Friday, January 10, 2025
Homeರಾಜ್ಯನಾಳೆ 6 ನಕ್ಸಲರು ಶರಣಾಗತಿ

ನಾಳೆ 6 ನಕ್ಸಲರು ಶರಣಾಗತಿ

6 Naxalites to surrender tomorrow

ಬೆಂಗಳೂರು,ಜ.7- ಶಸ್ತ್ರಾಸ್ತ್ರಗಳ ಮೂಲಕವೇ ಸಮಾಜದಲ್ಲಿ ಸಮಾನತೆ ತರಲು ಮುಂದಾಗಿ ಚಿಕ್ಕಮಗಳೂರು, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕಳೆದ ಹಲವು ದಶಕಗಳಿಂದ ಹೋರಾಟ ನಡೆಸುತ್ತಿದ್ದ ನಕ್ಸಲೀಯರು ನಾಳೆ ಸರ್ಕಾರಕ್ಕೆ ಶರಣಾಗಲಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ನಕ್ಸಲ್ ನಾಯಕಿ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ.ಅಲಿಯಾಸ್ ರಮೇಶ ಮತ್ತು ಆಂದ್ರಪ್ರದೇಶದ ಮಾರೆಪ್ಪ ಅರೋಲಿ ಸೇರಿದಂತೆ ಒಟ್ಟು ಆರು ಜನ ನಕ್ಸಲ್ರು ಶರಣಾಗಲಿದ್ದಾರೆ.

ನಕ್ಸಲ್ ಪುನರ್ವಸತಿ ಸಮಿತಿ ಮುಖಂಡರು ನಕ್ಸಲೀಯರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಹಲವು ದಿನಗಳಿಂದ ಹೋರಾಟ ನಡೆಸುತ್ತಲೇ ಇದ್ದರು. ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮತಿಸಿದ ಬೆನ್ನಲ್ಲೇ ಆರು ಮಂದಿ ನಕ್ಸಲೀಯರು ಶಸಾ್ತ್ರಸ್ತ್ರಗಳನ್ನು ತೊರೆದು ಶರಣಾಗತಿಗೆ ಸಮ್ಮತಿಸಿದ್ದಾರೆ.

ನಾಳೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಈ ಆರು ಮಂದಿ ನಕ್ಸಲೀಯರು ಶರಣಾಗಲಿದ್ದಾರೆ. ಅವರನ್ನು ಕಾಡಿನಿಂದ ನಾಡಿಗೆ ಕರೆತರಲು ನಕ್ಸಲ್ ಪುನರ್ವಸತಿ ಸಮಿತಿಯ ಮುಖಂಡರು ವಿಶೇಷ ಕಾಳಜಿ ವಹಿಸಿದ್ದಾರೆ.

ಎಲ್ಲಿಂದ ಬಂದು ಶರಣಾಗಲಿದ್ದಾರೆ ಎಂಬ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದ್ದು, ಮೂಲಗಳ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮೆಣಸಿನ ಹಾಡ್ಯದ ಮೂಲಕ ಕರೆತರಲಾಗುತ್ತದೆ ಎಂದು ಹೇಳಲಾಗುತ್ತದೆ.

ಸರ್ಕಾರದ ಮುಂದೆ ಶರಣಾಗುವ ಮೊದಲು ನಕ್ಸಲೀಯರು ಕೆಲವು ಬೇಡಿಕೆಗಳನ್ನು ಇಟ್ಟಿದ್ದು, ಕಾಲಮಿತಿಯೊಳಗೆ ಈಡೇರಿಸಬೇಕೆಂದು ಕೋರಿದ್ದಾರೆ. ಈ ಸಂಬಂಧ ನಕ್ಸಲ್ ಪುನರ್ವಸತಿ ಸಮಿತಿಗೆ ಗೌಪ್ಯಪತ್ರ ಬರೆದಿರುವ ನಕ್ಸಲೀಯರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಇವುಗಳನ್ನು ಈಡೇರಿಸಿದರೆ ಷರತ್ತುಬದ್ಧವಾಗಿ ತಾವು ಶಸ್ತ್ರಾಸ್ತ್ರಗಳನ್ನು ತೊರೆದು ಶರಣಾಗುತ್ತೇವೆ ಎಂದು ಹೇಳಿದ್ದಾರೆ.

ಮುಖ್ಯವಾಗಿ ಇತ್ತೀಚೆಗೆ ಪೊಲೀಸ್ ಎನ್ಕೌಂಟರ್ನಲ್ಲಿ ಹತನಾದ ನಕ್ಸಲ್ ನಾಯಕ ವಿಕ್ರಂ ಗೌಡ ಪ್ರಕರಣವನ್ನು ನ್ಯಾಯಾಂಗದ ಮೂಲಕ ತನಿಖೆ ನಡೆಸಬೇಕೆಂಬದು ಅವರ ಮುಖ್ಯ ಬೇಡಿಕೆಯಾಗಿದೆ.

ನಾವು ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆ ಘನತೆಯುತವಾಗಿ ನಡೆಯಬೇಕು. ನಮ ಆತಗೌರವ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಆಗುವಂತಹ ಯಾವುದೇ ರೀತಿಯ ಒತ್ತಡ ಹೇರಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ನಾವು ಹೋರಾಟದ ಮಾರ್ಗವನ್ನು ಬದಲಾಯಿಸಿದ್ದೇವೆ. ಆದರೆ ಜನಪರ ಹೋರಾಟವನ್ನು ಕೈ ಬಿಡುತ್ತಿಲ್ಲ. ಹೀಗಾಗಿ ಪ್ರಜಾತಾಂತ್ರಿಕ ಚಳವಳಿಗಳಲ್ಲಿ, ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯಾವುದೇ ರೀತಿಯ ತಡೆ ಒಡ್ಡಬಾರದು. ನಮ ಬದುಕನ್ನು ಜನತೆಗೆ ಮುಡುಪಿಟ್ಟಿದ್ದೇವೆ. ಜನ ಹಿತಕ್ಕಾಗಿಯೇ ಬದುಕಲು ಬಯಸುತ್ತೇವೆ ಎಂದಿದ್ದಾರೆ.

ನಾವು ಇಲ್ಲಿಂದ ಹೊರಬಂದು ಜೈಲುಗಳಲ್ಲಿ ಕೊಳೆಯುವ ಮನಸ್ಥಿತಿ ಎದುರಾಗಬಾರದು. ನಮ ಮೇಲೆ ಹಾಕಿರುವ ಹೆಚ್ಚಿನ ಪಾಲು ಕೇಸುಗಳು ಸುಳ್ಳು ಪ್ರಕರಣಗಳಾಗಿವೆ. ನಾವು ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲದ ಪ್ರಕರಣಗಳಲ್ಲಿ ನಮ ಹೆಸರುಗಳನ್ನು ಸೇರಿಸಲಾಗಿದೆ. ಈ ಪ್ರಕರಣಗಳಿಂದ ನಮಗೆ ಮುಕ್ತಿ ಸಿಗಬೇಕು ಎಂದಿದ್ದಾರೆ.

ಮುಖ್ಯವಾಹಿನಿಗೆ ಬಂದ ನಂತರ ಬೇಗನೆ ಜಾಮೀನಿನ ಮೇಲೆ ಹೊರಬರಲು ಸಹಕರಿಸಬೇಕು. ಎಲ್ಲ ಮೊಕದ್ದಮೆಗಳನ್ನು ಒಂದೇ ನ್ಯಾಯಾಲಯದ ಅಡಿ ತಂದು ತ್ವರಿತ ವಿಚಾರಣೆ ನಡೆಯುವಂತೆ ಮಾಡಬೇಕು.ಕೇಸುಗಳನ್ನು ನಡೆಸಲು ಕಾನೂನು ಹಾಗೂ ಆರ್ಥಿಕ ನೆರವು ಒದಗಿಸುವ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು.

ಈಗಾಗಲೇ ಮುಖ್ಯವಾಹಿನಿಗೆ ಬಂದ ಹಲವರ ಬದುಕು ಅತಂತ್ರವಾಗಿದೆ. ಅವರ ಕೇಸುಗಳ ಇತ್ಯರ್ಥಕ್ಕೆ ಹಾಗೂ ಬದುಕಿನ ಭದ್ರತೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕೇಳಿಕೊಂಡಿದ್ದಾರೆ.

ಬೇರೆ ಬೇರೆ ಜೈಲುಗಳಲ್ಲಿರುವ ಸಂಗಾತಿಗಳಿಗೂ (ಅವರು ಬಂಧನಕ್ಕೊಳಗಾಗಿದ್ದರೂ ಸಹ) ಈ ಪ್ಯಾಕೇಜ್ ಅನ್ವಯವಾಗುವಂತೆ ಮಾಡಿ ಅವರ ಬಿಡುಗಡೆಗೆ ಸಹಕರಿಸಬೇಕೆಂದು ಕೋರಿದ್ದಾರೆ.
ಹೊರಬಂದ ನಂತರ ನಮ ಜೀವನಕ್ಕೆ ದಾರಿ ಏನು ಎಂಬ ಸ್ಪಷ್ಟತೆ ಬೇಕು. ಡಿಸಿಎಂ ವಿಕ್ರಮಗೌಡ ಅವರ ಎನ್ಕೌಂಟರ್ ಹತ್ಯೆಯ ಕುರಿತು ನ್ಯಾಯಾಂಗ ತನಿಖೆಗೆ ಆದೇಶ ಮಾಡಬೇಕು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಶಾಂತಿ ನಾಗರಿಕರ ವೇದಿಕೆ ಮತ್ತು ನಕ್ಸಲ್ ಪುನರ್ವಸತಿ ಸಮಿತಿಗೆ ಬರೆದಿರುವ ಪತ್ರದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವಂತೆ ಬೇಡಿಕೆ ಇಟ್ಟಿದೆ. ಈ ಪತ್ರವನ್ನು ತಮಗೂ ಆ ಮೂಲಕ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಸರ್ಕಾರಗಳಗೆ ಬರೆಯುತ್ತಿದ್ದೇವೆ.

ದೇಶದ ಇಂದಿನ ಸಂದರ್ಭ, ಚಳವಳಿಗಳು ಪಡೆಯುತ್ತಿರುವ ರೂಪಾಂತರ, ಸಾಮಾಜಿಕ ಅಗತ್ಯ ಎಲವನ್ನು ಗಮನದಲ್ಲಿಟ್ಟುಕೊಂಡು ಸಶಸ್ತ್ರ ಹೋರಾಟದ ಮಾರ್ಗವನ್ನು ಬದಲಾಯಿಸಿ ಪ್ರಜಾತಾಂತ್ರಿಕ ಮುಖ್ಯವಾಹಿನಿಗೆ ಮರಳುವುದು ಒಳ್ಳೆಯದು ಮತ್ತು ಅದಕ್ಕೆ ಸಾಧ್ಯತೆ ಇದೆ ಎಂದು ಮನವರಿಕೆಯಾಗಿದೆ. ನಾವು ಯಾವುದೇ ಒತ್ತಡವಿಲ್ಲದೆ. ಸ್ವಇಚ್ಛೆಯಿಂದ ಮುಖ್ಯವಾಹಿನಿಗೆ ಬರಲು ಬಯಸುತ್ತಿದ್ದೇವೆ. ಆದರೆ ಈ ಸಂದರ್ಭದಲ್ಲಿ ಕೆಲವು ಖಚಿತ ಸ್ಪಷ್ಠೀಕರಣವನ್ನು ಸರ್ಕಾರ ಮತ್ತು ಸಂಬಂಧಿತ ಸಮಿತಿಯಿಂದ ಬಯಸುತ್ತಿದ್ದೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ.

RELATED ARTICLES

Latest News