Friday, May 3, 2024
Homeರಾಜ್ಯವಸತಿ ಶಾಲೆ ಕುವೆಂಪು ಘೋಷ ವಾಕ್ಯ ಬದಲಾವಣೆ ಕುರಿತು ಸದನದಲ್ಲಿ ವಾಕ್ಸಮರ

ವಸತಿ ಶಾಲೆ ಕುವೆಂಪು ಘೋಷ ವಾಕ್ಯ ಬದಲಾವಣೆ ಕುರಿತು ಸದನದಲ್ಲಿ ವಾಕ್ಸಮರ

ಬೆಂಗಳೂರು,ಫೆ.19- ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಹಾಕುವ ಘೋಷವಾಕ್ಯ ಬದಲಾವಣೆ ವಿಧಾನದ ಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿಗೆ ಎಡೆ ಮಾಡಿಕೊಟ್ಟಿತು. ಈ ಮೊದಲು ವಸತಿ ಶಾಲೆಗಳಲ್ಲಿ ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ರಾಷ್ಟ್ರೀಯ ಕವಿ ಕುವೆಂಪು ಅವರ ಘೋಷವಾಕ್ಯವನ್ನು ಬದಲಾಯಿಸಿ ಸಮಾಜ ಕಲ್ಯಾಣ ಇಲಾಖೆ ಹೊಸದಾಗಿ ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂಬ ನಾಮಫಲಕ ಹಾಕಲು ಹೊರಡಿಸಿದ ಸುತ್ತೋಲೆ ವಿವಾದವನ್ನು ಸೃಷ್ಟಿಸಿತು.

ವಿಧಾನಸಭೆಯ ಶೂನ್ಯವೇಳೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಷಯ ಪ್ರಸ್ತಾಪಿಸಿ ರಾಷ್ಟ್ರಕವಿ ಕುವೆಂಪು ಅವರ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂಬ ಘೋಷವಾಖ್ಯವನ್ನು ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಬದಲಿಸಿ ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಹಾಕಲು ಉದ್ದೇಶಿಸಲಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಇತ್ತ ವಿಧಾನಪರಿಷತ್‍ನಲ್ಲೂ ಶೂನ್ಯವೇಳೆಯಲ್ಲೂ ಇದೇ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರ ಸೂಕ್ತ ಉತ್ತರ ಕೊಡಬೇಕೆಂದು ಪಟ್ಟು ಹಿಡಿದಿದ್ದರಿಂದ ಸದನವನ್ನು ಕೆಲ ಕಾಲ ಮುಂದೂಡಲಾಯಿತು.

ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಜಯೇಂದ್ರ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಈ ಬಗ್ಗೆ ತೀರ್ಮಾನಿಸಿದ್ದಾರೆ ಎಂಬ ವಿಚಾರ ವಾಟ್ಸಪ್‍ಗಳಲ್ಲಿ ಹರಿದಾಡುತ್ತಿದೆ. ಇದು ಕುವೆಂಪು ಅವರಿಗೆ ಮಾಡಿದ ಅಪಮಾನ. ಈ ಹಿಂದೆ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ ಎಂಬ ಸುತ್ತೋಲೆ ಹೊರಡಿಸಿ ವಾಪಸ್ ಪಡೆದಿರುವ ಉಲ್ಲೇಖವಿದೆ. ಇದೊಂದು ಗಂಭೀರ ವಿಚಾರ. ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.

ಆಗ ಬಿಜೆಪಿಯ ಹಿರಿಯ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ ಎದ್ದು ನಿಂತು ಮಾತನಾಡಲು ಮುಂದಾದರು. ಆ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ವಾಸ್ತವಾಂಶದ ಆಧಾರದ ಮೇಲೆ ಉತ್ತರ ಕೊಡುತ್ತೇವೆ.ಹೆಚ್ಚಿಗೆ ಮಾತನಾಡುವುದಾದರೆ ನಾವೂ ಮಾತನಾಡಬಹುದು ಎಂದಾಗ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಲು ಮುಂದಾದರು. ಆಗ ಏರಿದ ಧ್ವನಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ಮಾತನಾಡಲು ಮುಂದಾದಾಗ ವಾಗ್ವಾದ ನಡೆದು ಗೊಂದಲ ಉಂಟಾಯಿತು.

ಒಂದು ಹಂತದಲ್ಲಿ ಕೃಷ್ಣಭೈರೇಗೌಡರು ಒಂದು ಹಂತದಲ್ಲಿ ಕುವೆಂಪು ಅವರ ವಿಚಾರವನ್ನು ಪಠ್ಯದಿಂದ ಕಿತ್ತು ಹಾಕಿದವರು ನೀವು ಎಂದು ತಿರುಗೇಟು ನೀಡಿದರು. ಸಚಿವ ಪ್ರಿಯಾಂಕ ಖರ್ಗೆ ಅವರು ಕೂಡ ಕೃಷ್ಣಭೈರೇಗೌಡರ ಮಾತಿಗೆ ಬೆಂಬಲ ನೀಡಲು ಮುಂದಾದರು. ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಈ ವಿಚಾರದಲ್ಲಿ ಸರ್ಕಾರದ ನೀತಿ ಇರಬೇಕು. ಒಬ್ಬ ಪ್ರಧಾನ ಕಾರ್ಯದರ್ಶಿ ಈ ರೀತಿ ಮಾಡಿರುವುದು ಸರಿಯಲ್ಲ. ವಿಧಾನಸೌಧದ ಮುಂಭಾಗದಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಎಂಬ ವಾಕ್ಯವಿದೆ. ಇದನ್ನೂ ಬದಲು ಮಾಡುತ್ತೀರಾ? ಒಬ್ಬ ಅಧಿಕಾರಿ ಈ ರೀತಿ ಆದೇಶ ಹೊರಡಿಸಲು ಅಧಿಕಾರ ಕೊಟ್ಟವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಹಿರಿಯ ಸದಸ್ಯ ಆರಗ ಜ್ಞಾನೇಂದ್ರ ಮಾತನಾಡಿ, ಈ ಸರ್ಕಾರದಲ್ಲಿ ಲಂಗುಲಗಾಮು ಯಾವುದೂ ಇಲ್ಲ ಎಂದು ಛೇಡಿಸಿದರು. ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಈ ವಿಚಾರದ ಬಗ್ಗೆ ನಾಳೆ ಸಮಾಜ ಕಲ್ಯಾಣ ಸಚಿವರು ಉತ್ತರ ಕೊಡುತ್ತಾರೆ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು. ಪರಿಷತ್‍ನಲ್ಲೂ ಗದ್ದಲ: ಶೂನ್ಯವೇಳೆಯಲ್ಲಿ ಬಿಜೆಪಿ ಎನ್.ರವಿಕುಮಾರ್ ಅವರು ವಿಷಯ ಪ್ರಸ್ತಾಪಿಸಿ ಸರ್ಕಾರ ಏಕಾಏಕಿ ಈ ರೀತಿ ಬದಲಾವಣೆ ಮಾಡಿರುವ ಉದ್ದೇಶವಾದರೂ ಏನು? ಮೊನ್ನೆ ಹಿಂದು ಧಾರ್ಮಿಕ ಹಬ್ಬಗಳನ್ನು ಆಚರಣೆ ಮಾಡಬಾರದೆಂದು ಸುತ್ತೋಲೆ ಹೊರಡಿಸಲಾಗಿತ್ತು. ಈಗ ಕುವೆಂಪು ಅವರಿಗೆ ಅವಮಾನ ಮಾಡುವ ರೀತಿಯಲ್ಲಿ ಬದಲಾವಣೆ ಮಾಡಲಾಗಿದೆ.ಸರ್ಕಾರಕ್ಕೆ ಕೆಲಸವಿಲ್ಲವೇ ಎಂದು ಪ್ರಶ್ನಿಸಿದರು.

ಜೈನಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಆಗ ಸಭಾ ನಾಯಕ ಭೋಸರಾಜ್ ಅವರು, ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಿಸುವುದಾಗಿ ಹೇಳಿದರು. ಇದನ್ನು ಒಪ್ಪದ ಬಿಜೆಪಿ ಸದಸ್ಯರು, ಈಗಲೇ ಉತ್ತರ ಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಸಭಾಪತಿ ಪೀಠದಲ್ಲಿ ಕುಳಿತಿದ್ದ ತೇಜಸ್ವಿನಿ ರಮೇಶ್ ಅವರು, ಶೂನ್ಯವೇಳೆ ಆಗಿರುವುದರಿಂದ ಚರ್ಚೆಗೆ ಅವಕಾಶವಿಲ್ಲ. ನೀವು ಬೇರೊಂದು ರೂಪದಲ್ಲಿ ಚರ್ಚೆಗೆ ಅವಕಾಶ ಕೊಡುತ್ತೇನೆ. ಈಗಾಗಲೇ ಸಭಾನಾಯಕರು ಸರ್ಕಾರದಿಂದ ಉತ್ತರ ಕೊಡಿಸುವುದಾಗಿ ಹೇಳಿದ್ದಾರೆಂದರು.

ಇದಕ್ಕೆ ತೃಪ್ತರಾಗದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದರು. ಇದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು ಆರೋಪ-ಪ್ರತ್ಯಾರೋಪಗಳ ಸುರಿಮಳೆ ಗೈದರು. ಕಾಂಗ್ರೆಸ್‍ನ ಯು.ಬಿ.ವೆಂಕಟೇಶ್ ಅವರು, ಕ್ರಿಯಾಲೋಪ ಎತ್ತಿ ಶೂನ್ಯವೇಳೆಯಲ್ಲಿ ಕೇವಲ ವಿಷಯ ಪ್ರಸ್ತಾಪಕ್ಕೆ ಅವಕಾಶವಿದೆ. ಸದನದಲ್ಲಿ ಸಂಬಂಧಪಟ್ಟ ಸಚಿವರು ಇಲ್ಲದಿದ್ದಾಗ ಸಭಾ ನಾಯಕರು ಉತ್ತರಕೊಡಿಸುತ್ತೇನೆ ಎಂದಮೇಲೆ ಅಲ್ಲಿಗೆ ವಿಷಯವೇ ಮುಗಿಯುತ್ತದೆ. ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಬಿಜೆಪಿ ಸದಸ್ಯರು ತರಾಟೆಗೆ ತೆಗೆದುಕೊಂಡರು.

ಈ ಹಂತದಲ್ಲೂ ಸದನದಲ್ಲಿ ಗದ್ದಲ, ಕೋಲಾಹಲ ಉಂಟಾಯಿತು. ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಕ್ಕಾರದ ಘೋಷಣೆಗಳನ್ನು ಕೂಗಿದರೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಕೂಡ ತಿರುಗೇಟು ನೀಡಿದರು.
ಸದನ ಸಹಜ ಸ್ಥಿತಿಗೆ ಬಾರದ ಕಾರಣ ಸದನವನ್ನು ಮುಂದೂಡಲಾಯಿತು.

RELATED ARTICLES

Latest News