ಮೈಸೂರು,ಆ. 22-ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಮೈಸೂರಿಗೆ ಅಸಗಮಿಸುತ್ತಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಹಾಗೂ ತಂಡಕ್ಕೆ 2.50 ಕೋಟಿ ರೂ. ವಿಮೆ ಮಾಡಿಸಲಾಗಿದೆ. ದಿ ನ್ಯೂ ಇಂಡಿಯಾ ಅಶ್ಯುರ್ಸೆ್ ಕಂಪನಿ ಲಿಮಿಟೆಡ್ ದಸರಾ ಗಜಪಡೆ ಹಾಗೂ ತಂಡಕ್ಕೆ 2.50 ಕೋಟಿ ರೂ. ವಿಮೆ ಸೌಲಭ್ಯ ಒದಗಿಸಲಿದೆ.
ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ತಲಾ 5 ಲಕ್ಷ ರೂ. ಹಾಗೂ ಮಾವುತರು, ಕಾವಾಡಿಗಳಿಗೆ ತಲಾ 2 ಲಕ್ಷ ರೂ. ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ನಾಲ್ಕು ಮೀಸಲು ಆನೆಗಳು ಸೇರಿ ಒಟ್ಟು 18 ಆನೆಗಳಿಗೆ 87,50,000 ವಿಮೆ ಸೌಲಭ್ಯ ಸಿಗಲಿದೆ.
ವಲಯ ಅರಣ್ಯಾಧಿಕಾರಿ, ಪಶು ವೈದ್ಯಾಧಿಕಾರಿ, ಸಹಾಯಕರು, ಸಿಬ್ಬಂದಿಗಳಿಗೂ ವಿಮೆ ಸೌಲಭ್ಯ ಮಾಡಿಸಲಾಗಿದೆ.
ಸಾರ್ವಜನಿಕ ಆಸ್ತಿ- ಪಾಸ್ತಿಗೆ 50 ಲಕ್ಷ ರೂ. ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಗಜಪಡೆ ನಾಡಿಗೆ ಬಂದ ಸಂದರ್ಭದಲ್ಲಿ ತಾಲೀಮು ಅಥವಾ ಇನ್ನಿತರ ಸಂದರ್ಭದಲ್ಲಿ ಗಜಪಡೆಯಿಂದ ಸಾರ್ವಜನಿಕರಿಗೆ ಅಥವಾ ಸಾರ್ವಜನಿಕ ಆಸ್ತಿಗೆ ತೊಂದರೆಯಾದರೆ 50 ಲಕ್ಷದವರೆಗೆ ವಿಮೆ ಸೌಲಭ್ಯ ಜಾರಿಯಲ್ಲಿರುತ್ತದೆ.
ಈ ವಿಮೆಯು 15-8-2024 ರಿಂದ 18-10-2024 ರವರಗೆ ಜಾರಿಯಲ್ಲಿರಲಿದ್ದು, 75 ಸಾವಿರ ರೂ.ಗಳ ವಿಮೆ ಮೊತ್ತವನ್ನು ಅರಣ್ಯ ಇಲಾಖೆ ಪಾವತಿಸಿದೆ.