Wednesday, December 6, 2023
Homeರಾಜಕೀಯಲೋಕ ಚುನಾವಣೆಗೆ ಬಿಜೆಪಿ ರಣತಂತ್ರ, 12 ಹಾಲಿ ಸಂಸದರಿಗೆ ಕೊಕ್

ಲೋಕ ಚುನಾವಣೆಗೆ ಬಿಜೆಪಿ ರಣತಂತ್ರ, 12 ಹಾಲಿ ಸಂಸದರಿಗೆ ಕೊಕ್

ಬೆಂಗಳೂರು,ನ.10- ಮುಂಬರುವ 2024ರ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ದತೆ ಆರಂಭಿಸಿರುವ ಬಿಜೆಪಿ ತಯಾರಿಯ ಮೊದಲ ಭಾಗವಾಗಿ ಕೆಲ ಹಾಲಿ ಸಂಸದರಿಗೆ ಕೊಕ್ ನೀಡಲು ಪಕ್ಷ ಮುಂದಾಗಿದೆ. ಈಗಾಗಲೇ ಕೇಂದ್ರದ ಮಾಜಿ ಸಚಿವ ಹಾಗೂ ಡಿ.ವಿ.ಸದಾನಂದಾಗೌಡರು ಸಕ್ರೀಯ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡಿರುವ ಬೆನ್ನಲೇ ರಾಜ್ಯದ 12 ಹಾಲಿ ಸಂಸದರು ಟಿಕೆಟ್ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

ಪಕ್ಷದ ವರಿಷ್ಠರು ಇತ್ತೀಚೆಗೆ ಡಿವಿಎಸ್ ಅವರನ್ನು ದೆಹಲಿಗೆ ಆಹ್ವಾನಿಸಿ, ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಮೂಲಕ ನೀಡಿದ ಸಂದೇಶವೀಗ ನಿಚ್ಚಳವಾಗಿದೆ. ಹಾಲಿ ಸಂಸದರಲ್ಲಿ ಯಾರೆಲ್ಲ, ಕಳಪೆ ಸಾಧನೆ, ವಯಸ್ಸು ಹಾಗೂ ಅನಾರೋಗ್ಯ ಕಾರಣಕ್ಕೆ ಹಿಂದೆ ಸರಿಯುವ ಸಾಧ್ಯತೆಗಳಿವೆ ಎಂಬ ಮಾಹಿತಿ ಸಂಗ್ರಹಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಅವರು ತೋರಿರುವ ಕ್ಷಮತೆಯನ್ನು ಪರಿಗಣಿಸಿ ಹಾಗೂ ಕೆಲವು ಕ್ಷೇತ್ರಗಳಲ್ಲಿ ಮುಂದಿನ ತಲೆಮಾರಿನ ನಾಯಕರನ್ನು ಬೆಳೆಸುವ ಅನಿವಾರ್ಯತೆ ಇರುವ ದೃಷ್ಟಿಯಲ್ಲಿ ಕೆಲವು ಹಾಲಿ ಸಂಸದರಿಗೆ ಟಿಕೆಟ್ ನೀಡದೇ ಇರಬಹುದು ಎಂದು ಹೇಳಲಾಗಿದೆ.

ಅವರಲ್ಲಿ ದಾವಣಗೆರೆಯ ಸಂಸದ ಜಿಎಂ ಸಿದ್ದೇಶ್ವರ, ಚಾಮರಾಜ ನಗರ ಸಂಸದ ಶ್ರೀನಿವಾಸ್ ಪ್ರಸಾದ್, ಉತ್ತರ ಕನ್ನಡದ ಸಂಸದ ಅನಂತ ಕುಮಾರ್ ಹೆಗ್ಡೆ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಮುಂತಾದವರು ಸೇರಿದ್ದಾರೆ. ಈ ಕುರಿತು ದೆಹಲಿ ಮಟ್ಟದಲ್ಲಿ ಚರ್ಚೆ ನಡೆದಿದ್ದು, 75 ವರ್ಷ ದಾಟಿದ ಮತ್ತು ಪಕ್ಷದಲ್ಲಿ ಸಕ್ರಿಯವಾಗಿಲ್ಲದ ಕೆಲ ಸಂಸದರಿಗೆ ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಿರಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ.

ಹಾಲಿ ಸಂಸದರಿಗೆ ಈ ಕುರಿತು ಈಗಾಗಲೇ ಮಾಹಿತಿ ನೀಡಲಾಗಿದೆ. ಪಕ್ಷದ ವಿರುದ್ದ ಬಂಡಾಯ ಚಟುವಟಿಕೆ ನಡೆಸದೇ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ ಎಂಬ ಸೂಚನೆಯನ್ನು ನೀಡಲಾಗಿದೆ. ಮುಂಬರುವ ದಿನಗಳಲ್ಲಿ ನಿಮಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂಬ ಭರವಸೆಯನ್ನು ನೀಡಲಾಗಿದೆ. ಇನ್ನೊಂದೆಡೆ ಈ ಬಾರಿ 12ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಯುವ ಮುಖಗಳಿಗೆ ಮಣೆ ಹಾಕಲು ನಿರ್ಧರಿಸಲಾಗಿದೆ. ಹೀಗಾಗಿ ಹೊಸ ಮುಖಗಳಿಗಾಗಿ ಈಗಾಗಲೇ ಹುಡುಕಾಟ ನಡೆದಿದೆ.

ಬೆಂಗಳೂರು ಉತ್ತರ ಕ್ಷೇತ್ರದ ಸಂಸದ, ಮಾಜಿ ಸಿಎಂ ಸದಾನಂದ ಗೌಡ, ಚಿಕ್ಕಬಳ್ಳಾಪುರದ ಸಂಸದ ಬಚ್ಚೇಗೌಡ, ಕೋಲಾರ ಸಂಸದ ಮುನಿಸ್ವಾಮಿ, ಚಾಮರಾಜನಗರದ ಸಂಸದ ಶ್ರೀನಿವಾಸ ಪ್ರಸಾದ್, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ, ತುಮಕೂರು ಸಂಸದ ಜಿ.ಎಸ್.ಬಸವರಾಜು, ಕೊಪ್ಪಳದ ಸಂಸದ ಸಂಗಣ್ಣ ಕರಡಿ, ದಾವಣಗೆರೆಯ ಸಂಸದ ಜಿ.ಎಂ.ಸಿದ್ದೇಶ್ವರ ಸೇರಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ 3 ದಿನ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ

ನಳೀನ್‍ಕುಮಾರ್ ಲೋಕಸಭೆಯಲ್ಲಿ ಮಂಗಳೂರು ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಸಮರ್ಪಕವಾಗಿ ಮುನ್ನಡೆಸದೇ ಇರುವುದು ನಳೀನ್‍ಕುಮಾರ್ ಕಟೀಲ್ ಅವರ ಮೇಲೆ ಬಿಜೆಪಿ ಹೈಕಮಾಂಡ್ ಮುನಿಸಿಕೊಳ್ಳಲು ಪ್ರಮುಖ ಕಾರಣ ಎನ್ನಲಾಗಿದೆ. ಸ್ವಕ್ಷೇತ್ರದಲ್ಲೇ (ದಕ್ಷಿಣ ಕನ್ನಡ) ಅವರ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಗುಟ್ಟಾಗೇನೂ ಉಳಿದಿಲ್ಲ. ಹಾಗಾಗಿಯೇ, ಕಟೀಲ್ ಅವರಿಗೆ ಈ ಬಾರಿ ಟಿಕೆಟ್ ನೀಡದಿರಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತ್‍ಕುಮಾರ್ ಹೆಗ್ಡೆಗೂ ಟಿಕೆಟ್ ನಿರಾಕರಿಸುವ ಸಾಧ್ಯತೆಗಳು ದಟ್ಟವಾಗಿದ್ದು, ಅಗ್ರೆಸ್ಸಿವ್ ಹಿಂದುತ್ವವವಾದನ್ನೇ ನೆಚ್ಚಿಕೊಂಡು ಬಂದಿದ್ದ ಅನಂತ್‍ಕುಮಾರ್ ಹೆಗ್ಡೆಯರಿಗೆ ಕೆಲವು ವಿಚಾರಗಳಲ್ಲಿ ಬಿಜೆಪಿ ಹೈಕಮಾಂಡ್ ಮೇಲೆ ಮುನಿಸು ಬಂದಿದೆ.

ಅತ್ತ ಹೈಕಮಾಂಡ್ ಕೂಡ ಇವರನ್ನು ಓಲೈಸಲು ಪ್ರಯತ್ನಿಸಿಲ್ಲ. ಪಕ್ಷದ ಸಭೆ, ಸಮಾರಂಭಗಳಿಂದ ಅವರಿಗೆ ಆಹ್ವಾನವನ್ನೂ ನೀಡದೇ ದೂರ ಇಟ್ಟಿದೆ. ಇತ್ತೀಚೆಗೆ ಮೋದಿಯವರು ಚುನಾವಣಾ ಪ್ರಚಾರಕ್ಕಾಗಿ ಉತ್ತರ ಕನ್ನಡಕ್ಕೆ ಬಂದಾಗಲೂ ಅನಂತಕುಮಾರ್ ಹೆಗ್ಡೆಗೆ ಆಹ್ವಾನ ಇರಲಿಲ್ಲ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಈ ಬಾರಿ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದೆ.

ಕೇಂದ್ರದ ಹಾಲಿ ಸಚಿವೆ ಶೋಭಾ ಕರದ್ಲಾಂಜೆಗೂ ಟಕೆಟ್ ಸಿಗುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ. ರಾಜ್ಯ ರಾಜಕರಾಣದತ್ತ ಒಲವು ತೋರಿರುವ ಅವರು ಪಕ್ಷದ ರಾಜ್ಯಧ್ಯಕ್ಷರಾದರೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಸಾಧ್ಯತೆಗಳಿಲ್ಲ. ಇದು ನಿಜವಾದರೆ, ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಮಾಜಿ ಸಚಿವ ಸಿ.ಟಿ.ರವಿ ಅಭ್ಯರ್ಥಿಯಾಗುವ ಸಂಭವವಿದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆಯ ಪ್ರಯೋಗಗಳನ್ನು ಮಾಡಿದರೂ ಬಿಜೆಪಿಗೆ ಗೆಲುವು ಸಿಕ್ಕಲಿಲ್ಲ ಎಂಬುದು ಬೇರೆ ಮಾತು. ಹಾಗಿದ್ದರೂ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಇದೇ ರೀತಿಯ ಪ್ರಯೋಗವನ್ನು ಮಾಡಲು ಬಿಜೆಪಿ ನಿರ್ಧರಿಸಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆಯ ತಂತ್ರಗಾರಿಕೆಯನ್ನು ಅನುಸರಿಸಿದ್ದು ಸರಿಯಾಗಿದೇ ಇತ್ತು. ಆದರೆ, ರಾಜ್ಯದಲ್ಲಿ ಅದಾಗಲೇ ಬಿಜೆಪಿ ವಿರೋಧಿ ಅಲೆ ಪ್ರಬಲವಾಗಿದ್ದರಿಂದ, ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಕೆಲವು ಸಚಿವರು ಹಾಗೂ ಶಾಸಕರ ವಿರುದ್ಧ ಭ್ರಷ್ಟಾಚಾರ ಆರೋಪಗಳು ಇದ್ದಿದ್ದರಿಂದ, ಮೇಲಾಗಿ ಜನಾಭಿಪ್ರಾಯವವೂ ಅದೇ ಆಗಿದ್ದರಿಂದಾಗಿ ಬಿಜೆಪಿಯ ಪ್ರಯೋಗಗಳು ಫಲಿಸಲಿಲ್ಲ.

ಆದರೆ, ಲೋಕಸಭಾ ಚುನಾವಣೆಯಲ್ಲಿ ಹಾಗಾಗುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಖಂಡಿತವಾಗಿಯೂ ಪ್ರಧಾನಿ ಮೋದಿಯವರ ಪ್ರಭಾವ ಹೆಚ್ಚಾಗಿ ಕೆಲಸ ಮಾಡುತ್ತದೆ. ಅಲ್ಲಿ, ಗೆಲುವು ಬಿಜೆಪಿಗೆ ಕಟ್ಟಿಟ್ಟ ಬುತ್ತಿ. ಹಾಗಾಗಿ, ಈ ಬಾರಿಯೂ ಪ್ರಯೋಗಗಳಿಗೆ ಇನ್ನೂ ಅವಕಾಶವಿದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.

ಯಾರ್ಯಾರಿಗೆ ಕೊಕ್?
ಶ್ರೀನಿವಾಸ್ ಪ್ರಸಾದ್ (ಚಾಮರಾಜನಗರ)
ರಮೇಶ್ ಜಿಗಜಿಣಗಿ (ವಿಜಯಪುರ)
ಮಂಗಳಾ ಅಂಗಡಿ (ಬೆಳಗಾವಿ)
ಪಿ.ಸಿ ಗದ್ದಿಗೌಡರ್ (ಬಾಗಲಕೋಟ್)
ಶಿವಕುಮಾರ್ ಉದಾಸಿ (ಹಾವೇರಿ)
ಜಿ.ಎಸ್ ಬಸವರಾಜ್ (ತುಮಕೂರು)
ಬಿ.ಎನ್ ಬಚ್ಚೇಗೌಡ (ಚಿಕ್ಕಬಳ್ಳಾಪುರ)
ಡಿ.ವಿ ಸದಾನಂದಗೌಡ (ಬೆಂಗಳೂರು ಉತ್ತರ)
ಜಿ.ಎಂ ಸಿದ್ದೇಶ್ (ದಾವಣಗೆರೆ)
ನಳೀನ್ ಕುಮಾರ್ ಕಟೀಲ್ ( ದಕ್ಷಿಣ ಕನ್ನಡ )
ಅನಂತ ಕುಮಾರ್ ಹೆಗ್ಡೆ( ಉತ್ತರ ಕನ್ನಡ)
ಸಂಗಣ್ಣ ಕರಡಿ( ಕೊಪ್ಪಳ)

RELATED ARTICLES

Latest News