ಬೆಂಗಳೂರು, ಏ.8- ತಮ್ಮ ಬಳಿ 100 ಕೋಟಿ ಕಪ್ಪು ಹಣವಿದೆಯೆಂದು ನಂಬಿಸಿ, ಖೋಟಾ ನೋಟುಗಳನ್ನು ತೋರಿಸಿ ಮೋಸ ಮಾಡುತ್ತಿದ್ದ ಐದು ಮಂದಿ ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿ 30.91 ಕೋಟಿ ರೂ. ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಬಸವನಗುಡಿಯ ಸುಧೀರ್ (49), ದಾಸರಹಳ್ಳಿಯ ಕಿಶೋರ್ (44), ಆಂಧ್ರಪ್ರದೇಶ ಮೂಲದ ಚಂದ್ರಶೇಖರ್ (48),ತೀರ್ಥ ರಿಷಿ ಅಲಿಯಾಸ್ ಗಿರೀಶ (28) ಮತ್ತು ವಿಜಯನಗರದ ವಿನಯ್ (42) ಬಂಧಿತ ವಂಚಕರು. ಈ ವಂಚಕರು ಖಾಸಗಿ ಟ್ರಸ್ಟ್ಗಳಿಗೆ ಸಿಎಸ್ಆರ್ ಫಂಡ್ ನೀಡುವುದಾಗಿ ವಂಚಿಸುತ್ತಿದ್ದರಲ್ಲದೇ, ಈ ಹಿಂದೆ ಗ್ಯಾಂಬ್ಲಿಂಗ್, ಹವಾಲಾ, ರೈಸ್ ಪುಲ್ಲಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿ ರುವುದು ವಿಚಾರಣೆಯಿಂದ ತಿಳಿದುಬಂದಿದೆ.
ಈ ಗ್ಯಾಂಗ್ ವಿಡಿಯೋ ಕಾಲ್ ಮಾಡಿ ಖೋಟಾ ನೋಟಿನ ಹಣದ ರಾಶಿಯನ್ನು ತೋರಿಸಿ ಕಪ್ಪು ಹಣವಿದೆ ಎಂದು ನಂಬಿಸಿ ಟ್ರಸ್ಟ್ಗಳಿಗೆ ಲಾಭಾಂಶವಿಲ್ಲದೆ ಹಣ ವರ್ಗಾಯಿಸುವುದಾಗಿ ಆಮಿಷವೊಡ್ಡುತ್ತಿತ್ತು ಎಂದು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಬಂಧಿತ ಐದು ಮಂದಿಯ ಪೈಕಿ ಒಬ್ಬಾತ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಕೊಂಡು ಅವರ ವಿಶ್ವಾಸ ಬೆಳಸಿಕೊಂಡಿದ್ದಾನೆ. ತದನಂತರದಲ್ಲಿ ಅವರನ್ನು ಭೇಟಿ ಮಾಡಿ, ನಮಗೆ ಪರಿಚಯವಿರುವ ಕಂಪನಿಯವರ ಬಳಿ ಕಾನೂನು ಬದ್ದ ಹಣವಿದ್ದು, ಆ ಕಂಪನಿಯವರು ಅಧಿಕೃತವಾಗಿ ಟ್ರಸ್ಟ್, ಇನ್ನಿತರ ಸಂಸ್ಥೆಗಳಿಗೆ ಯಾವುದೇ ಲಾಭಾಂಶವಿಲ್ಲದೆ ಹಣವನ್ನು ವರ್ಗಾಯಿಸುವುದಾಗಿ ಹೇಳಿದ್ದಾನೆ.
ಅದಕ್ಕೆ ಪ್ರತಿಯಾಗಿ ಆ ಟ್ರಸ್ಟ್ ಅಥವಾ ಸಂಸ್ಥೆಗಳು ಕಂಪನಿಯವರಿಗೆ ಶೇ.40 ರಷ್ಟು ಹಣವನ್ನು ನಗದು ಮುಖಾಂತರ ಮಾತ್ರ ಸಲ್ಲಿಸಿದರೆ ಸಾಕು ಆ ಎರಡು ಪಾರ್ಟಿಗಳನ್ನು ವ್ಯವಸ್ಥೆ ಮಾಡುವುದಕ್ಕೆ ನೀವು ನಮಗೆ ಶೇ.10ರಷ್ಟು ಕಮಿಷನ್ ಹಣವನ್ನು ನೀಡಬೇಕಾಗುತ್ತದೆ ಎಂದು ಅವರಿಗೆ ತಿಳಿಸಿದ್ದಾನೆ. ಒಂದು ಪಾರ್ಟಿಯ ಬಳಿ ಲಭ್ಯವಿರುವ ಕಪ್ಪು ಹಣವನ್ನು ವಿಡಿಯೋ ಕಾಲ್ ಮುಖಾಂತರ ತೋರಿಸಲು ನೀವು ನಮಗೆ 25 ಲಕ್ಷ ಹಣವನ್ನು ಮುಂಗಡವಾಗಿ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾನೆ.
ಈ ಹಣವನ್ನು ನೀಡಿದರೆ ನಾವು ನಿಮಗೆ ವಿಡಿಯೋ ಕಾಲ್ ಮಾಡಿ ನಮ್ಮ ಬಳಿ ಇರುವ ಹಣದ ಬಂಡಲ್ಗಳನ್ನು ತೋರಿಸುತ್ತೇವೆ ಎಂದು ನಂಬಿಸಿದ್ದಾನೆ.ಅದರಂತೆ ಆ ವ್ಯಕ್ತಿಯನ್ನು ಒಂದು ಸ್ಥಳಕ್ಕೆ ಕರೆಸಿಕೊಂಡು ವಿಡಿಯೋ ಕಾಲ್ ಮುಖಾಂತರ ತಮ್ಮ ಬಳಿ ಇರುವ ಹಣದ ಬಂಡಲ್ಗಳನ್ನು ತೋರಿಸಿದ್ದಾನೆ.ವಿಡಿಯೋ ಕಾಲ್ ಮಾಡಿದ ವ್ಯಕ್ತಿಯ ಬಗ್ಗೆ ಸಂದೇಹ ಪಟ್ಟು ಇವರ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಈ ಜಾಲದ ಹಿಂದೆ ಐದು ಮಂದಿ ಇರುವುದು ಖಚಿತ ಪಡಿಸಿಕೊಂಡು ಕಾರ್ಯಾಚರಣೆ ಮುಂದುವರೆಸಿ ಬಲೆಗೆ ಬೀಳಿಸಿಕೊಳ್ಳವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆ ಮಾಡಿ ಅವರ ವಶದಲ್ಲಿದ್ದ ಒಟ್ಟು 30,91,60,000 ರೂ.ಗಳ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
500 ರೂ. ಮುಖಬೆಲೆಯ 1900 ಬಂಡಲ್ಗಳು, 2000 ಮುಖಬೆಲೆಯ 1070 ಬಂಡಲ್ಗಳು ಹಾಗೂ 2000 ಮುಖಬೆಲೆಯ 80 ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಹೆಚ್ಚಿನ ತನಿಖೆಯ ಸಲುವಾಗಿ ಪೊಲೀಸ್ ವಶಕ್ಕೆ ಪಡೆದು ಅವರ ಮನೆ ಮತ್ತು ಕಚೇರಿಯಲ್ಲಿ ಶೋಧ ನಡೆಸಿ ಒಬ್ಬನ ಅರೋಪಿಯೊಬ್ಬನ ಮನೆ ಮತ್ತು ಕಚೇರಿಯಲ್ಲಿದ್ದ ಒಟ್ಟು 23,49,800 ರೂ. ಅಸಲಿ ನೋಟುಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಶಪಡಿಸಿಕೊಂಡ ಹಣವು ಸಾರ್ವಜನಿಕರಿಂದ ಮೋಸ ಮಾಡಿ ಪಡೆದುಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಮನವಿ:
ಇದೇ ರೀತಿ ಬೇರೆ ಬೇರೆ ಸಾರ್ವಜನಿಕರಿಗೆ ಮೋಸ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಿದ್ದು, ಸಾರ್ವಜನಿಕರು ಮೋಸ ಹೋಗಿದಲ್ಲಿ, ಕೇಂದ್ರ ಅಪರಾದ ವಿಭಾಗದ ಮಹಿಳಾ ಸಂರಕ್ಷಣಾ ದಳದ ಅ„ಕಾರಿಗಳನ್ನು ಸಂಪರ್ಕಿಸಲು ಕೋರಿದೆ.