ಅನಂತಪುರ,ನ.24-ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗಾರ್ಲ್‌ದಿನ್ನೆ ಮಂಡಲದ ತಲಗಸ್ಪಲ್ಲಿ ಬಳಿ ಇಂದು ಬೆಳಿಗ್ಗೆ ಕೃಷಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಆಟೋಗೆ ಸರ್ಕಾರಿ ಸಾರಿಗೆ (ಎಆರ್‌ಟಿಸಿ) ಬಸ್ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುತ್ಲೂರು ಮಂಡಲದ ನೆಲ್ಲುಟ್ಲ ಗ್ರಾಮದ 12 ಕೃಷಿ ಕಾರ್ಮಿಕರು ಗಾರ್ಲ್‌ದಿನ್ನೆ ಬಳಿ ಗದ್ದೆಯಲ್ಲಿ ಕೆಲಸ ಮಾಡಿ ಆಟೋದಲ್ಲಿ ಹಿಂತಿರುಗುವಾಗ ಎದುರುಗಡೆಯಿಂದ ಬಂದ ಎಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ.
ಮೃತರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತರ ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ, ಉಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆನೀಡುವ ವೇಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಳಿದ ಗಾಯಾಳುಗಳಿಗೆ ಅನಂತಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದೆ. ಮಾಹಿತಿ ಪಡೆದ ಜಿಲ್ಲಾ ಎಸ್ಪಿ ಜಗದೀಶ್, ಡಿಎಸ್ಪಿ ವೆಂಕಟೇಶ್ವರಲು ಅಪಘಾತ ಸ್ಥಳ ದಾವಿಸಿ ಪರಿಶೀಲನೆ ನಡೆಸಿದರು. ಹೆಚ್ಚಿನ ತನಿಖೆಗಾಗಿ ಪೊಲೀಸರು ಬಸ್ ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಘಟನೆಯ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಅವರು, ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.