Sunday, November 10, 2024
Homeರಾಷ್ಟ್ರೀಯ | Nationalಮಂಗಳಸೂತ್ರ ಹೇಳಿಕೆ : ಪ್ರಧಾನಿ ಮೋದಿ ವಿರುದ್ಧ 20,000ಕ್ಕೂ ಅಧಿಕ ದೂರು ದಾಖಲು

ಮಂಗಳಸೂತ್ರ ಹೇಳಿಕೆ : ಪ್ರಧಾನಿ ಮೋದಿ ವಿರುದ್ಧ 20,000ಕ್ಕೂ ಅಧಿಕ ದೂರು ದಾಖಲು

ಬೆಂಗಳೂರು,ಏ.25- ಮಂಗಳಸೂತ್ರವನ್ನು ಕೀಳುತ್ತಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿರುವ ಹೇಳಿಕೆಯ ವಿರುದ್ಧ ದೇಶಾದ್ಯಂತ 20,000 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ ಎಂದು ಕಾಂಗ್ರೆಸ್ ತಿಳಿಸಿದೆ. ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಎಲ್.ಹನುಮಂತಯ್ಯ ಹಾಗೂ ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್ ಬಾಬು ಅವರು ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿಯವರು ಮಾಂಗಲ್ಯ ಸೂತ್ರದ ಬಗ್ಗೆ ಹೇಳಿಕೆ ನೀಡುವ ಮೂಲಕ ದೇಶದ ಸಂಸ್ಕೃತಿ ಹಾಗೂ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತಂದು ಅಪಮಾನ ಮಾಡಿದ್ದಾರೆ ಎಂಬ ಟೀಕೆಗಳಿವೆ. ಈ ಹಿನ್ನೆಲೆಯಲ್ಲಿ ದಾಖಲಾಗಿರುವ ದೂರುಗಳ ವಿಷಯದಲ್ಲಿ ಆಯೋಗ ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು.

ವಿರೋಧಪಕ್ಷಗಳ ವಿರುದ್ಧ ದೂರು ದಾಖಲಾದರೆ ತಕ್ಷಣವೇ ನೋಟೀಸ್ ನೀಡುವ ಆಯೋಗ ಈವರೆಗೂ ಒಂದು ನೋಟೀಸ್ ನೀಡಿಲ್ಲ. ಎಲ್ಲರಿಗೂ ಒಂದೇ ರೀತಿಯ ಕಾನೂನು ಅನ್ವಯವಾಗಬೇಕು. ಆಯೋಗ ಕೂಡಲೇ ಪ್ರಧಾನಿಯವರನ್ನು ಪ್ರಚಾರ ಹಾಗೂ ಚುನಾವಣಾ ಕಾರ್ಯದಿಂದ ವಿಮುಕ್ತಿಗೊಳಿಸಬೇಕು ಎಂದು ರಮೇಶ್ ಬಾಬು ಒತ್ತಾಯಿಸಿದರು.

ಪಂಚಖಾತ್ರಿ ಯೋಜನೆಗಳ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡುತ್ತಿರುವ ಬಿಜೆಪಿ, ಜೆಡಿಎಸ್ ವಿರುದ್ಧ ಕಾಂಗ್ರೆಸ್ ದೂರು ದಾಖಲಿಸಿವೆ. ಪಂಚಖಾತ್ರಿ ಯೋಜನೆಗಳಡಿ ರಾಜ್ಯಸರ್ಕಾರ 40 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ರಾಜ್ಯದ 5 ಕೋಟಿ ಫಲಾನುಭವಿಗಳಿಗೆ ಸೌಲಭ್ಯ ತಲುಪಿವೆ. ಬಿಜೆಪಿ ಮತ್ತು ಜೆಡಿಎಸ್ನವರ ಅಪಪ್ರಚಾರಗಳಿಗೆ ಕಿವಿಗೊಡದೆ ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಎಲ್.ಹನುಮಂತಯ್ಯ ಮಾತನಾಡಿ, ಜಾಗತಿಕ ಮಾನವ ಸೂಚ್ಯಂಕ ಅಭಿವೃದ್ಧಿಯಲ್ಲಿ ಭಾರತ, ಶ್ರೀಲಂಕಾ, ಭೂತಾನ್, ಬಾಂಗ್ಲಾ ದೇಶಕ್ಕಿಂತಲೂ ಕೆಳಗಿನ ಸ್ಥಾನದಲ್ಲಿವೆ. ದೇಶದಲ್ಲಿ ಬಡವ-ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಿದೆ. ಬಡ ಹಾಗೂ ಮಧ್ಯಮ ವರ್ಗದವರ ತಲಾ ಆದಾಯವನ್ನು ಹೆಚ್ಚಿಸುವ ಅಗತ್ಯವಿದೆ ಎಂಬುದು ರಾಹುಲ್ಗಾಂಧಿಯವರ ಅಭಿಪ್ರಾಯ. ಇದನ್ನು ತಿರುಚಿ ಪ್ರಧಾನಿ ಸೇರಿದಂತೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ವೈಯಕ್ತಿಕ ಆಸ್ತಿಗಳನ್ನು ಕಿತ್ತುಕೊಂಡು ಇಲ್ಲದವರಿಗೆ ಹಂಚಬೇಕು ಎಂಬುದು ರಾಹುಲ್ಗಾಂಧಿಯವರ ಅಭಿಪ್ರಾಯವಲ್ಲ. ಬಡ ಹಾಗೂ ಮಧ್ಯಮ ವರ್ಗದವರ ಜೀವನಮಟ್ಟ ಸುಧಾರಣೆಯಾಗುವಂತಹ ಕ್ರಮಗಳನ್ನು ಅನುಷ್ಠಾನ ಗೊಳಿಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ. ಇದನ್ನು ಬಿಜೆಪಿಯವರಿಂದ ಸಹಿಸಲಾಗುತ್ತಿಲ್ಲ ಎಂದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ತನ್ನ ಅಭಿವೃದ್ಧಿ ಯೋಜನೆಗಳ ಆಧಾರಿತವಾಗಿ ಮತ ಕೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಪಪ್ರಚಾರದ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದೆ. ಬಿಜೆಪಿಯವರಿಗೆ ಮುಂದಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ನೀಲನಕ್ಷೆಯೇ ಇಲ್ಲ ಎಂದು ಲೇವಡಿ ಮಾಡಿದರು.ಸ್ಯಾಂ ಪಿಟ್ರೋಡಾ ಅವರ ಹೇಳಿಕೆ ಸಂಪೂರ್ಣ ವೈಯಕ್ತಿಕವಾಗಿದೆ. ಅದು ಪಕ್ಷದ ಅಭಿಪ್ರಾಯವಲ್ಲ ಎಂದು ಹೇಳಿದರು.

RELATED ARTICLES

Latest News