Saturday, February 24, 2024
Homeರಾಷ್ಟ್ರೀಯಸಂಸತ್‍ನ ಕಲಾಪಕ್ಕೆ ಅಡ್ಡಿ : ಇಂದು 50 ಮಂದಿ ಸಂಸದರ ಅಮಾನತು

ಸಂಸತ್‍ನ ಕಲಾಪಕ್ಕೆ ಅಡ್ಡಿ : ಇಂದು 50 ಮಂದಿ ಸಂಸದರ ಅಮಾನತು

ನವದೆಹಲಿ,ಡಿ.19- ಸಂಸತ್‍ನ ಭದ್ರತಾ ಲೋಪ ಉಲ್ಲಂಘನೆ ಪ್ರಕರಣದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನಲೆ ಪುನಃ 50 ಮಂದಿ ಸಂಸದರನ್ನು ಸದನದಿಂದ ಅಮಾನತುಪಡಿಸಲಾಗಿದೆ. ಈವರೆಗೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಮಾನತುಗೊಂಡ ಸಂಸದರ ಸಂಖ್ಯೆ 142ಕ್ಕೆ ಏರಿಕೆಯಾಗಿದೆ. ಸಂಸತ್‍ನ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದಲ್ಲಿ ಉಭಯ ಸದನಗಳ ಸದಸ್ಯರನ್ನು ಅಮಾನತುಪಡಿಸಿರುವ ಪ್ರಕರಣ ಇದಾಗಿದೆ.

ಲೋಕಸಭೆ ಸದಸ್ಯರಾದ ಡ್ಯಾನಿಶ್ ಆಲಿ, ಸುಪ್ರಿಯ ಸುಳೆ, ಫಾರೂಖ್ ಅಬ್ದುಲ್, ಶಶಿ ತರೂರ್, ಕಾರ್ತಿಕ್ ಚಿದಂಬರಂ, ಸುದೀಪ್ ಬಂಡೋಪಾಧ್ಯಾಯ ಸೇರಿದಂತೆ 50 ಲೋಕಸಭಾ ಸದಸ್ಯರನ್ನು ಸ್ಪೀಕರ್ ಓಂ ಬಿರ್ಲಾ ಅವರು ಅಮಾನತುಪಡಿಸಿದ್ದಾರೆ.

ಉಭಯ ಸದನಗಳಲ್ಲಿ ಭಾರೀ ಗದ್ದಲ, ಕೋಲಾಹಲ ಉಂಟಾಗಿದ್ದರಿಂದ ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು. ಇದಕ್ಕೂ ಮುನ್ನ ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಲೋಕಸಭಾ ಸದಸ್ಯರು ಭದ್ರತಾ ಲೋಪ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕೆಂದು ಪಟ್ಟು ಹಿಡಿದರು. ಪ್ರಕರಣದ ತನಿಖೆ ನಡೆಯುತ್ತಿರುವಾಗ ಹೇಳಿಕೆ ಅಗತ್ಯವಿಲ್ಲ. ಕಲಾಪ ನಡೆಯಲು ಅವಕಾಶ ಮಾಡಿಕೊಡಿ ಎಂದು ಓಂ ಬಿರ್ಲಾ ಮನವಿ ಮಾಡಿಕೊಂಡರು. ಇದಕ್ಕೆ ಜಗ್ಗದೆ ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಕ್ಕಾರದ ಘೋಷಣೆಗಳನ್ನು ಕೂಗಿದರು.

ಸಂಸದನಿಗೆ ತರಾಟೆ:
ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಸಂಸತ್ ಮುಂಭಾಗ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಟಿಎಂಸಿಯ ರಾಜ್ಯಸಭಾ ಸದಸ್ಯ ಕಲ್ಯಾಣ್ ಬ್ಯಾನರ್ಜಿ ಅವರು ರಾಜ್ಯಸಭಾ ಸಭಾಪತಿ ಜಗದೀಪ್ ಧನ್‍ಕರ್ ಅವರನ್ನು ಗೇಲಿ ಮಾಡಿದರು. ಈ ವಿಡಿಯೋವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು. ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ವರ್ತನೆಯನ್ನು ಸಭಾಧ್ಯಕ್ಷರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಿಮ್ಮ ನಡವಳಿಕೆ ನಿಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದು ನನಗೆ ಮಾತ್ರ ಮಾಡಿದ ಅವಮಾನವಲ್ಲ. ನೀವು ಪೀಠಕ್ಕೆ ಮಾಡಿದ ಅಪಮಾನ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಕುಹಕ ಮಾಡುತ್ತಿದ್ದೀರಿ. ನಿಮ್ಮ ವರ್ತನೆಯನ್ನು ಸಹಿಸಲು ಅಸಾಧ್ಯ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಕೇಂದ್ರ ಸರ್ಕಾರ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ : ಪ್ರಿಯಾಂಕ್ ಖರ್ಗೆ

ಪ್ರತಿಭಟನೆ:
ಸಂಸತ್ತಿನ ಉಭಯ ಸದನಗಳ ಒಟ್ಟು 92 ವಿಪಕ್ಷ ಸಂಸದರನ್ನು ಪ್ರಸಕ್ತ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಿರುವುದರ ವಿರುದ್ಧ ಪ್ರತಿಪಕ್ಷಗಳ ಸದಸ್ಯರು ಇಂದು ಸಂಸತ್ತಿನ ಒಳಗಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್, ಸಮಾಜವಾದಿ ಪಕ್ಷದ ರಾಮ್‍ಗೋಪಾಲ್ ಯಾದವ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾಪ್ರಭುತ್ವ ಅಪಾಯದಲ್ಲಿದೆ, ನಾವು ಪಂಜರದಲಿಲ್ಲ ಎಂಬ ಭಿತ್ತಿಪತ್ರ ಹಿಡಿದ ಪ್ರತಿಭಟನಾಕಾರರು, ಸಂಸತ್ ಭದ್ರತಾ ಲೋಪ ವಿಚಾರದಲ್ಲಿ ಪ್ರಧಾನಿ ನರೇಂದ್ರಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಏಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಖರ್ಗೆ, ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದು ಅಲ್ಲ. ಸಂಸತ್ತಿನಲ್ಲಿ ಅನೇಕ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಬಯಸುತ್ತಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.

ಸಂಸತ್ ಭದ್ರತಾ ಲೋಪ ವಿಚಾರಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಹೇಳಿಕೆ ನೀಡಬೇಕೆಂದು ಒತ್ತಾಯಿಸಿದ ಲೋಕಸಭೆಯ 33 ಮತ್ತು ರಾಜ್ಯಸಭೆಯ 45 ಸದಸ್ಯರು ಸೇರಿದಂತೆ ಒಟ್ಟು 78 ಸದಸ್ಯರನ್ನು ಸೋಮವಾರ ಅಮಾನತು ಮಾಡಲಾಗಿತ್ತು. ಇದಕ್ಕೂ ಮುನ್ನಾ 13 ಸದಸ್ಯರನ್ನು ಅಮಾನತು ಮಾಡಲಾಗಿತ್ತು.

RELATED ARTICLES

Latest News