ಬೆಂಗಳೂರು,ಫೆ.19- ರಾಜ್ಯದ 49 ಹೊಸ ತಾಲೂಕುಗಳಿಗೆ 2-3 ವರ್ಷದಲ್ಲಿ ಆಡಳಿತ ಕಚೇರಿ ನಿರ್ಮಿಸಿಕೊಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ವಿಧಾನಸಭೆಗೆ ಭರವಸೆ ನೀಡಿದರು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಯು.ಬಿ.ಬಣಕರ್ ಪರವಾಗಿ ಶಾಸಕ ಪ್ರಕಾಶ ಕೋಳೀವಾಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 63 ಹೊಸ ತಾಲೂಕುಗಳು ಮಂಜೂರಾಗಿವೆ. ಆದರೆ 14 ತಾಲೂಕುಗಳಿಗೆ ಮಾತ್ರ ಆಡಳಿತ ಕಚೇರಿ ಮಂಜೂರಾಗಿದೆ. ಉಳಿದ 49 ಹೊಸ ತಾಲೂಕುಗಳಿಗೆ ಹಿಂದಿನ ಸರ್ಕಾರದಲ್ಲಿ ಆಡಳಿತ ಕಚೇರಿ ಮಂಜೂರಾಗಿಲ್ಲ ಎಂದರು.
ರಾಜ್ಯದಲ್ಲಿ ಹಳೆಯ ಕೆಲವು ತಾಲೂಕುಗಳಲ್ಲಿ ಆಡಳಿತ ತಾಲೂಕು ಕಚೇರಿ ಬೇಡಿಕೆಯಿದೆ. ಒಟ್ಟಾರೆ 80 ರಿಂದ 100 ತಾಲೂಕು ಆಡಳಿತ ಕಚೇರಿಗೆ ಬೇಡಿಕೆಯಿದೆ. ಅನುದಾನದ ಲಭ್ಯತೆ ಆಧಾರದ ಮೇಲೆ ಆಡಳಿತ ಕಚೇರಿಗಳನ್ನು ನಿರ್ಮಾಣ ಮಾಡಲಾಗುವುದು. ಆಡಳಿತ ಕಚೇರಿಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಗಲುವ ವೆಚ್ಚವನ್ನು ತಯಾರು ಮಾಡಲಾಗುತ್ತಿದೆ. ಒಂದು ಕಟ್ಟಡ ನಿರ್ಮಾಣಕ್ಕೆ ಮಾದರಿ ಅಂದಾಜು ವೆಚ್ಚ ಸಿದ್ದಪಡಿಸಲಾಗುವುದು. ಇಲ್ಲದಿದ್ದರೆ ಅಂದಾಜು ವೆಚ್ಚ ಪರಿಷ್ಕರಣೆಯಾಗಬೇಕಾಗುತ್ತದೆ. ಸದ್ಯಕ್ಕೆ 10 ಕೋಟಿ ರೂ. ಇದ್ದು, ಅದನ್ನು ವಾಸ್ತವಿಕ ಅಂದಾಜು ವೆಚ್ಚದ ಆಧಾರದ ಮೇಲೆ ಪರಿಷ್ಕರಣೆ ಮಾಡಲಾಗುತ್ತದೆ. ಈ ಸಂಬಂಧ ಲೋಕೋಪಯೋಗಿ ಮತ್ತು ಗೃಹಮಂಡಳಿಯ ಎಂಜಿನಯರ್‍ಗಳ ಜೊತೆ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಕುಡಿಯುವ ನೀರಿನ ಸಮಸ್ಯೆ
ಒಂದು ಸಾವಿರ ಗ್ರಾಮ ಆಡಳಿತಾಕಾರಿ ನೇಮಕ:
ಇನ್ನೊಂದು ತಿಂಗಳಿನಲ್ಲಿ ಒಂದು ಸಾವಿರ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸುವುದಾಗಿ ಶಾಸಕ ಕಿರಣ್‍ಕುಮಾರ್ ಕೋಡ್ಗಿ ಅವರ ಪ್ರಶ್ನೆಗೆ ಕಂದಾಯ ಸಚಿವರು ಉತ್ತರಿಸಿದರು.ಕಂದಾಯ ಇಲಾಖೆಯಿಂದ ನಿಯೋಜನೆ ಮೇಲೆ ಹೋಗಲು 2 ಸಾವಿರ ಹುದ್ದೆಗಳಿಗೆ ಬೇಡಿಕೆಯಿದೆ. ಆದರೆ ನಾನು ಅವಕಾಶ ಮಾಡಿಕೊಟ್ಟಿಲ್ಲ. ಕಣ್ತಪ್ಪಿಸಿ ಅಧಿಕಾರಿಗಳು ಕೆಲವೊಂದು ನಿಯೋಜನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.
ಕುಂದಾಪುರ ತಾಲೂಕು ಕಚೇರಿಯಲ್ಲಿ 19 ಹುದ್ದೆಗಳ ಸಿಬ್ಬಂದಿ ನಿಯೋಜನೆ ಮೇಲೆ ಬೇರೆಡೆ ಕೆಲಸ ಮಾಡುತ್ತಿದ್ದಾರೆ. ಹಿಂದೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ತೀರಾ ಅನಿವಾರ್ಯ ಎನಿಸಿದ ಐವರನ್ನು ಹೊರತುಪಡಿಸಿ ಉಳಿದ 14 ಮಂದಿ ಸಿಬ್ಬಂದಿಯ ನಿಯೋಜನೆಯನ್ನು ರದ್ದುಪಡಿಸಿ ಮೂಲ ಸ್ಥಾನಕ್ಕೆ ಮರಳುವಂತೆ ಸೂಚಿಸಲಾಗುವುದು. ಇದು ಕೇವಲ ಕುಂದಾಪುರಕ್ಕೆ ಸೀಮಿತವಾಗುವುದಿಲ್ಲ. ವ್ಯಕ್ತಿ ಹಿತಕ್ಕಿಂತ ಸಾರ್ವಜನಿಕರ ಹಿತ ಮುಖ್ಯ ಎಂದರು.
ವಸತಿ ಶಾಲೆ ಕುವೆಂಪು ಘೋಷ ವಾಕ್ಯ ಬದಲಾವಣೆ ಕುರಿತು ಸದನದಲ್ಲಿ ವಾಕ್ಸಮರ
ಕುಂದಾಪುರ ತಾಲೂಕು ಕಚೇರಿಯಲ್ಲಿ 110 ಹುದ್ದೆಗಳು ಮಂಜೂರಾಗಿದ್ದು, 70 ಹುದ್ದೆಗಳು ಭರ್ತಿಯಾಗಿವೆ. 36 ಹುದ್ದೆಗಳು ಖಾಲಿ ಇವೆ. ಭರ್ತಿಯಾದ ಹುದ್ದೆಗಳಲ್ಲಿ 19 ಜನರು ನಿಯೋಜನೆ ಮೇಲೆ ಬೇರೆಡೆ ಕೆಲಸ ಮಾಡುತ್ತಿರುವುದು ತಪ್ಪು. ಕಂದಾಯ ಇಲಾಖೆಯಲ್ಲಿ ಜನರ ಕೆಲಸಗಳು ಹೆಚ್ಚಾಗಿರುತ್ತವೆ. ಆದರೂ ಕಳೆದ ಸರ್ಕಾರದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ನಿಯೋಜನೆ ಮೇಲೆ ಬೇರೆಡೆಗೆ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು. ಕಂದಾಯ ಇಲಾಖೆಯ ಸಿಬ್ಬಂದಿಗೆ 2014 ರಿಂದ ಕಂದಾಯ ವಿಷಯಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಿಲ್ಲ. ಹೀಗಾಗಿ ಗ್ರಾಮ ಲೆಕ್ಕಿಗರಿಗೆ ನಿಯಮ ಗೊತ್ತಿಲ್ಲ. ಈ ಸಂಬಂಧ ಒಂದು ಯೋಜನೆ ರೂಪಿಸಿ ಸರ್ಕಾರದಿಂದ ತರಬೇತಿ ನೀಡಲಾಗುವುದು ಎಂದರು.