ಬೆಂಗಳೂರು,ಡಿ.5- ನಗರದ ಸಿಸಿಬಿ ಹಾಗೂ ಎಂಟು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರು ನವೆಂಬರ್ ತಿಂಗಳಿನಲ್ಲಿ ಮಾದಕ ವಸ್ತುಗಳ ಮಾರಾಟ, ಸೇವನೆ ಮಾಡುವವರ ವಿರುದ್ಧ ಕಾರ್ಯಾಚರಣೆ ಕೈಗೊಂಡು 8 ಮಂದಿ ವಿದೇಶಿಗರು ಹಾಗೂ 39 ಮಂದಿ ಭಾರತೀಯರು ಸೇರಿದಂತೆ 47 ಮಂದಿಯನ್ನು ಬಂಧಿಸಿದ್ದಾರೆ.
ಡ್ರಗ್‍ಪೆಡ್ಲರ್‍ಗಳ ವಿರುದ್ಧ 32 ಪ್ರಕರಣಗಳನ್ನು ದಾಖಲಿಸಿಕೊಂಡು ಒಟ್ಟು 10.86 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಶಪಡಿಸಿಕೊಳ್ಳಲಾಗಿರುವ ಮಾದಕ ವಸ್ತುಗಳ ಪೈಕಿ 59.985 ಕೆ.ಜಿ. ಗಾಂಜಾ, ಹಾಶಿಷ್ ಆಯಿಲ್ 1 ಗ್ರಾಂ, ಎಂ.ಡಿ.ಎಂ.ಎ-17.918 ಕೆ.ಜಿ., ಆಂಪೆಟಮೈನ್ ಮತ್ತು ಮ್ಯಥಕೋಲಿನ್ 15 ಗ್ರಾಂ., 150 ಎಕ್ಸ್‍ಟೆಸಿ, ಯಾಬ ಹಾಗೂ ಇತರೆ ಮಾತ್ರೆಗಳು ಸೇರಿವೆ. ಗಾಂಜಾ ಮಾರಾಟದ 19 ಪ್ರಕರಣಗಳಲ್ಲಿ 59.985 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದು, 30 ಭಾರತೀಯರು ಹಾಗೂ ಒಬ್ಬ ವಿದೇಶಿ ಪ್ರಜೆಯನ್ನು ಬಂಧಿಸಿ 34.16 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಹಾಶಿಷ್ ಆಯಿಲ್ ಪ್ರಕರಣದಲ್ಲಿ ಇಬ್ಬರು ಭಾರತೀಯರನ್ನು ಬಂಧಿಸಿ 14.14 ಲಕ್ಷ ರೂ. ಮೌಲ್ಯದ 1 ಕೆ.ಜಿ. ಆಯಿಲ್ ವಶಪಡಿಸಿಕೊಂಡರೆ, 6 ಮಂದಿ ಭಾರತೀಯರು ಹಾಗೂ 7 ಮಂದಿ ವಿದೇಶಿಗರನ್ನು ಬಂಧಿಸಿ 17.918 ಕೆ.ಜಿ., ಎಂ.ಡಿ.ಎಂ.ಎ ವಶಪಡಿಸಿಕೊಂಡು 11 ಪ್ರಕರಣಗಳನ್ನು ದಾಖಲಿಸಿ ಕೊಳ್ಳಲಾಗಿದೆ.
ಆಂಪೆಟಮೈನ್ ಮತ್ತು ಮ್ಯಥಕೋಲಿನ್ ಮಾರಾಟ ಪ್ರಕರಣದಲ್ಲಿ ಭಾರತೀಯನನ್ನು ಬಂಧಿಸಿ 60 ಸಾವಿರ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡರೆ, ಎಕ್ಸ್‍ಟೆಸಿ, ಯಾಬ ಹಾಗೂ ಇತರೆ ಮಾತ್ರೆಗಳ ಮಾರಾಟ ಪ್ರಕರಣದಲ್ಲಿ 6 ಲಕ್ಷ ಮೌಲ್ಯದ 150 ಪಿಲ್ಸ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಸರ್ಕಾರ ಕಾಲಾಹರಣ : ಬಿಜೆಪಿ ಆಕ್ರೋಶ
ಇಬ್ಬರು ಆರೋಪಿಗಳ ಸೆರೆ 8 ದ್ವಿಚಕ್ರ ವಾಹನಗಳ ವಶ
ಬೆಂಗಳೂರು, ಡಿ.5- ಮನೆಗಳ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿ 8.50 ಲಕ್ಷ ರೂ. ಮೌಲ್ಯದ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿ ಕೊಂಡಿದ್ದಾರೆ.
ಆರೋಪಿಗಳ ಬಂಧನದಿಂದ ವಿವೇಕನಗರ ಪೊಲೀಸ್ ಠಾಣೆಯ 3 ಪ್ರಕರಣಗಳು ಹಾಗೂ ಶಿವಾಜಿನಗರ, ರಾಮಮೂರ್ತಿ ನಗರ ಪೊಲೀಸ್ ಠಾಣೆಯ ತಲಾ 1 ಪ್ರಕರಣ, ರಾಮನಗರ ಜಿಲ್ಲೆಯ ಸಾತನೂರು ಠಾಣೆಯ 1 ಪ್ರಕರಣ ಹಾಗೂ ಇತರೆ ಪೊಲೀಸ್ ಠಾಣೆಗಳ 2 ಪ್ರಕರಣ ಸೇರಿದಂತೆ ಒಟ್ಟು 8 ಪ್ರಕರಣಗಳು ಪತ್ತೆಯಾಗಿವೆ.
ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ ಮುಂದೆ ನಿಲ್ಲಿಸಿದಂತಹ ದ್ವಿಚಕ್ರ ವಾಹನ ಕಳುವಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ಕೈಗೊಂಡು ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿ ಕೊಂಡಿದ್ದಾರೆ.
ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶೇಖರ್ ಅವರ ಮಾರ್ಗದರ್ಶನದಲ್ಲಿ ಕಬ್ಬನ್‍ಪಾರ್ಕ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಬಾಲಕೃಷ್ಣ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಅನಿಲ್‍ಕುಮಾರ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿ ದ್ದರು.
ರಾತ್ರಿ ವೇಳೆ ಅನುಮಾನಾಸ್ಪದವಾಗಿ ಓಡಾಡಿದರೆ ಕಠಿಣ ಕ್ರಮ ಎಚ್ಚರಿಕೆ
ಬೆಂಗಳೂರು, ಡಿ.5- ರಾತ್ರಿ ವೇಳೆ ಅನುಮಾನಾಸ್ಪದವಾಗಿ ಓಡಾಡಿದರೆ ನಗರ ಪೊಲೀಸರು ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಚ್ಚರ. ಮೊನ್ನೆ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ವೇಳೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಗಳನ್ನು ಪರಿಶೀಲನೆ ಮಾಡುವ ಸಂದರ್ಭದಲ್ಲಿ 5 ಮಂದಿ ಹಳೆ ಆರೋಪಿಗಳು ಪತ್ತೆಯಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
ನಗರ ಪೊಲೀಸರು ನಗರದ ಎಲ್ಲಾ ವಿಭಾಗಗಳ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 577 ವೈನ್‍ಸ್ಟೋರ್, 969 ಬಾರ್ ಅಂಡ್ ರೆಸ್ಟೊರೆಂಟ್‍ಗಳು, ಸ್ಥಳೀಯ ಡಾಬಾ, ಹೋಟೆಲ್, 704 ಲಾಡ್ಜ್‍ಗಳು, 1682 ಬೇಕರಿ-ಟೀ ಸ್ಟಾಲ್‍ಗಳ ಬಳಿ ಅನಗತ್ಯವಾಗಿ ಸೇರುವ ವ್ಯಕ್ತಿಗಳನ್ನು ಪರಿಶೀಲಿಸಿ ಕ್ರಮ ವಹಿಸುವ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು.
715 ಇತರೆ ಸ್ಥಳಗಳನ್ನು ಪರಿಶೀಲಿಸಿ 5111 ವ್ಯಕ್ತಿಗಳನ್ನು ಪರಿಶೀಲಿಸಲಾಗಿದೆ. 4282 ವಾಹನಗಳನ್ನು ತಪಾಸಣೆ ಮಾಡಲಾಗಿದೆ. ನಿಯಮ ಉಲ್ಲಂಘನೆ ಕಂಡುಬಂದ ಸ್ಥಳಗಳಲ್ಲಿ ಕೊಟ್ಪಾ ಕಾಯ್ದೆ, ಕೆ.ಪಿ ಆಕ್ಟ್ ಐಪಿಸಿಯಡಿ 2425 ಪ್ರಕರಣಗಳನ್ನು ಹಾಗೂ 1007 ಲಘ ಪ್ರಕರಗಳನ್ನು ಹಾಗೂ 4 ಐಪಿಸಿಯಡಿ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.
ವಿಶೇಷ ಕಾರ್ಯಚರಣೆ ವೇಳೆ 247 ರೌಡಿ ಶೀಟರ್‍ಗಳನ್ನು ಪರಿಶೀಲಿಸಲಾಗಿದ್ದು, ಈ ಪೈಕಿ ಒಬ್ಬ ರೌಡಿಶೀಟರ್ ಬಳಿ ಮಾರಕಾಸ್ತ್ರ ಕಂಡುಬಂದ ಹಿನ್ನಲೆಯಲ್ಲಿ ಆತನ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತಪಾಸಣೆ ವೇಳೆ ಬಾರ್ ಮತ್ತು ಹೋಟೆಲ್ ಮುಂಭಾಗದಲ್ಲಿ ಸಾರ್ವಜನಿಕರನ್ನು ಗುಂಪಾಗಿ ಸೇರಿಸಿಕೊಂಡು ಸಾರ್ವಜನಿಕ ಉಪದ್ರವ ಉಂಟು ಮಾಡುತ್ತಿದ್ದವರ ವಿರುದ್ಧ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ.
31 ಪ್ರಕರಣ ದಾಖಲು: ಕೊಟ್ಪಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಅಂಗಡಿ ಹಾಗೂ ವ್ಯಕ್ತಿಗಳ ವಿರುದ್ಧ 31 ಪ್ರಕರಣಗಳನ್ನು ಸಹ ದಾಖಲಿಸಿ ಕ್ರಮ ವಹಿಸಲಾಗಿದೆ.
ಲಾಡ್ಜ್ ಮೇಲೆ ದಾಳಿ: ಎಲ್ಲಾ ಲಾಡ್ಜ್‍ಗಳ ತಪಾಸಣೆ ವೇಳೆಯಲ್ಲಿ ಪಶ್ಚಿಮ ವಿಭಾಗದ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಲಾಡ್ಜ್‍ವೊಂದರ ರೂಮ್‍ನಲ್ಲಿ ಜೂಜಾಟದಲ್ಲಿ ತೊಡಗಿದ್ದ ಆರು ಮಂದಿಯನ್ನು ವಶಕ್ಕೆ ಪಡೆದು 56400 ನಗದು ಹಾಗೂ ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ.
ಅಸಂಘಟಿತ ಕಾರ್ಮಿಕ ವಲಯಗಳಿಗೆ ಇಎಸ್‍ಐ, ಪಿಎಫ್ ಸೌಲಭ್ಯ
ವ್ಯಕ್ತಿ ಆತ್ಮಹತ್ಯೆ ಬೆಳಕಿಗೆ: ಅದೇ ರೀತಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ಜ್‍ನ ಕೊಠಡಿಯೊಂದರಲ್ಲಿ ವ್ಯಕ್ತಿಯೊಬ್ಬ ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಬೆಳಕಿಗೆ ಬಂದಿದ್ದು ಅಸ್ವಾಭಾವಿಕ ಸಾವು ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.