Tuesday, March 18, 2025
Homeರಾಜ್ಯ65 ಕಾರ್ಖಾನೆಗಳಿಂದ 3,101 ಕೋಟಿ ರೂ. ಕಬ್ಬಿನ ಬಿಲ್ ಬಾಕಿ : ಸಚಿವ ಶಿವಾನಂದ ಪಾಟೀಲ್

65 ಕಾರ್ಖಾನೆಗಳಿಂದ 3,101 ಕೋಟಿ ರೂ. ಕಬ್ಬಿನ ಬಿಲ್ ಬಾಕಿ : ಸಚಿವ ಶಿವಾನಂದ ಪಾಟೀಲ್

65 factories owe Rs 3,101 crore for sugarcane: Minister Shivanand Patil

ಬೆಂಗಳೂರು, ಮಾ.18- ರಾಜ್ಯದಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ 65 ಕಾರ್ಖಾನೆಗಳು 3,101.91 ಕೋಟಿ ರೂ.ಗಳು ಪಾವತಿ ಮಾಡುವುದು ಬಾಕಿ ಇದೆ. ಶೀಘ್ರ ಹಣ ಪಾವತಿಸುವಂತೆ 33 ಸಕ್ಕರೆ ಕಾರ್ಖಾನೆಗಳಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ವಿಧಾನ ಪರಿಷತ್ ಶಾಸಕ ದಿನೇಶ ಗೂಳಿಗೌಡರವರ ಪ್ರಶ್ನೆಗೆ ಉತ್ತರಿಸಿದ ಅವರು. ರಾಜ್ಯದಲ್ಲಿ ಒಟ್ಟು 99 ನೋಂದಾಯಿತ ಸಕ್ಕರೆ ಕಾರ್ಖಾನೆಗಳಿದ್ದು, ಇವುಗಳ ಪೈಕಿ 79 ಕಾರ್ಖಾನೆಗಳು ಪ್ರಸ್ತುತ ಕಾರ್ಯನಿರತವಾಗಿವೆ. 2024-25ನೇ ಹಂಗಾಮಿನಲ್ಲಿ 2025ರ ಫೆ. 28ರ ಅಂತ್ಯಕ್ಕೆ ಕಬ್ಬು ಸರಬರಾಜು ಮಾಡಿದ ರೈತರಿಗೆ 17,596.92 ಕೋಟಿ ರೂಪಾಯಿ ಬಿಲ್ ಪಾವತಿ ಮಾಡಬೇಕಿದ್ದು, ಅವುಗಳಲ್ಲಿ 14,655.91 ಕೋಟಿ ರೂ. ಮೊತ್ತವನ್ನು ಈಗಾಗಲೇ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.

2024-25ನೇ ಸಾಲಿನ ಕಬ್ಬು ಅರೆಯುವ ಹಂಗಾಮು ಚಾಲ್ತಿಯಲ್ಲಿದ್ದು, ಕಬ್ಬು ಬಿಲ್ಲು ಪಾವತಿಸಲು ಅವಕಾಶವಿರುತ್ತದೆ. ಆದಾಗ್ಯೂ, 2024-25ನೇ ಹಂಗಾಮಿನಲ್ಲಿ ಕಬ್ಬು ಬಿಲ್ಲು ಉಳಿಸಿಕೊಂಡಿರುವ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಇದೇ ಜನವರಿ16 ಮತ್ತು ಫೆ.4 ರಂದು ಶಾಸನಬದ್ದ ನೋಟಿಸುಗಳನ್ನು ಜಾರಿಗೊಳಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

ಕಬ್ಬು (ನಿಯಂತ್ರಣ) ಆದೇಶ 1966 ರ ಖಂಡ 3 ರಲ್ಲಿ, ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ 14 ದಿನಗಳ ಒಳಗಾಗಿ ಸಂಬಂಧಿಸಿದ ಸಕ್ಕರೆ ಕಾರ್ಖಾನೆಗಳು ಬಿಲ್ಲನ್ನು ಪಾವತಿಸಬೇಕಿದೆ. ನಿಗದಿತ ಅವಧಿಯಲ್ಲಿ ಕಬ್ಬಿನ ಬಿಲ್ಲನ್ನು ಪಾವತಿ ಮಾಡದೇ ಇದ್ದಲ್ಲಿ ಕಬ್ಬು (ನಿಯಂತ್ರಣ) ಆದೇಶ 1966 ರ ಖಂಡ (3ಅ) ರನ್ವಯ 14 ದಿನಗಳ ನಂತರ ತಡವಾಗಿ ಪಾವತಿಸಿದ ದಿನಗಳಿಗೆ ಶೇ.15 ರಷ್ಟು ಬಡ್ಡಿಯನ್ನು ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ನಿಗದಿತ ಅವಧಿಯೊಳಗೆ ಸಂಬಂಧಿಸಿದ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಿಲ್ಲನ್ನು ಪಾವತಿಸದಿದ್ದಲ್ಲಿ ಭೂಕಂದಾಯದ ಬಾಕಿಯಂತೆ ಕಬ್ಬು ಬಿಲ್ಲು ವಸೂಲು ಮಾಡಲು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ವಸೂಲಾತಿ ಪ್ರಮಾಣ ಪತ್ರವನ್ನು ಹೊರಡಿಸಲು ಕಬ್ಬು (ನಿಯಂತ್ರಣ) ಆದೇಶ 1966 ರ ಖಂಡ 8 ರಲ್ಲಿ ಅವಕಾಶವಿದೆ. ಸರ್ಕಾರದ ಅಧಿಸೂಚನೆಯಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ವಸೂಲಾತಿ ಪ್ರಮಾಣ ಪತ್ರವನ್ನು ಹೊರಡಿಸುವ ಅಧಿಕಾರವನ್ನು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಮತ್ತು ಆಯುಕ್ತರಿಗೆ ನೀಡಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

RELATED ARTICLES

Latest News