ಬೆಂಗಳೂರು,ಡಿ.13- ನಕಲಿ ಶೂರಿಟಿ ನೀಡಿ ನ್ಯಾಯಾಲಯಕ್ಕೆ ಹಾಗೂ ಆಸ್ತಿಯ ಮಾಲೀಕರಿಗೆ ಮೋಸ ಮಾಡುತ್ತಿದ್ದ ಜಾಲವೊಂದನ್ನು ಹಲಸೂರು ಗೇಟ್ ಠಾಣಾ ಪೊಲೀಸರು ಪತ್ತೆ ಹಚ್ಚಿ 13 ಮಂದಿಯನ್ನು ಬಂಧಿಸಿದ್ದಾರೆ.
ನೃಪತುಂಗ ರಸ್ತೆಯಲ್ಲಿರುವ ಸಿ.ಎಂ.ಎಂ. ಕೋರ್ಟ್ (ಮ್ಯಾಜೆಸ್ಟ್ರೇಟ್ ಕೋರ್ಟ್)ನ ಮುಂಭಾಗದ ಪುಟ್ ಪಾತ್ ನಲ್ಲಿ ಸುಮಾರು 5 ರಿಂದ 6 ಮಂದಿ ನಕಲಿ ಆಧಾರ್ ಕಾರ್ಡ್, ಪಹಣಿ, ಮ್ಯೂಟೇಷನ್ಗಳನ್ನು ಇಟ್ಟುಕೊಂಡು ನ್ಯಾಯಾಲಯದಲ್ಲಿ ಆರೋಪಿಗಳ ಜಾಮೀನಿಗಾಗಿ ನಕಲಿ ದಾಖಲಾತಿಗಳನ್ನು ಸಲ್ಲಿಸಿ ಶೂರಿಟಿ ನೀಡಿ ನ್ಯಾಯಾಲಯಕ್ಕೆ ಹಾಗೂ ನಿಜವಾದ ಆಸ್ತಿಯ ಮಾಲೀಕರಿಗೆ ಮೋಸ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.
ತಕ್ಷಣ ಸ್ಥಳಕ್ಕೆ ದಾವಿಸಿದ ಪೊಲೀಸರು ಪರಿಶೀಲಿಸಿ 5ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ವಂಚನೆ ಮಾಡಿರುವುದು ಗೊತ್ತಾಗಿದೆ. ಈ ಪ್ರಕರಣದಲ್ಲಿ ಇನ್ನೂ 7 ಮಂದಿ ಬಾಗಿಯಾಗಿರುವುದಾಗಿ ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ನಾಲ್ವರನ್ನು ಹಾಗೂ ಮೆಜೆಸ್ಟಿಕ್ನ ಸೈಬರ್ ಸೆಂಟರ್ವೊಂದರಲ್ಲಿ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಪತ್ತೆಹಚ್ಚಿದ್ದಾರೆ.
ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆ ನಡೆಸಿ ಕೃತ್ಯಕ್ಕೆ ಬಳಸಿದ್ದ 139 ವಿವಿಧ ಹೆಸರು ಮತ್ತು ನಂಬರ್ಗಳ ನಕಲಿ ಆಧಾರ್ ಕಾರ್ಡ್ಗಳು, 43 ನಕಲಿ ರೇಷನ್ ಕಾರ್ಡ್ಗಳು, 16 ನಕಲಿ ಪ್ಯಾನ್ ಕಾರ್ಡ್ಗಳು, ವಿವಿಧ ಹೆಸರುಗಳಿರುವ ವ್ಯಕ್ತಿಗಳ 35 ಜಮೀನಿನ ಆರ್.ಟಿ.ಸಿ ಮತ್ತು ಮ್ಯುಟೇಷನ್ ಪ್ರತಿಗಳು, ನಕಲಿ ಕಾರ್ಡ್ಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದ ಒಂದು ಕಂಪ್ಯೂಟರ್, ಒಂದು ಪ್ರಿಂಟರ್, ಲ್ಯಾಮಿನೇಷನ್ ಮಿಷನ್ನ್ನು ಹಾಗೂ 12 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೋಬ್ಬನ ಪತ್ತೆಕಾರ್ಯ ಮುಂದುವರೆದಿದೆ.
ನಂತರ ತನಿಖೆ ಮುಂದುವರೆಸಿ ವೆಜೆಸ್ಟಿಕ್ನ ಲಾಡ್ಜ್ ವೊಂದರಲ್ಲಿ ಇಬ್ಬರು ವ್ಯಕ್ತಿಗಳನ್ನು ಎರಡು ಮೊಬೈಲ್ ಫೋನ್ ಸಮೇತ ವಶಕ್ಕೆ ಪಡೆದಿದ್ದಾರೆ. ಹಲಸೂರು ಗೇಟ್ ಠಾಣೆಯ ಇನ್‌್ಸಪೆಕ್ಟರ್ ಹನಮಂತ ಕೆ ಭಜಂತ್ರಿ ಮತ್ತು ಸಿಬ್ಬಂದಿ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.