Thursday, December 12, 2024
Homeರಾಜ್ಯಬಿಬಿಎಂಪಿಯಲ್ಲಿ 2067 ಕೋಟಿ ರೂ.ಗಳ ಅವ್ಯವಹಾರ : 9 ಐಎಎಸ್ ಅಧಿಕಾರಿಗಳ ವಿರುದ್ಧ ಇ.ಡಿ.ಗೆ ದೂರು

ಬಿಬಿಎಂಪಿಯಲ್ಲಿ 2067 ಕೋಟಿ ರೂ.ಗಳ ಅವ್ಯವಹಾರ : 9 ಐಎಎಸ್ ಅಧಿಕಾರಿಗಳ ವಿರುದ್ಧ ಇ.ಡಿ.ಗೆ ದೂರು

2067 Crores Scam : Complaint to ED against 9 IAS officers

ಬೆಂಗಳೂರು,ಅ.23- ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 9 ಐಎಎಸ್ ಅಧಿಕಾರಿಗಳ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಿಸಲಾಗಿದೆ. ಬಿಬಿಎಂಪಿಯಲ್ಲಿ ನಡೆದಿದೆ ಎನ್ನಲಾದ 2067 ಕೋಟಿರೂ. ಮೊತ್ತದ ಬೃಹತ್ ಹಗರಣ ಕುರಿತಂತೆ ಹಾಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ 9 ಐಎಎಸ್ ಅಧಿಕಾರಿಗಳ ವಿರುದ್ಧ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಜಾರಿ ನಿರ್ದೇಶನಾಲಯ (ಇಡಿ) ಯಲ್ಲಿ ದೂರು ದಾಖಲಿಸಿದ್ದಾರೆ.

ಕೇಂದ್ರ ಸರ್ಕಾರದ 13ನೇ, 14ನೇ ಮತ್ತು 15ನೇ ಹಣಕಾಸು ಆಯೋಗದ ಅನುದಾನಗಳನ್ನು ದುರ್ಬಳಕೆ ಮಾಡಿಕೊಂಡು 2067 ಕೋಟಿ ಮೊತ್ತದ ಹಗರಣ ಬಿಬಿಎಂಪಿಯಲ್ಲಿ ನಡೆದಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ಧಾರೆ.

ಈ ಬಹತ್ ಹಗರಣದಲ್ಲಿ ಭಾಗಿಯಾಗಿರುವ ಎಲ್ಲ ಭ್ರಷ್ಟರ ವಿರುದ್ಧ ಇಡಿಯಲ್ಲಿ ದೂರು ದಾಖಲಿಸಿದ್ದೇನೆ. 2013 ರಿಂದ 2025 ರ ಅವಧಿಯಲ್ಲಿ ಪಾಲಿಕೆಯ ಆಯುಕ್ತರು ಹಾಗೂ ಮುಖ್ಯ ಆಯುಕ್ತರುಗಳಾಗಿದ್ದ ಲಕ್ಷೀನಾರಾಯಣ್, ಜಿ. ಕುಮಾರ್ ನಾಯಕ್ (ಮಾನ್ಯ ಸಂಸದರು, ರಾಯಚೂರು ಲೋಕಸಭಾ ಕ್ಷೇತ್ರ), ಮಂಜುನಾಥ್ ಪ್ರಸಾದ್, ಬಿ. ಹೆಚ್. ಅನಿಲ್ ಕುಮಾರ್, ಗೌರವ್ ಗುಪ್ತಾ ಹಾಗೂ ಹಾಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರುಗಳ ವಿರುದ್ಧ ದೂರು ದಾಖಲು ಮಾಡಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದೇ ಅವಧಿಯಲ್ಲಿ ಪಾಲಿಕೆಯ ಆಡಳಿತಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿರುವ ವಿಜಯ್ ಭಾಸ್ಕರ್, ರಾಕೇಶ್ ಸಿಂಗ್ ಮತ್ತು ಉಮಾಶಂಕರ್ ವಿರುದ್ಧವೂ ದೂರು ದಾಖಲು ಮಾಡಿದ್ದೇನೆ. ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ 9 ಐಎಎಸ್ ಅಧಿಕಾರಿಗಳ ವಿರುದ್ದ ದೂರು ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.

2013ರಿಂದ 2025 ರ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಇಲಾಖೆಯ ವಿಶೇಷ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಅಭಿಯಂತರರುಗಳು ಸೇರಿದಂತೆ ಸಂಬಂಧಪಟ್ಟ ಎಲ್ಲಾ ತಪ್ಪಿತಸ್ಥ ಭ್ರಷ್ಟ ಅಧಿಕಾರಿಗಳು ಹಾಗೂ ಈ ಹಗರಣಗಳಲ್ಲಿ ಭಾಗಿಯಾಗಿರುವ ಎಲ್ಲ ಗುತ್ತಿಗೆದಾರರ ವಿರುದ್ಧ 1295 ಪುಟಗಳ ದೂರು ದಾಖಲು ಮಾಡಲಾಗಿದೆ.

ಈ ಅವಧಿಯಲ್ಲಿ 13, 14 ಮತ್ತು 15ನೇ ಹಣಕಾಸು ಆಯೋಗದ ಒಟ್ಟು 2066,94,89,000/- ಗಳಷ್ಟು ಬಹತ್ ಮೊತ್ತ ಬಿಡುಗಡೆ ಆಗಿರುತ್ತದೆ. ಈ ಅನುದಾನದ ಪೈಕಿ ಶೇ. 90 ರಷ್ಟು ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪವನ್ನು ರಮೇಶ್ ಮಾಡಿದ್ದಾರೆ.

ಮೆಕ್ಯಾನಿಕಲ್ ಸ್ವೀಪಿಂಗ್ ಮಿಷಿನ್ಗಳು ಮತ್ತು ಕಾಂಪ್ಯಕ್ಟರ್ಗಳ ಖರೀದಿ, ವೈಜ್ಞಾನಿಕ ಸಂಸ್ಕರಣಾ ಘಟಕಗಳ ನಿರ್ಮಾಣ, ಕೆಸಿಡಿಸಿ ಘಟಕದ ಉನ್ನತೀಕರಣ, ಭೂಭರ್ತಿ ಕೇಂದ್ರಗಳ ಅಭಿವದ್ಧಿ, ಸಂಸ್ಕರಣಾ ಘಟಕಗಳು ಮತ್ತು ಭೂಭರ್ತಿ ಕೇಂದ್ರಗಳ ಸುತ್ತಮುತ್ತಲಿನ ಗ್ರಾಮಗಳ ಮತ್ತು ಪ್ರದೇಶಗಳ ಅಭಿವದ್ಧಿ, ಆ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳ ಕಲ್ಪಿಸುವಿಕೆ ಹಾಗೂ ಸುಧಾರಿತ ಉಪಕರಣಗಳ ಖರೀದಿ ಸೇರಿದಂತೆ ಹತ್ತು ಹಲವು ಹೆಸರುಗಳಲ್ಲಿ ಒಟ್ಟು 2,067 ಕೋಟಿ ರೂಪಾಯಿಗಳಷ್ಟು ಕೇಂದ್ರ ಸರ್ಕಾರದ 13, 14 ಮತ್ತು 15ನೇ ಹಣಕಾಸು ಆಯೋಗದ ಅನುದಾನವನ್ನು ವೆಚ್ಛ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಅನುದಾನಗಳ ಮೂಲಕ 2016-17 ರಲ್ಲಿ ಪಾಲಿಕೆ ಕ್ರಯಕ್ಕೆ ಪಡೆದಿದ್ದ 60 ಕ್ಕೂ ಹೆಚ್ಚು ಮೆಕ್ಯಾನಿಕಲ್ ಸ್ವೀಪರ್ಗಳು ಮತ್ತು ಕಾಂಪ್ಯಕ್ಟರ್ಗಳ ಪೈಕಿ ಈಗ ಕೇವಲ ಮೂರ್ನಾಲ್ಕು ವಾಹನಗಳು ಮಾತ್ರವೇ ಕಾರ್ಯ ನಿರ್ವಹಿಸುತ್ತಿದ್ದು, ಇನ್ನುಳಿದ ವಾಹನಗಳು ಎಲ್ಲಿವೆ ಎಂದು ಯಾರಿಗೂ ತಿಳಿದಿಲ್ಲ.

430 ಕೋಟಿ ರೂಪಾಯಿಗಳಷ್ಟು ಬಹತ್ ಮೊತ್ತದ ಅನುದಾನವನ್ನು ವೆಚ್ಛ ಮಾಡಿ 2016 ರಲ್ಲಿ ಸುಬ್ಬರಾಯನ ಪಾಳ್ಯ, ಚಿಕ್ಕನಾಗಮಂಗಲ, ಸೀಗೇಹಳ್ಳಿ, ಕನ್ನಳ್ಳಿ, ಲಿಂಗಧೀರನಹಳ್ಳಿ ಮತ್ತು ದೊಡ್ಡ ಬಿದರಕಲ್ಲು ಗ್ರಾಮಗಳಲ್ಲಿ ನಿರ್ಮಿಸಿದ್ದ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳ ಪೈಕಿ ಮೂರು ಘಟಕಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಒಂದು ಘಟಕ ಕುಂಟುತ್ತಾ ಸಾಗಿದ್ದರೆ ಚಿಕ್ಕನಾಗಮಂಗಲ ಮತ್ತು ದೊಡ್ಡ ಬಿದರಕಲ್ಲು ಘಟಕಗಳು ಮಾತ್ರ ಸ್ವಲ್ಪ ಮಟ್ಟಿಗೆ ಕಾರ್ಯ ನಿರ್ವಹಿಸುತ್ತಿವೆ.

ಬಾಗಲೂರು, ಮಿಟ್ಟಗಾನ ಹಳ್ಳಿ ಮತ್ತು ಬೈಯಪ್ಪನ ಹಳ್ಳಿಯಲ್ಲಿರುವ ಭೂಭರ್ತಿ ಕೇಂದ್ರಗಳನ್ನು ಅತ್ಯಂತ ಅವೈಜ್ಞಾನಿಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಭೂಭರ್ತಿ ಕೇಂದ್ರಗಳ ಅಭಿವದ್ಧಿ ಕಾರ್ಯಗಳಿಗೆಂದು ಮತ್ತು ತ್ಯಾಜ್ಯ ದ್ರಾವಣ ಭೂಮಿಯ ಒಡಲನ್ನು ಸೇರದಂತೆ ವೈಜ್ಞಾನಿಕವಾಗಿ ನಿರ್ವಹಣೆ ಮಾಡಲೆಂದು ಪ್ರತಿಯೊಂದು ಭೂಭರ್ತಿ ಕೇಂದ್ರಕ್ಕೆ ನೂರಾರು ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈ ಪೈಕಿ ಶೇ. 90 ರಷ್ಟು ಅನುದಾನ ಲೂಟಿ ಮಾಡಲಾಗಿದೆ.

ಬಾಗಲೂರು ಮತ್ತು ಮಿಟ್ಟಗಾನ ಹಳ್ಳಿ ಭೂಭರ್ತಿ ಕೇಂದ್ರಗಳಲ್ಲಿ ತಳ ಮಟ್ಟದಿಂದ ಮೇಲ್ಭಾಗದವರೆಗೆ ಸಿಂಥೆಟಿಕ್‌್ಸ ಲೈನರ್ಗಳ ಅಳವಡಿಕೆ ಕಾರ್ಯಕ್ಕೆಂದು ಪ್ರಭಾವೀ ಸಚಿವ ಕೆ. ಜೆ. ಜಾರ್ಜ್ ಅವರ ಅತ್ಯಾಪ್ತ ವಂದಿತ್ ರೆಡ್ಡಿ ಎಂಬ ಮಹಾ ವಂಚಕನಿಗೆ ಬರೋಬ್ಬರಿ 110 ಕೋಟಿ ರೂಪಾಯಿಗಳಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ. ಆದರೆ ಲೇಯರ್ ಬದಲಿಗೆ ಕಳಪೆ ದರ್ಜೆಯ ಪ್ಲಾಸ್ಟಿಕ್ ಹೊದಿಕೆ ಹಾಕಿ ವಂಚನೆ ಮಾಡಲಾಗಿದೆ.

ಬಿಡುಗಡೆಯಾಗಿರುವ ಒಟ್ಟು ಅನುದಾನಗಳ ಮೂಲಕ ಕೈಗೊಳ್ಳಲಾಗಿರುವ ಕಾರ್ಯಗಳ ಪೈಕಿ ಶೇ. 10% ರಷ್ಟು ಕಾರ್ಯಗಳನ್ನೂ ಮಾಡಿರುವ ಸಾಕ್ಷಾಧಾರಗಳನ್ನು ತೋರಿಸಲು ಈ ಅಧಿಕಾರಿಗಳಿಗೆ ಸಾಧ್ಯವಾಗುವುದೇ ಇಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸವಾಲು ಹಾಕಿದ್ದಾರೆ.

RELATED ARTICLES

Latest News