ಭೂಪಾಲ್,ಡಿ.28- ಖಾಸಗಿ ಬಸ್ ಹಾಗೂ ಡಂಪರ್ ಟ್ರಕ್ ನಡುವೆ ಭಿಕರ ಅಪಘಾತ ಸಂಭವಿಸಿ, 12 ಮಂದಿ ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಗುನಾದಲ್ಲಿ ಘನಘೋರ ಘಟನೆ ಸಂಭವಿಸಿದ್ದು, ಇಲ್ಲಿ ಬಸ್ ಮತ್ತು ಡಂರ್ಪ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿ ಸಂಭವಿಸಿದ ತಕ್ಷಣ ಬಸ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಬಸ್ ಪಲ್ಟಿಯಾಗಿ ಬಸ್‍ನಲ್ಲಿದ್ದವರಿಗೆ ಗಾಯಗಳಾದ ಕಾರಣ ಅಲ್ಲಿಂದ ಪಾರಾಗಲು ಸಾಧ್ಯವಾಗಿಲ್ಲ. ಹೀಗಾಗಿ 13 ಮಂದಿ ಸಜೀವ ದಹನವಾಗಿದ್ದಾರೆ. ಅದಾಗ್ಯೂ, ಬಸ್ಸಿನ ಗಾಜು ಒಡೆದು 25 ಮಂದಿ ಪ್ರಾಣ ಉಳಿಸಿಕೊಂಡಿದ್ದಾರೆ.
ಗಾಯಾಳುಗಳನ್ನು ಗುನ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 5 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತರುಣ್ ರಥಿ ತಿಳಿಸಿದ್ದಾರೆ. ಪ್ರಸ್ತುತ 17 ಮಂದಿ ಜಿಲ್ಲೆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಬಸ್ ಮತ್ತು ಟ್ರಕ್ ಅಪಘಾತದಲ್ಲಿ ಹದಿಮೂರು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಂಬಕ್ಕೆ ಕಾರು ಅಪ್ಪಳಿಸಿ ನಾಲ್ವರು ಯುವಕರ ಸಾವು
ಮೃತದೇಹಗಳು ಬೆಂಕಿಯಲ್ಲಿ ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದ್ದು, ಅವುಗಳನ್ನು ಗುರುತಿಸಲು ಡಿಎನ್‍ಎ ಪರೀಕ್ಷೆ ನಡೆಸಲಾಗುವುದು. ಅಪಘಾತ ಸ್ಥಳದಿಂದ ಎಲ್ಲಾ ದೇಹಗಳನ್ನು ಹೊರತೆಗೆಯಲಾಗಿದೆ. ಅಪಘಾತಕ್ಕೆ ಕಾರಣವನ್ನು ಕಂಡುಹಿಡಿಯಲು ಪರಿಶೀಲನೆ ನಡೆಯುತ್ತಿದೆ ಎಂದು ಅವರು ಹೇಳಿದರು. ಘಟನೆಯ ಸಮಯದಲ್ಲಿ ಬಸ್‍ನಲ್ಲಿ ಸುಮಾರು 30 ಪ್ರಯಾಣಿಕರಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಬಸ್ ಸಂಖ್ಯೆ ಒP08P0199 ಡಿಸೆಂರ್ಬ 27 ರಂದು ರಾತ್ರಿ 8.30 ರ ಸುಮಾರಿಗೆ ಗುನಾದಿಂದ ಆರೋನ್‍ಗೆ ಹೊರಟಿತ್ತು. ಸುಮಾರು 25 ನಿಮಿಷಗಳ ನಂತರ, ಬಜರಂಗಗಡ ಪೊಲೀಸ್ ಠಾಣೆಗಿಂತ 5 ಕಿ.ಮೀ. ಮೊದಲು ಬಸ್ ಚಲಿಸುತ್ತಿದ್ದಾಗ ಎದುರುಗಡೆಯಿಂದ ವೇಗವಾಗಿ ಬಂದ ಡಂಪರ್‍ಗೆ ಬಸ್ ಡಿಕ್ಕಿ ಹೊಡೆದಿದೆ. ಈ ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಡಿಕ್ಕಿ ಸಂಭವಿಸಿದ ತಕ್ಷಣ ಬಸ್ ಪಲ್ಟಿಯಾಗಿದೆ. ಅಷ್ಟರಲ್ಲೇ ಬಸ್‍ಗೆ ತಕ್ಷಣ ಬೆಂಕಿ ಹೊತ್ತಿಕೊಂಡಿದೆ.
ಬಸ್ ಪಲ್ಟಿಯಾದ ತಕ್ಷಣ ಜೋರಾದ ಬೊಬ್ಬೆ ಕೇಳಿತ್ತು. ಸ್ಥಳೀಯರು ಏನಾಯಿತೆಂದು ಅರ್ಥ ಮಾಡಿಕೊಂಡು ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿಯು ತೀವ್ರ ಸ್ವರೂಪ ಪಡೆದುಕೊಂಡಿತ್ತು.
ತನಿಖೆಗೆ ಆದೇಶ
ಈ ಅಪಘಾತದ ಸುದ್ದಿ ತಿಳಿದ ನಂತರ ಮಧ್ಯಪ್ರದೇಶ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಸಂತಾಪ ವ್ಯಕ್ತಪಡಿಸಿದ್ದು, ಬಸ್ ಅಪಘಾತದ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೇ ಮೃತರಿಗೆ ಸಿಎಂ ಮೋಹನ್ ಯಾದವ್ ತಲಾ 4 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದು, ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಜೊತೆಗೆ ಘಟನೆಯ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಮೋದಿ ನೇತೃತ್ವದಲ್ಲಿ ಬದಲಾಗುತ್ತಿದೆ ಭಾರತ : ಓಂ ಬಿರ್ಲಾ
ಸಿಕಾರ್ವಾರ್ ಟ್ರಾವೆಲ್ಸ್‍ನ ಈ ಬಸ್‍ಗೆ ವಿಮೆ ಕೂಡ ಅನರ್ಹಗೊಂಡಿದ್ದು, ಫೆಬ್ರವರಿ 17, 2022 ರಿಂದ ಇನ್ಶೂರೆನ್ಸ್ ಚಾಲ್ತಿಯಲ್ಲಿಲ್ಲ ಎಂದು ತಿಳಿದು ಬಂದಿದೆ. ಅದರ ಬಸ್ಸನ್ನು ಓಡಿಸಲಾಗುತ್ತಿತ್ತು. ಅಚ್ಚರಿಯ ಸಂಗತಿ ಎಂದರೆ, ಈ ಬಸ್‍ಗೆ ವಿಮೆ ಮಾಡಿಸದೇ ಇರುವ ವಿಚಾರದಲ್ಲಿ ಆರ್‍ಟಿಒ ನಿರ್ಲಕ್ಷ್ಯ ಕೂಡ ಬೆಳಕಿಗೆ ಬಂದಿದೆ.
ಅಪಘಾತಕ್ಕೆ ಸಂಬಂಸಿದಂತೆ, 5 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಳಿದ ಶವಗಳನ್ನು ಗುರುತಿಸುವ ಪ್ರಯತ್ನ ನಡೆಸಲಾಗುತ್ತಿದೆ. ಬಸ್ಸು ಸುಟ್ಟು ಕರಕಲಾದ ಕಾರಣ ಮೃತದೇಹಗಳನ್ನು ಗುರುತಿಸಲು ಸಾಕಷ್ಟು ಕಷ್ಟವಾಗುತ್ತಿದೆ ಎಂದು ತಿಳಿದು ಬಂದಿದೆ.