ಬೆಂಗಳೂರು,ಏ.3- ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದಾಗಿನಿಂದ ಅಕ್ರಮವನ್ನು ತಡೆಯಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇದುವರೆಗೂ 26.11 ಕೋಟಿ ಹಣವನ್ನು ಜಪ್ತಿ ಮಾಡಿದೆ.ಅದೇ ರೀತಿ 29.42 ಕೋಟಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, 3.13 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇದುವರೆಗೂ ರಾಜ್ಯದಲ್ಲಿ ಈ ಪ್ರಮಾಣದ ಡ್ರಗ್ಸ್ ಅನ್ನು ಜಪ್ತಿ ಮಾಡಿರುವುದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್, ಆದಾಯ ತೆರಿಗೆ, ಅಬಕಾರಿ ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ 26,11,61,464 ರೂ. ನಗದು ಜಪ್ತಿ ಮಾಡಲಾಗಿದೆ. ಇದುವರೆಗೂ 16.02 ಕೆಜಿ ಚಿನ್ನ ವಶಪಡಿಸಿಕೊಂಡಿದ್ದು9.43 ಕೋಟಿ ರೂ. ಮೌಲ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.
27,23,150 ರೂ. ಮೌಲ್ಯದ 59.04 ಕೆಜಿ ಬೆಳ್ಳಿ ಹಾಗೂ 9 ಲಕ್ಷ ಮೌಲ್ಯದ 21.17 ಕ್ಯಾರೆಟ್ ವಜ್ರದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಲಾದ ಮದ್ಯ, ಡ್ರಗ್ಸ್, ನಗದು, ಬೆಲೆ ಬಾಳುವ ಲೋಹ, ಉಚಿತ ಉಡುಗೊರೆಗಳಿಗೆ ಸಂಬಂಧಿಸಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.
ರಾಮಮೂರ್ತಿನಗರ ಠಾಣೆಯ ಪೊಲೀಸ್ ತಂಡ 22 ಲಕ್ಷ ಮೌಲ್ಯದ 215ಗ್ರಾಂ ಡ್ರಗ್ಸ್, ದೇವನಹಳ್ಳಿ ಪೊಲೀಸ್ ತಂಡ 85 ಲಕ್ಷ ಮೌಲ್ಯದ 850 ಗ್ರಾಂ ಡ್ರಗ್ಸ್ ಹಾಗೂ ನಗರದ ವಿವಿಧ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 2.2 ಕೋಟಿ ಹಣ, 25.29 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಕುಗನೊಳಿ ಚೆಕ್ ಪೋಸ್ಟ್ ನಲ್ಲಿ 3ಲಕ್ಷ ಹಣ ಜಪ್ತಿ
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ವೇಳೆ ದಾಖಲೆಯಿಲ್ಲದೇ ತೆಗೆದುಕೊಂಡು ಹೋಗುತ್ತಿದ್ದ 3 ಲಕ್ಷ ಹಣವನ್ನು ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿಯ ಕುಗನೊಳಿ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ.
ಈ ಮಾರ್ಗದಲ್ಲಿ ಬರುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ದಾಖಲೆ ಇಲ್ಲದ ಹಣವನ್ನು ಪೊಲೀಸ್ ಸಿಬ್ಬಂದಿ ಸೀಜ್ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಜಿಲ್ಲೆಯ ಕುಡಚಿ ಚೆಕ್ ಪೋಸ್ಟ್ ನಲ್ಲಿ ಲಾರಿಯನ್ನು ತಪಾಸಣೆ ಮಾಡಿದಾಗ 9.86 ಲಕ್ಷ ಮೌಲ್ಯದ ಟಿವಿಗಳು ಸೇರಿದಂತೆ ವಿವಿಧ ಸರಕುಗಳನ್ನು ವಶಕ್ಕೆ ಪಡೆಯಲಾಗಿದೆ.