ಬೆಂಗಳೂರು,ಏ.9- ಎಟಿಎಂ ಯಂತ್ರವನ್ನು ಗ್ಯಾಸ್ ಕಟರ್‌ನಿಂದ ಕತ್ತರಿಸಿದ ಕಳ್ಳರು ಬರೋಬ್ಬರಿ 18 ಲಕ್ಷ ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಕಲಬುರಗಿಯ ಸಬ್‌ಅರ್ಬನ್ ಪೊಲೀಸ್‌ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಕಲಬುರಗಿಯ ಹುಮ್ನಾಬಾದ್-ಆಳಂದ ರಸ್ತೆಯ ಪೂಜಾರಿ ಚೌಕ ಸಮೀಪದ ರಾಮನಗರ ಕ್ರಾಸ್ ಬಳಿ ಎಸ್‌ಬಿಐ ಶಾಖೆಗೆ ಸೇರಿದ ಎಟಿಎಂ ಇದೆ.ಕಳ್ಳರು ಈ ಎಟಿಎಂ ನಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವುದನ್ನು ಗಮಿಸಿದ್ದಾರೆ. ಸಮಯ ನೋಡಿಕೊಂಡು ಇಂದು ಬೆಳಗಿನ ಜಾವ 2 ರಿಂದ 3 ಗಂಟೆಯ ಅವಧಿಯಲ್ಲಿ ಎಟಿಎಂ ನಲ್ಲಿ ಹಣ ಕಳವು ಮಾಡಲು ಕಾರಿನಲ್ಲಿ ಬಂದಿದ್ದಾರೆ.
ಚೋರರು ಮೊದಲು ಚಹರೆ ಗೊತ್ತಾಗಬಾರದೆಂದು ಎಟಿಎಂ ಬಳಿ ಅಳವಡಿಸಿದ್ದ ಸಿಸಿ ಕ್ಯಾಮರಾಗೆ ಕಪ್ಪು ಬಣ್ಣ ಬಳಿದಿದ್ದಾರೆ. ನಂತರ ಗ್ಯಾಸ್ ಕಟರ್‌ನಿಂದ ಎಟಿಎಂ ಯಂತ್ರವನ್ನು ಕತ್ತರಿಸಿ ಅದರಲ್ಲಿದ್ದ 18 ಲಕ್ಷ ಹಣವನ್ನು ಬ್ಯಾಗ್‌ಗಳಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಕೆಲ ಸಮಯದ ಬಳಿಕ ರಾತ್ರಿ ಗಸ್ತು ಪೊಲೀಸರಿಗೆ ಗೊತ್ತಾಗಿದೆ. ಸುದ್ದಿ ತಿಳಿದು ಸಬ್ ಅರ್ಬನ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಎಟಿಎಂ ನಿಂದ ಹಣ ಕಳ್ಳತನವಾಗಿರುವುದು ಕಂಡುಬಂದಿದೆ.ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಶರಣಪ್ಪ ಅವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಕಳ್ಳರ ಬಂಧನಕ್ಕೆ ತಂಡ ರಚನೆ :
ಎಟಿಎಂ ಯಂತ್ರ ಕತ್ತರಿಸಿ ಹಣ ಕಳವು ಮಾಡಿ ಕಾರಿನಲ್ಲಿ ಪರಾರಿಯಾಗಿರುವ ಕಳ್ಳರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದ್ದು, ಈ ತಂಡ ಈಗಾಗಲೇ ಕಾರ್ಯೊನುಖವಾಗಿದ್ದು, ಪ್ರಮುಖ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಕಳ್ಳರ ಪತ್ತೆಗೆ ಮುಂದಾಗಿದ್ದಾರೆ.