ಬೆಂಗಳೂರು,ಆ.19- ಇಲಿಗಳ ನಿಯಂತ್ರಣಕ್ಕೆ ಸಿಂಪಡಿಸಿದ್ದ ಇಲಿ ಪಾಷಾಣದಿಂದಾಗಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಉಸಿರಾಟದ ಮೂಲಕ ವಿಷ ಸೇರಿ ಅಸ್ವಸ್ಥರಾಗಿದ್ದ 19 ಮಂದಿ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ.
ಜ್ಞಾನಭಾರತಿ ಪೋಲೀಸ್ ಠಾಣೆ ವ್ಯಾಪ್ತಿಯ ಅಮ್ಮ ಆಶ್ರಮದ ಹತ್ತಿರದ ಆದರ್ಶ ನರ್ಸಿಂಗ್ ಕಾಲೇಜು ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳ ಆರೋಗ್ಯ ಲೆಕ್ಕಿಸದೆ ಇಲಿ ಔಷಧಿ ಸಿಂಪಡಿಸಿದ್ದ ಮಂಜೇಗೌಡ ಹಾಗೂ ಹಾಸ್ಟೆಲ್ ವ್ಯವಸ್ಥಾಪಕ ಮತ್ತು ಸಿಬ್ಬಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ವಿದ್ಯಾರ್ಥಿ ನಿಲಯದ ನೆಲಮಹಡಿಯಲ್ಲಿ ಅಳವಡಿಸಿರುವ ಜನರೇಟರ್ ಬಳಿ ಇಲಿಗಳ ಕಾಟ ಹೆಚ್ಚಾಗಿದ್ದರಿಂದ ಇಲಿಗಳ ನಿಯಂತ್ರಣಕ್ಕೆ ಮೊನ್ನೆ ರಾತ್ರಿ ಇಲಿ ಪಾಷಾಣ ಸಿಂಪಡಿಸಿದ್ದರಿಂದ ವಿದ್ಯಾರ್ಥಿ ನಿಲಯದಲ್ಲಿದ್ದವರ ಪೈಕಿ 19 ವಿದ್ಯಾರ್ಥಿಗಳಿಗೆ ಉಸಿರಾಟದ ತೊಂದರೆಯಾಗಿ ಅಸ್ವಸ್ಥಗೊಂಡಿದ್ದರು.
ಕೂಡಲೇ ಇತರೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಅಸ್ವಸ್ಥಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಪೈಕಿ ಮೂವರು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾಗಿದ್ದರಿಂದ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಇವರೂ ಸಹ ಚೇತರಿಸಿಕೊಳ್ಳುತ್ತಿದ್ದಾರೆ.
ವಿಷಕಾರಿ ವಸ್ತುವಿನ ವಿಷಯದಲ್ಲಿ ನಿರ್ಲಕ್ಷ್ಯ ತೋರಿ ಆರೋಗ್ಯ ಉಪದ್ರವ ಉಂಟು ಮಾಡಿದ ವಿದ್ಯಾರ್ಥಿನಿಲಯದ ಮುಖ್ಯಸ್ಥರು ಸೇರಿದಂತೆ ಹಲವರ ವಿರ್ಧು ಪ್ರಕರಣ ದಾಖಲಿಸಿಕೊಂಡಿರುವ ಜ್ಞಾನಭಾರತಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.