ಚಿಕ್ಕಬಳ್ಳಾಪುರ, ಅ.26- ಕುಟುಂಬದವರೊಂದಿಗೆ ಖುಷಿ ಖುಷಿಯಿಂದ ಹಬ್ಬ ಮುಗಿಸಿಕೊಂಡು ಕಾಯಕಕ್ಕೆ ಮರಳುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದು ರಸ್ತೆ ಬದಿ ನಿಂತಿದ್ದ ಸಿಮೆಂಟ್ ಬಲ್ಕರ್ ಲಾರಿಗೆ ಹಿಂದಿನಿಂದ ಟಾಟಾ ಸುಮೋ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ 13 ಮಂದಿಯನ್ನು ಬಲಿತೆಗೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ ಚಿತ್ರಾವತಿ ಸಮೀಪ ಇಂದು ಬೆಳಗ್ಗೆ ಸಂಭವಿಸಿದೆ.
ಅಪಘಾತದಲ್ಲಿ 8 ಮಂದಿ ಪುರುಷರು, ನಾಲ್ವರು ಮಹಿಳೆಯರು ಹಾಗೂ ಒಂದು ಗಂಡು ಮಗು ಮೃತಪಟ್ಟಿದ್ದು,
ಕೆಲವರ ಹೆಸರು, ವಿಳಾಸ ಸದ್ಯಕ್ಕೆ ತಿಳಿದು ಬಂದಿಲ್ಲ. ಮೃತರ ಪೈಕಿ ದೊಡ್ಡಬಳ್ಳಾಪುರದ ಅರುಣಾ (40) ಇವರ ಮಗ ಹೃತ್ವಿಕ್ ಯತಿನ್ (6), ಬೆಂಗಳೂರಿನ ಬಸವೇಶ್ವರ ನಗರದ ಸುಬ್ಬಮ್ಮ, ಆಂಧ್ರದ ಕೊತ್ತಚೆರಮ ನಿವಾಸಿ ಪೆರುಮಾಳ್, ಕಾವಲ್ ಬೈರಸಂದ್ರದ ನರಸಿಂಹಮೂರ್ತಿ, ಚಾಲಕ ನರಸಿಂಹಪ್ಪ ಎಂದು ಗುರುತಿಸಲಾಗಿದ್ದು, ಉಳಿದವರ ಹೆಸರು, ವಿಳಾಸಕ್ಕಾಗಿ ಪೊಲೀಸರು ಮಾಹತಿ ಕಲೆ ಹಾಕುತ್ತಿದ್ದಾರೆ.
ಆಯುಧ ಪೂಜೆ ಹಿನ್ನಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಿದ್ದ ಕಾರ್ಮಿಕರು ಸಂಭ್ರಮದಿಂದ ಕುಟುಂಬದವರೊಂದಿಗೆ ಹಬ್ಬ ಮಾಡಿಕೊಂಡು ರಾತ್ರಿ ಬೆಂಗಳೂರಿಗೆ ಮರಳಲು ಆಂಧ್ರದ ಕಡೆಯಿಂದ ಬರುತಿದ್ದ ಟಾಟಾಸುಮೋ ಹತ್ತಿದ್ದಾರೆ. ಆಂಧ್ರ ನೊಂದಣಿಯ ಟಾಟಾ ಸುಮೋ ಚಾಲಕ ಮಾರ್ಗಮಧ್ಯೆ ಬೇರೆ ಬೇರೆ ಊರಿನಲ್ಲಿ ಬೆಂಗಳೂರಿಗೆ ತೆರಳಲು ವಾಹನಕ್ಕಾಗಿ ರಸ್ತೆ ಬದಿ ಕಾಯುತ್ತಿದ್ದ ಜನರನ್ನು ಹತ್ತಿಸಿಕೊಂಡು ಒಟ್ಟು 13 ಮಂದಿಯನ್ನು ಕರೆದುಕೊಂಡು ಬಾಗೇಪಲ್ಲಿ -ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಅತೀ ವೇಗವಾಗಿ ಬರುತ್ತಿದ್ದನು.
ಇಂದು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಚಿತ್ರಾವತಿಯ ಬಳಿ ಬರುತ್ತಿದ್ದಂತೆ ರಸ್ತೆ ಬದಿ ಯಾವುದೇ ಸೂಚನಾ ದೀಪ (ಬ್ಲಿಕಿಂಗ್ ಲೈಟ್) ಹಾಕದೆ ಸಿಮೆಂಟ್ ಬಲ್ಕರ್ ಲಾರಿ ನಿಲ್ಲಿಸಿರುವುದು ಚಾಲಕನ ಗಮನಕ್ಕೆ ಬಾರದೆ ವೇಗವಾಗಿ ಟಾಟಾ ಸುಮೋ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತ ಸಂಭವಿಸುತ್ತದ್ದಂತೆ ಸುತ್ತಮುತ್ತಲಿನ ಸ್ಥಳೀಯರು ತಕ್ಷಣ ಸ್ಥಳಕ್ಕೆ ಆಗಮಿಸಿ ಟಾಟಾ ಸುಮೋ ವಾಹನದ ಬಾಗಿಲುಗಳನ್ನು ತೆಗೆದು ಸಂತ್ರಸ್ಥರನ್ನು ರಕ್ಷಿಸಲು ಮುಂದಾದರು. ಪೊಲೀಸರಿಗೂ ವಿಷಯ ತಿಳಿಸಿದ್ದಾರೆ.
ಟಾಟಾ ಸುಮೋ ವಾಹನದೊಳಗೆ ಗಂಭೀರ ಗಾಯಗೊಂಡು ನರಳಾಡುತ್ತಿದ್ದವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ 7 ಮಂದಿ ಮೃತಪಟ್ಟಿದ್ದಾರೆ.ಆಸ್ಪತ್ರೆಗೆ ದಾಖಲಿಸಿದ್ದ ಉಳಿದಿದ್ದ ಒಬ್ಬ ಮಹಿಳೆಯೂ ಚಿಕಿತ್ಸೆ ಫಲಿಸದೆ 10 ಗಂಟೆ ಸುಮಾರಿನಲ್ಲಿ ಮೃತಪಟ್ಟಿದ್ದಾರೆ.
ಮಂಜು ಕವಿದ ವಾತಾವರಣ
ಬೆಳ್ಳಂಬೆಳಗ್ಗೆ ವಿಪರಿತ ಮಂಜು ಕವಿದಿದ್ದು ಟಾಟಾಸುಮೋ ಚಾಲಕನಿಗೆ ರಸ್ತೆ ಕಾಣದೆ ಲಾರಿಗೆ ಡಿಕ್ಕಿಹೊಡೆದಿದ್ದಾನೆ. ಡಿಕ್ಕಿಹೊಡೆದ ರಭಸಕ್ಕೆ ಟಾಟಾ ಸುಮೋ ಸಂಪೂರ್ಣ ನಜ್ಜುಗುಜ್ಜಾಗಿದ್ದು ವಾಹನದೊಳಗೆಸಿಕ್ಕಿಕೊಂಡು ಮೃತಪಟ್ಟವರ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.
BIG NEWS : ಮಾಜಿ ಸಿಎಂ ಯಡಿಯೂರಪ್ಪಗೆ Z ಕೆಟಗರಿ ಭದ್ರತೆ
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸುದ್ದಿತಿಳಿದ ಕೂಡಲೆ ಜಿಲ್ಲಾಪೊಲೀಸ್ ವರಿಷ್ಟಾಕಾರಿ ನಾಗೇಶ್ ಹಾಗೂ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‍ಪಿ ನಾಗೇಶ್, ದಟ್ಟ ಮಂಜಿನಿಂದಾಗಿ ರಸ್ತೆ ಕಾಣದೆ ಈ ಅಪಘಾತ ಸಂಭವಿಸಿರುವುದು ಮೋಲ್ನೋಟಕ್ಕೆ ಕಂಡು ಬಂದಿದೆ. ರಸ್ತೆ ಬದಿ ವಾಹನಗಳನ್ನು ನಿಲ್ಲಿಸದಂತೆ ಸೂಚಿಸಿದ್ದರೂ ರಾತ್ರಿ ವೇಳೆ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಚಾಲಕರು ನಿದ್ರೆ ಮಾಡುತ್ತಾರೆ. ಹಾಗಾಗಿ ಇಂತಹ ಅಚಾತುರ್ಯಗಳು ನಡೆಯುತ್ತಿವೆ. ಈ ಬಗ್ಗೆ ಲಾರಿ ಚಾಲಕರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ರವೀಂದ್ರ ಅವರು ಸ್ಥಳಕ್ಕೆ ಆಗಮಿಸಿ ಅಪಘಾತದ ಬಗ್ಗೆ ಮಾಹಿತಿ ಪಡೆದುಕೊಂಡರು.
ಕುಟುಂಬಸ್ಥರ ಆಕ್ರಂದನ :ಹಬ್ಬ ಮುಗಿಸಿಕೊಂಡು ವಾಪಸ್ಸು ತಮ್ಮ ಮನೆಗಳಿಗೆ ತೆರಳಲು ಹೋಗುವುದಾಗಿ ಕುಟುಂಬಸ್ಥರಿಗೆ ಹೇಳಿ ಹೋಗಿದ್ದವರು ಮಾರ್ಗಮಧ್ಯೆಯೇ ಅಪಘಾತದಲ್ಲಿ ಮೃತಪಟ್ಟಿದ್ದಾರೆಂಬ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರ ಜೇಬು, ಬ್ಯಾಗ್‍ಗಳಲ್ಲಿದ್ದ ಐಡಿ ಕಾರ್ಡ್, ಮೊಬೈಲ್‍ಗಳಿಂದ ಅವರ ವಾರಸುದಾರರಿಗೆ ಪೊಲೀಸರು ವಿಷಯ ತಿಳಿಸಿದ್ದಾರೆ.
ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರು ಊರುಗಳಿಂದ ಬಂದು ಚಿಕ್ಕಬಳ್ಳಾಪುರದ ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.