ಬೆಂಗಳೂರು,ಡಿ.9- ಕಳೆದ ಐದು ವರ್ಷಗಳ ಹಿಂದೆ ಜಾರಿಗೊಳಿಸಲಾದ ಒಂದು ಲಕ್ಷ ರೂ.ಗಳ ಸಾಲಮನ್ನಾ ಯೋಜನೆಯ ಸೌಲಭ್ಯವನ್ನು ರಾಜ್ಯದ 17.35 ಲಕ್ಷ ರೈತರು ಪಡೆದುಕೊಂಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನಪುಟ್ಟಣ್ಣಯ್ಯ ಅವರ ಪ್ರಶ್ನೆಗೆ ಲಿಖಿತ ಮಾಹಿತಿ ನೀಡಿರುವ ಅವರು, 2018 ರಲ್ಲಿ ಒಂದು ಲಕ್ಷ ರೂ.ಗಳವರೆಗೆ ಬೆಳೆಸಾಲವನ್ನು ಮನ್ನಾ ಮಾಡಲು ನಿರ್ಧರಿಸಲಾಯಿತು. ಆ ಬಳಿಕ ಈವರೆಗೂ ಬೇರೆ ಯಾವ ಸಾಲಮನ್ನಾ ಯೋಜನೆಗಳೂ ಜಾರಿಯಾಗಿಲ್ಲ ಎಂದಿದ್ದಾರೆ.
ದೇಶದ ಆರ್ಥಿಕತೆ ವೃದ್ದಿಯಿಂದ ಉತ್ತಮ ಭವಿಷ್ಯ : ಮೋದಿ
2018 ರಲ್ಲಿ ಜಾರಿಯಾದ ಯೋಜನೆಯ ಪೈಕಿ ಸಹಕಾರ ಸಂಘಗಳು, ಭೂಮಾಪನ ಕಂದಾಯ ವ್ಯವಸ್ಥೆ, ಭೂ ದಾಖಲೆಗಳ ಇಲಾಖೆ ಅಭಿವೃದ್ಧಿಪಡಿಸಿದ ಸಾಲತಂತ್ರಾಂಶದಲ್ಲಿ 19.07 ಲಕ್ಷ ರೈತರ ಮಾಹಿತಿಯನ್ನು ಅಳವಡಿಸಲಾಯಿತು. ಅದರಲ್ಲಿ ಅರ್ಹತೆ ಹೊಂದದಿರುವ 1.57 ಲಕ್ಷ ರೈತರನ್ನು ತಂತ್ರಾಂಶದಿಂದ ತಿರಸ್ಕರಿಸಲಾಯಿತು. ಬಾಕಿ ಉಳಿದ 17.50 ಲಕ್ಷ ರೈತರ ಪೈಕಿ ಎಲ್ಲಾ ಷರತ್ತುಗಳನ್ನೂ ಪೂರೈಸಿರುವ 17.32 ಲಕ್ಷ ರೈತರಿಗೆ 8,154.98 ಕೋಟಿ ರೂ. ಸಾಲಮನ್ನಾ ಮಾಡಲು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಿಂದ ಹಸಿರು ಪಟ್ಟಿ ನೀಡಲಾಯಿತು.
ಸರ್ಕಾರ 17.06 ಲಕ್ಷ ರೈತರಿಗೆ 7,987.47 ಕೋಟಿ ರೂ.ಗಳನ್ನು ಉಳಿತಾಯ ಖಾತೆಗೆ ಬಿಡುಗಡೆ ಮಾಡಿ ಸಾಲಮನ್ನಾ ಸೌಲಭ್ಯವನ್ನು ದೊರಕಿಸಿದೆ ಎಂದು ವಿವರಿಸಿದ್ದಾರೆ. ಸಾಲಮನ್ನಾ ತಂತ್ರಾಂಶದಲ್ಲಿ ಅರ್ಹತೆ ಹೊಂದಿ 2020-21 ನೇ ಸಾಲಿನಲ್ಲಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯು ಹಸಿರು ಪಟ್ಟಿ ನೀಡಿದ 31 ಸಾವಿರ ರೈತರಿಗೆ 167.51 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅಲ್ಲಿ ಅಂಗೀಕಾರಗೊಂಡ ಬಳಿಕ ಸಾಲಮನ್ನಾದ ಅನುದಾನವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಕೆಲವು ಡಿಸಿಸಿ ಬ್ಯಾಂಕ್‍ಗಳ ವ್ಯಾಪ್ತಿಯಲ್ಲಿ ಬರುವ ಸಹಕಾರ ಸಂಘಗಗಳಲ್ಲಿ ಸಾಲಮನ್ನಾ ಆಗಿರುವ ರೈತರಿಗೆ ಪುನಃ ಸಾಲ ನೀಡದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.