Saturday, March 22, 2025
Homeಬೆಂಗಳೂರು5 ಮಂದಿ ದರೋಡೆಕೋರರ ಸೆರೆ, 45 ಲಕ್ಷ ಮೌಲ್ಯದ 80 ಮೊಬೈಲ್‌ಗಳ ಜಪ್ತಿ

5 ಮಂದಿ ದರೋಡೆಕೋರರ ಸೆರೆ, 45 ಲಕ್ಷ ಮೌಲ್ಯದ 80 ಮೊಬೈಲ್‌ಗಳ ಜಪ್ತಿ

5 robbers arrested, 80 mobile phones worth Rs 45 lakh seized

ಬೆಂಗಳೂರು, ಮಾ.21- ನಗರದ ಆರ್ ಎಂಸಿಯಾರ್ಡ್ ಮತ್ತು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಐದು ಮಂದಿ ದರೋಡೆಕೋರರನ್ನು ಬಂಧಿಸಿ ಒಟ್ಟು 45.73 ಲಕ್ಷ ರೂ. ಬೆಲೆಯ 80 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೇರಳ, ತಮಿಳುನಾಡು ಹಾಗೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ನಾಲ್ವರು ಆರೋಪಿಗಳು ಮತ್ತು ಹಳೆ ಕಳ್ಳನನ್ನು ಬಂಧಿಸಲಾಗಿದೆ. ಆರ್‌ಎಂಸಿಯಾರ್ಡ್: ಮಲ್ಲೇಶ್ವರಂನ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿರುವ ದಂಪತಿ ತರಕಾರಿ ತೆಗೆದುಕೊಳ್ಳಲು ಯಶವಂತಪುರ ಮಾರ್ಕೆಟ್ ಗೆ ಹೋಗಿದ್ದಾಗ ಪತಿಯ ಐ ಫೋನನ್ನು ಕಳವು
ಈ ಬಗ್ಗೆ ಅವರು ಆರ್‌ಎಂಸಿಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮಾಹಿತಿ ಕಲೆಹಾಕಿ ಪ್ಲಾಟಿನಂ ಸಿಟಿ ಅಪಾರ್ಟಮೆಂಟ್ ರಸ್ತೆಯಲ್ಲಿ ಇಬ್ಬರನ್ನು ಐದು ಮೊಬೈಲ್ ಫೋನ್ಗಳ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಇಬ್ಬರನ್ನು ವಿಚಾರಣೆ ನಡೆಸಿದಾಗಮೊಬೈಲ್ ಫೋನ್ನನ್ನು ಕಳವು ಮಾಡಿರುವುದಾಗಿ ಹೇಳಿದ್ದಾರೆ. ಈ ಆರೋಪಿಗಳು ಸೋಲದೇವನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದುಕೊಂಡು. ಸಹಚರರಾದ ಮೂವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿದ್ದುಕೊಂಡು, ಮೊಬೈಲ್ ಫೋನ್ಗಳನ್ನು ಕಳವು ಮಾಡಿ, ಮಾರಾಟ ಮಾಡಿಕೊಡಲು ತಮಗೆ ನೀಡುತಿದ್ದುದ್ದಾಗಿ ಹೇಳಿದ್ದಾರೆ.

ಕಳವು ಮಾಡಿದ ಮೊಬೈಲ್ ಫೋನ್ ಗಳನ್ನು ತಮಿಳುನಾಡಿನಿಂದ ವ್ಯಕ್ತಿಯೊಬ್ಬ ಬಂದು ಖರೀದಿ ಮಾಡಿಕೊಂಡು ಹೋಗುತ್ತಿದ್ದನೆಂದು ವಿಚಾರಣೆ ವೇಳೆ ಹೇಳಿದ್ದಾರೆ. ಇವರ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿ 25 ಮೊಬೈಲ್ ಫೋನ್ ಗಳನ್ನು ಖರೀದಿಸಲು ಬಂದ ತಮಿಳುನಾಡಿನ ವ್ಯಕ್ತಿಯನ್ನು ಸೋಲದೇವನಹಳ್ಳಿಯ ಆರೋಪಿಯ ಮನೆಯಲ್ಲಿ ವಶಕ್ಕೆ ಪಡೆದಿದ್ದಾರೆ.

ಮೂವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿ, ಗೊರಗುಂಟೆ ಪಾಳ್ಯದ ಮೆಟ್ರೋ ನಿಲ್ದಾಣದ ಬಳಿ ಭದ್ರಾವತಿಯ ಒಬ್ಬ ಸಹಚರನನ್ನು ವಶಕ್ಕೆ ಪಡೆದು 25 ಮೊಬೈಲ್ ಫೋನ್ ಗಳನ್ನು ಜಪ್ತಿಮಾಡಿದ್ದಾರೆ.

ಅಲ್ಲದೇ ಭದ್ರಾವತಿಯ ಮನೆಯಿಂದ 15 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳ ವಶದಿಂದ ಒಟ್ಟು 70 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್ ಪೆಕ್ಟರ್ ಹರೀಶ್ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

ಹಳೆ ಆರೋಪಿ ಸೆರೆ: ಮೊಬೈಲ್ ಹಾಗೂ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಹಳೆ ಆರೋಪಿಯನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿ 2.73 ಲಕ್ಷ ಮೌಲ್ಯದ 10 ಮೊಬೈಲ್ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈತನ ಬಂಧನದಿಂದ ಎರಡು ಸರಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.

ಜೆಪಿನಗರ 4ನೇ ಹಂತ, 17ನೇ ಕ್ರಾಸ್ ನಿವಾಸಿಯೊಬ್ಬರು ಕ್ಲಾರೆನ್ಸ್ ಶಾಲೆಯ ಮುಂಭಾಗದ ರಸ್ತೆಯಲ್ಲಿ ತನ್ನ ಸ್ನೇಹಿತನೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ವರೋಡೆಕೋರ ಇವರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ರಾಜಗೋಪಾಲನಗರ ಪೊಲೀಸ್ ಠಾಣೆಯ ಸುಲಿಗೆ ಪ್ರಕರಣವೊಂದರಲ್ಲಿ ಕೇಂದ್ರ ಕಾರಾಗೃಹದಲ್ಲಿದ್ದ ಆರೋಪಿಯನ್ನು ಪೊಲೀಸ್ ಅಭಿರಕ್ಷೆಗೆ ಪಡೆದು ವಿಚಾರಣೆಗೊಳಪಡಿಸಿದಾಗ ಮೊಬೈಲ್ ಫೋನ್ ಸುಲಿಗೆ ಮಾಡಿರುವುದಾಗಿ ಹೇಳಿದ್ದಾನೆ. ಅಲ್ಲದೇ ನಗರದ ವಿವಿಧ ಕಡೆಗಳಲ್ಲಿ ಮೊಬೈಲ್ ಫೋನ್‌ಗಳನ್ನು ಸುಲಿಗೆ ಮಾಡಿರುವುದಾಗಿ ಮತ್ತು ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದು, ಆತನಿಂದ 10 ಮೊಬೈಲ್‌ಗಳನ್ನು ವಶಕ್ಕೆ ಪಡೆದು ವಾಪಸ್ ಕಾರಗೃಹಕ್ಕೆ ಕಳುಹಿಸಿದ್ದಾರೆ. ಇನ್ಸ್‌ಪೆಕ್ಟರ್ ರವಿಕುಮಾರ್ ರವರ ನೇತೃತ್ವದ ಸಿಬ್ಬಂದಿ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News