Sunday, May 19, 2024
Homeರಾಜ್ಯಜೈನಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಜೈನಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಬೆಂಗಳೂರು,ಫೆ.19-ಜೈನಮುನಿಗಳಾದ ಆಚಾರ್ಯ ವಿದ್ಯಾಸಾಗರ ಮಹಾರಾಜರ ನಿಧನಕ್ಕೆ ವಿಧಾನಸಭೆಯಲ್ಲಿಂದು ಸಂತಾಪ ಸೂಚಿಸಲಾಯಿತು. ಇಂದು ಬೆಳಿಗ್ಗೆ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸಂತಾಪ ಸೂಚನಾ ನಿರ್ಣಯವನ್ನು ಕೈಗೆತ್ತಿಕೊಂಡು, ವಿದ್ಯಾಸಾಗರ ಮಹಾರಾಜರು ನಿಧನರಾಗಿರುವುದನ್ನು ಅತ್ಯಂತ ವಿಷಾದದಿಂದ ಸದನಕ್ಕೆ ತಿಳಿಸಿದರು.

ವಿದ್ಯಾಸಾಗರ ಮಹಾರಾಜರು 1946 ರ ಅಕ್ಟೋಬರ್ 10 ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗದಲ್ಲಿ ಜನಿಸಿದರು. ದಿಗಂಬರ ಜೈನ ಪಂಥದವರಾಗಿದ್ದ ಮುನಿಗಳು ತಮ್ಮ 22ನೇ ವಯಸ್ಸಿನಲ್ಲಿ ಆಚಾರ್ಯ ಜ್ಞಾನಸಾಗರ ಮುನಿಮಹಾರಾಜರಿಂದ ಮುನಿದೀಕ್ಷೆ ಪಡೆದು ನಂತರ ಆಚಾರ್ಯ ಪದವಿ ಪಡೆದಿದ್ದ ವಿದ್ಯಾಸಾಗರ ಮಹಾರಾಜರು ಸಂಸ್ಕøತ, ಪ್ರಾಕೃತ ಭಾಷೆಗಳು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದು, ನಿರಂಜನ ಶತಕ, ಭಾವನ ಶತಕ, ಶ್ರಮನ ಶತಕ ಪ್ರಮುಖವಾಗಿವೆ. ಅಲ್ಲದೆ ಕನ್ನಡ, ಹಿಂದಿ, ಮರಾಠಿ ಸೇರಿದಂತೆ 8 ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಅವರು, ಹಿಂದಿಯಲ್ಲಿ ರಚಿಸಿದ ಮೂಖಮಾಠಿ ಎಂಬ ಮಹಾಕಾವ್ಯವು ಪ್ರಸಿದ್ಧಿಯಾಗಿದೆ ಎಂದು ಹೇಳಿದರು.

ಜೈನಮುನಿಗಳಾಗಿ ವಿದ್ಯಾಸಾಗರ ಮಹಾರಾಜರು 120 ಜನರಿಗೆ ಮುನಿದೀಕ್ಷೆಯನ್ನು ನೀಡಿದ್ದು, ಹಲವರಿಗೆ ಬ್ರಹ್ಮಚರ್ಯ ದೀಕ್ಷೆಗಳನ್ನು ನೀಡಿದ್ದಾರೆ. ದೇಶದಲ್ಲಿಯೇ ಅತೀ ದೊಡ್ಡ ಗೋಶಾಲೆಯನ್ನು ನಿರ್ಮಿಸಿದ್ದು, ಬಡ ನಿರ್ಗತಿಕ ಮಕ್ಕಳಿಗೆ ಪದವಿಯವರೆಗೆ ಉಚಿತ ಶಿಕ್ಷಣವನ್ನು ನೀಡಿದ್ದಾರೆ ಎಂದು ಶ್ಲಾಘಿಸಿದರು. ತಮ್ಮ ಜೀವನದುದ್ದಕ್ಕೂ ಜೈನ ಧರ್ಮದ ತತ್ವಗಳನ್ನು ಪಾಲಿಸಿ, ಬೋಸುತ್ತಾ ಕವಿ, ಯೋಗಿ, ಸಾಧಕ-ಚಿಂತಕ ಹಾಗೂ ದಾರ್ಶನಿಕ ರೂಪದಲ್ಲಿ ಕಾಣಿಸಿಕೊಂಡಿದ್ದ ಮೇರು ಸಂತ ಆಚಾರ್ಯರು ಛತ್ತೀಸ್‍ಗಡ ರಾಜ್ಯದ ಡೋಂಗರಗಡದಲ್ಲಿರುವ ಚಂದ್ರಗಿರಿ ತೀರ್ಥದಲ್ಲಿ ಸಲ್ಲೇಖನ ವ್ರತ ಕೈಗೊಂಡು ನಿನ್ನೆ ನಸುಕಿನ ಜಾವ ಇಹಲೋಕವನ್ನು ತ್ಯಜಿಸಿದ್ದಾರೆ ಎಂದು ವಿಷಾದಿಸಿದರು.

ಇಡಿ ಮುಚ್ಚಿದರೆ ಬಿಜೆಪಿ ತೊರೆಯಲಿದ್ದಾರೆ ಘಟಾನುಘಟಿ ನಾಯಕರು : ಕೇಜ್ರಿ

ಸಭಾಧ್ಯಕ್ಷರು ಮಂಡಿಸಿದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ, ವಿದ್ಯಾಸಾಗರ ಮಹಾರಾಜರು ಸಲ್ಲೇಖನ ವ್ರತ ಆಚರಣೆ ಮೂಲಕ ದೇಹತ್ಯಾಗ ಮಾಡಿದ್ದಾರೆ. ಲೌಖಿಕ ಜೀವನವನ್ನು ತ್ಯಾಗ ಮಾಡಿ ಮೇಲ್ಮಟ್ಟದ ಜೀವನ ನಡೆಸಿ ನಮ್ಮೆಲ್ಲರಿಗೂ ದಾರಿ ತೋರಿಸಿದ್ದಾರೆ. ನಾವೆಲ್ಲಾ ಆಸೆ, ಆಕಾಂಕ್ಷೆಗಳ ಜಂಜಾಟದ ಬದುಕಿನಲ್ಲಿ ಸಿಲುಕುತ್ತೇವೆ. ಅವುಗಳ ಹೊರತಾಗಿಯೂ ಜೀವನ ನಡೆಸಬಹುದು ಎಂದು ಅವರು ತೋರಿಸಿದ್ದಾರೆ. ಅವರ ಆಲೋಚನೆಗಳು ಅಮರವಾಗಿ ನಮ್ಮೊಂದಿಗೆ ಉಳಿಯಲಿದೆ ಎಂದು ಸ್ಮರಿಸಿದರು.

ವಿರೋಧಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ವಿದ್ಯಾಸಾಗರ ಮಹಾರಾಜರ ಇಡೀ ಕುಟುಂಬ ಜೈನ ಪರಂಪರೆಗೆ ಸೇರಿದವರು. ನಮ್ಮ ದೇಶದಲ್ಲಿ ಋಷಿಮುನಿಗಳ ಪರಂಪರೆ ಇದೆ. ಧರ್ಮ, ಸಂಸ್ಕøತಿ ಉಳಿಸಲು ಅವರು ಮಾಡಿರುವ ಕಾರ್ಯ ಸ್ಮರಣೀಯ ಎಂದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಜೈನ ಧರ್ಮೀಯರು ಸಣ್ಣ ವಯಸ್ಸಿನಲ್ಲಿಯೇ ದೀಕ್ಷೆ ಪಡೆಯುತ್ತಾರೆ. ಐಷಾರಾಮಿ ಜೀವನವನ್ನು ತ್ಯಜಿಸಿ ಧರ್ಮದ ಹಾದಿಯಲ್ಲಿ ನಡೆಯುತ್ತಾರೆ. ಗೋವಿನ ರಕ್ಷಣೆ ಪವಿತ್ರವೆಂದು ಭಾವಿಸಿದ್ದಾರೆ. ನಂದಗಾವ್‍ನಲ್ಲಿ 3 ಸಾವಿರ ಎಕರೆಯಲ್ಲಿ ಒಂದೂವರೆ ಲಕ್ಷ ಗೋವುಗಳನ್ನು ಸಂರಕ್ಷಣೆ ಮಾಡಲಾಗಿದೆ. ದೇಶ ಹಾಗೂ ಸಮಾಜಕ್ಕೆ ಅವರು ಮಾಡಿದ ಸೇವೆ ಉತ್ತಮವಾದುದು ಎಂದು ಗುಣಗಾನ ಮಾಡಿದರು.

ರಾಜಕೀಯ ಮಾತುಕತೆ ಆರಂಭಿಸಿದ ಪವನ್‍ಕಲ್ಯಾಣ್

ಶಾಸಕ ಚನ್ನಬಸಪ್ಪ ಅವರು ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದರು. ಬಳಿಕ ಸದನದ ಸದಸ್ಯರೆಲ್ಲರೂ ಎದ್ದು ನಿಂತು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಿದರು.

RELATED ARTICLES

Latest News