿಡೆನ್ಸಿ ರಸ್ತೆ ಹಾಗೂ ಮುಂತಾದ ರಸ್ತೆಗಳಲ್ಲಿ ಐದು ಮಂದಿ ಡಿಸಿಪಿಗಳು, 18 ಮಂದಿ ಎಸಿಪಿಗಳು, 41 ಮಂದಿ ಪೊಲೀಸ್ ಇನ್‌ಸ್ಪೆಕ್ಟರ್ ಸೇರಿದಂತೆ ಒಟ್ಟು 2572 ಸಿಬ್ಬಂದಿಗಳನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ.
ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳು ಸೇರಿದಂತೆ 11,830ಕ್ಕೂ ಪೊಲೀಸ್ ಸಿಬ್ಬಂದಿಯನ್ನು ನಗರದಾದ್ಯಂತ ಬಂದೋಬಸ್ತ್‌ಗಾಗಿ ನೇಮಿಸಲಾಗಿದೆ.