ಬೆಂಗಳೂರು, ಮಾ.12- ನಗರದಲ್ಲಿ ಡ್ರಗ್ ಪೆಡ್ಲರ್ಗಳು ಮತ್ತು ಅನಧಿಕೃತವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ದ ನಗರ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಕಾರ್ಯಾಚರಣೆ ಕೈಗೊಂಡು ಮೂವರು ವಿದೇಶಿಗರು ಹಾಗೂ ಫುಡ್ ಡೆಲವರಿ ಬಾಯ್ ಸೇರಿದಂತೆ ಆರು ಮಂದಿ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿ 44 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ.
ನಗರದ ಯಲಹಂಕ, ಕೆ.ಜಿ.ನಗರ, ಹೆಣ್ಣೂರು, ರಾಜಗೋಪಾಲನಗರ ಮತ್ತು ರಾಮಮೂರ್ತಿನಗರ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಕಳೆದ ಒಂದು ವಾರದಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು, ಮೂರು ವಿದೇಶಿ ಮೂಲದ ಡ್ರಗ್ ಪೆಡ್ಲರ್ಗಳು ಹಾಗೂ ಹೊರ ರಾಜ್ಯದ ಮೂವರು ಡ್ರಗ್ ಪೆಡ್ಲರ್ಗಳು ಸೇರಿದಂತೆ ಒಟ್ಟು 6 ಡ್ರಗ್ ಪೆಡ್ಲರ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರಿಂದ 44 ಲಕ್ಷ ರೂ. ಮೌಲ್ಯದ 54 ಗ್ರಾಂ ಎಂ.ಡಿ.ಎಂಎ ಕ್ರಿಸ್ಟೆಲ್, 410 ಗ್ರಾಂ ಹೈಡ್ರೋ ಗಾಂಜಾ, 18 ಕೆಜಿ. ಗಾಂಜಾ, ಮತ್ತು ಕೃತ್ಯಕ್ಕೆ ಬಳಸಲಾಗುತ್ತಿದ್ದ 4 ಮೊಬೈಲ್ ಫೋನ್ ಗಳನ್ನು ಹಾಗೂ 4 ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಮಾರ್ಕೆಟಿಂಗ್ ಮ್ಯಾನೇಜರ್ ಬಂಧನ:
ಯಲಹಂಕ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮಾರ್ಕೆ ಟಿಂಗ್ ಕಂಪೆನಿಯ ಮ್ಯಾನೇಜರ್ನನ್ನು ಬಂಧಿಸಿ ಎಂಟು ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈತ ಹೊರರಾಜ್ಯದವನಾಗಿದ್ದು, ಈತ ಕಾರ್ಸ್ 24 ಎಂಬ ಕಂಪನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದನು. ಈತನು ಹೊರರಾಜ್ಯದಿಂದ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಖರೀದಿಸಿ, ನಗರದ ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಸರಬರಾಜು ಮಾಡುವ ಮೂಲಕ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದುದ್ದು ತನಿಖೆಯಿಂದ ತಿಳಿದು ಬಂದಿರುತ್ತದೆ.
ಈತನಿಂದ 8 ಕೆಜಿ 100 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳ ಲಾಗಿದ್ದು, ಇದರ ಮೌಲ್ಯ 8 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.ಇದರೊಂದಿಗೆ ಒಂದು ತೂಕದ ಯಂತ್ರ ಮತ್ತು ಕೃತ್ಯಕ್ಕೆ ಬಳಸಲಾಗುತ್ತಿದ್ದ ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಗಿಟಾರ್ ಕಲಿಯಲು ಬಂದು ಗಾಂಜಾ ಹವ್ಯಾಸ ಬೆಳೆಸಿಕೊಂಡ:
ಕೆ.ಜಿ.ನಗರ ಪೊಲೀಸ್ ಠಾಣೆಯ ಪ್ರಕರಣದಲ್ಲಿ ಗಿಟಾರ್ ಕಲಿಯುವ ಸಲುವಾಗಿ ಹೊರರಾಜ್ಯದಿಂದ ಬಂದಿದ್ದ ಒಬ್ಬ ಡ್ರಗ್ ಪೆಡ್ಲರ್ನ್ನ್ನು ವಶಕ್ಕೆ ಪಡೆಯಲಾಗಿದೆ. ಈತ ಗಾಂಜಾ ಸೇವನೆ ಮಾಡುವ ಹವ್ಯಾಸ ಹೊಂದಿದ್ದು, ಈತನು ಸುಳ್ಳು ವಿಳಾಸವನ್ನು ನೀಡಿ, ಹೊರ ದೇಶದಿಂದ ಹೈಡ್ರೋ ಗಾಂಜಾವನ್ನು ಖರೀದಿಸುತ್ತಿದ್ದನು. ಈತನು ವಿದೇಶಿ ಪೊಸ್ಟ್ ಮೂಲಕ ತರಿಸಿಕೊಳ್ಳುತ್ತಿದ್ದನೆಂಬ ಅಂಶವು ತನಿಖೆಯಿಂದ ತಿಳಿದು ಬಂದಿರುತ್ತದೆ. ಈತನಿಂದ 25 ಲಕ್ಷ ಮೌಲ್ಯದ 410 ಗ್ರಾಂ ತೂಕದ ಹೈಡ್ರೋಗಾಂಜಾ ಮತ್ತು ಕೃತ್ಯಕ್ಕೆ ಬಳಸಲಾಗುತ್ತಿದ್ದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಬ್ಯುಸಿನೆಸ್ ವೀಸಾದಲ್ಲಿ ಬಂದಿದ್ದ ಪೆಡ್ಲರ್:
ಹೆಣ್ಣೂರು ಪೊಲೀಸ್ ಠಾಣೆಯ ಪ್ರಕರಣದಲ್ಲಿ ಒಬ್ಬ ವಿದೇಶಿ ಡ್ರಗ್ ಪೆಡ್ಲರ್ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈತನು 5 ವರ್ಷಗಳ ಹಿಂದೆ ಬ್ಯುಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದಿರುತ್ತಾನೆ. ಈತನು ತನ್ನ ಅಣ್ಣನ ಜೊತೆ ಸೇರಿಕೊಂಡು ನಗರದಲ್ಲಿ ಪರಿಚಯಸ್ಥ ಗಿರಾಕಿಗಳಿಗೆ ನಿಷೇತ ಮಾದಕ ವಸ್ತುಗಳನ್ನು ಸರಬರಾಜು ಮಾಡುವ ಮೂಲಕ ಅಕ್ರಮ ಹಣದ ಸಂಪಾದನೆಯಲ್ಲಿ ತೊಡಗಿದುದ್ದು, ತನಿಖೆಯಿಂದ ತಿಳಿದು ಬಂದಿರುತ್ತದೆ.ಈತನಿಂದ 54 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟೆಲ್ ಮತ್ತು ಕೃತ್ಯಕ್ಕೆ ಬಳಸಲಾಗುತ್ತಿದ್ದ ಮೊಬೈಲ್ ಫೋನ್ ಹಾಗೂ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಸ್ವಿಗ್ಗಿ ಡೆಲಿವರಿ ಬಾಯ್ ಬಂಧನ:
ರಾಜಗೋಪಾಲನಗರ ಪೊಲೀಸ್ ಠಾಣೆಯ ಪ್ರಕರಣದಲ್ಲಿ ಒಬ್ಬ ಡ್ರಗ್ ಪೆಡ್ಲರ್ನನ್ನು ವಶಕ್ಕೆ ಪಡೆದುಕೊಳ್ಳ ಲಾಗಿದೆ. ಈತನು 3 ವರ್ಷಗಳ ಹಿಂದೆ ನಗರಕ್ಕೆ ಬಂದು, ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದನು. ಈತನು ಹೊರರಾಜ್ಯದಿಂದ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ತಂದು ನಗರದಲ್ಲಿ ಪರಿಚಯಸ್ಥ ಗಿರಾಕಿಗಳಿಗೆ ಸರಬರಾಜು ಮಾಡುವ ಮೂಲಕ ಅಕ್ರಮ ಹಣದ ಸಂಪಾದನೆಯಲ್ಲಿ ತೊಡಗಿರುತ್ತಾನೆಂಬ ಅಂಶವು ತನಿಖೆಯಿಂದ ತಿಳಿದು ಬಂದಿರುತ್ತದೆ. ಈತನಿಂದ 6 ಲಕ್ಷ ಮೌಲ್ಯದ 9 ಕೆಜಿ 900 ಗ್ರಾಂ ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಲಾಗುತ್ತಿದ್ದ ಮೊಬೈಲ್ ಫೋನ್ ಹಾಗೂ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ರಮವಾಗಿ ನೆಲೆಸಿದ್ದ ಡ್ರಗ್ ಪೆಡ್ಲರ್ಸ್:
ರಾಮಮೂರ್ತಿನಗರ ಪೊಲೀಸ್ ಠಾಣೆಯ ಪ್ರಕರಣದಲ್ಲಿ ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರನ್ನು ವಿಚಾರಣೆಗೊಳಪಡಿ ಸಿದಾಗ ಇವರು ಪಾಸ್ ಪೋರ್ಟ್ ಮತ್ತು ವೀಸಾಗಳನ್ನು ನವೀಕರಣ ಮಾಡಿಸದೇ ಅನಧಿಕೃತವಾಗಿ ವಾಸವಾಗಿದ್ದರು ಎಂಬ ಅಂಶವು ತಿಳಿದುಬಂದಿರುತ್ತದೆ. ಇವರನ್ನು ಎಫ್.ಆರ್.ಆರ್.ಓ ರವರ ಮುಂದೆ ಹಾಜರುಪಡಿಸಿ ಡಿಟೆನ್ಷನ್ ಸೆಂಟರ್ಗೆ ಕಳುಹಿಸಲಾಗಿದೆ. ಈ ಕಾರ್ಯಾಚರಣೆಯನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಸಹಾಯಕ ಪೊಲೀಸ್ ಆಯುಕ್ತರ ರವರ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.