Tuesday, September 9, 2025
Homeಬೆಂಗಳೂರು9 ಮಂದಿ ಡ್ರಗ್ಸ್ ಪೆಡ್ಲರ್‌ಗಳ ಬಂಧನ : 1.5 ಕೋಟಿ ಮೌಲ್ಯದ ಮಾದಕವಸ್ತು ವಶ

9 ಮಂದಿ ಡ್ರಗ್ಸ್ ಪೆಡ್ಲರ್‌ಗಳ ಬಂಧನ : 1.5 ಕೋಟಿ ಮೌಲ್ಯದ ಮಾದಕವಸ್ತು ವಶ

9 drug peddlers arrested: Narcotics worth Rs 1.5 crore seized

ಬೆಂಗಳೂರು,ಸೆ.9- ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಒಂಬತ್ತು ಮಂದಿ ಡ್ರಗ್ಸ್ ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 1.5 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕುಮಾರಸ್ವಾಮಿ ಲೇಔಟ್‌, ಆವಲಹಳ್ಳಿ, ಅಮೃತಹಳ್ಳಿ, ಹೆಬ್ಬಗೋಡಿ, ಮೈಕೊಲೇಔಟ್‌ ಹಾಗೂ ರಾಮಮೂರ್ತಿನಗರ ಪೊಲೀಸ್‌‍ ಠಾಣಾ ವ್ಯಾಪ್ತಿಗಳಲ್ಲಿ ಮಾದಕವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು 506 ಗ್ರಾಂ ಎಂಡಿಎಂಎ ಕ್ರಿಸ್ಟಲ್‌, 50 ಎಲ್‌ಎಸ್‌‍ಡಿ ಸ್ಟ್ರಿಪ್ಸ್ ಗಳು, 85 ಗ್ರಾಂ ಕೊಕೇನ್‌, 56 ಗ್ರಾಂ ಗಾಂಜಾವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕುಮಾರಸ್ವಾಮಿ ಲೌಔಟ್‌ :
ಇಬ್ಬರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾ ಡ್ರಗ್‌ಪೆಡ್ಲಿಂಗ್‌ನಲ್ಲಿ ತೊಡಗಿ ಶಾಸ್ತ್ರಿನಗರದ ಬಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಆರು ಲಕ್ಷ ರೂ. ಬೆಲೆಯ ಎಲ್‌ಎಸ್‌‍ಡಿ ಸ್ಟ್ರಿಪ್ಸ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಆವಲಹಳ್ಳಿ :
ಮೆಡಿಕಲ್‌ ವೀಸಾ ಪಡೆದು ಭಾರತಕ್ಕೆ ಬಂದು ನಂತರ ತನ್ನ ದೇಶಕ್ಕೆ ಹಿಂದಿರಗದೆ ಅಕ್ರಮವಾಗಿ ನಗರದಲ್ಲಿ ನೆಲೆಸಿ ಡ್ರಗ್‌ಪೆಡ್ಲಿಂಗ್‌ನಲ್ಲಿ ತೊಡಗಿದ್ದ ವಿದೇಶಿ ಮಹಿಳೆಯನ್ನು ಬಂಧಿಸಿ ಎರಡು ಲಕ್ಷ ರೂ. ಮೌಲ್ಯದ 22 ಗ್ರಾಂ ಕೊಕೈನ್‌ ವಶಪಡಿಸಿಕೊಂಡಿದ್ದಾರೆ. ಇದೇ ವ್ಯಾಪ್ತಿಯ ಮತ್ತೊಂದು ಪ್ರಕರಣದಲ್ಲಿ ಹೈಡ್ರೋಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ 28 ಲಕ್ಷ ರೂ. ಮೌಲ್ಯದ 56 ಗ್ರಾಂ ಹೈಡ್ರೋಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಹೆಬ್ಬಗೋಡಿ :
ಕೇರಳ ರಾಜ್ಯದಿಂದ ಉದ್ಯೋಗ ಅರಸಿಕೊಂಡು ನಗರಕ್ಕೆ ಬಂದು ಮೊಬೈಲ್‌ ಸರ್ವಿಸ್‌‍ ಕೆಲಸ ಮಾಡಿಕೊಂಡು ಹೆಚ್ಚಿನ ಹಣ ಸಂಪಾದನೆಗಾಗಿ ಕಡಿಮೆ ಬೆಲೆಗೆ ಮಾದಕವಸ್ತು ಖರೀದಿ ಮಾಡಿ ಹೆಚ್ಚಿನ ಬೆಲೆಗೆ ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದು, ಆತನಿಂದ 15 ಲಕ್ಷ ರೂ. ಮೌಲ್ಯದ 110 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ ಜಪ್ತಿ ಮಾಡಲಾಗಿದೆ.

ಮೆಡಿಕಲ್‌ ವೀಸಾ ಪಡೆದು ಭಾರತಕ್ಕೆ ಬಂದು ನಂತರ ಅಕ್ರಮವಾಗಿ ನಗರದಲ್ಲಿ ವಾಸವಾಗಿದ್ದುಕೊಂಡು ಆಫ್ರಿಕಾ ಮೂಲದ ಡ್ರಗ್‌ಪೆಡ್ಲರ್‌ಗಳಿಂದ ಮಾದಕವಸ್ತು ಖರೀದಿಸಿ ಅವುಗಳನ್ನು ಇದೇ ವ್ಯಾಪ್ತಿಯ ವಿನಾಯಕ ಲೇಔಟ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿ 15 ಲಕ್ಷ ರೂ. ಮೌಲ್ಯದ 81 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ ಹಾಗೂ 63 ಗ್ರಾಂ ಕೊಕೇನ್‌ ವಶಪಡಿಸಿಕೊಂಡು ಮುಂದಿನ ಕಾನೂನು ಕ್ರಮಕ್ಕಾಗಿ ಮೈಕೊಲೇಔಟ್‌ ಪೊಲೀಸ್‌‍ ಠಾಣೆಗೆ ಒಪ್ಪಿಸಲಾಗಿದೆ.

ಮೈಕೊಲೇಔಟ್‌ :
ಕೇರಳದಿಂದ ನಗರಕ್ಕೆ ಬಂದು ಹೂಡಿಯಲ್ಲಿ ಬೇಕರಿ ಇಟ್ಟುಕೊಂಡು ಬೇಕರಿಗೆ ಬರುವ ಪರಿಚಯಿಸ್ಥ ಗಿರಾಕಿಗಳಿಗೆ ಮಾದಕವಸ್ತು ಸರಬರಾಜು ಮಾಡುತ್ತಿದ್ದ ಕೇರಳ ರಾಜ್ಯದ ಆರೋಪಿಯನ್ನು ಬಂಧಿಸಿ 36 ಲಕ್ಷ ರೂ. ಮೌಲ್ಯದ 300 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ನ್ನು ವಶಪಡಿಸಿಕೊಳ್ಳಲಾಗಿದೆ.

ರಾಮಮೂರ್ತಿನಗರ :
ಲಾಡ್ಜ್ ವೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಮಂಗಳೂರು ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ 3 ಲಕ್ಷ ರೂ. ಮೌಲ್ಯದ 15 ಗ್ರಾಂ ಎಂಡಿಎಂಎ ಕ್ರಿಸ್ಟಲ್‌, ಸಿರಿಂಜ್‌ಗಳು, ನೀಡಲ್‌ಗಳು ಹಾಗೂ ಎಲೆಕ್ಟ್ರಾನಿಕ್‌ ತೂಕದ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಡ್ರಗ್‌ಪೆಡ್ಲಿಂಗ್‌ ಮಾಡುವ ಉದ್ದೇಶದಿಂದಲೇ ಈ ಇಬ್ಬರು ಆರೋಪಿಗಳು ಮಂಗಳೂರಿನಿಂದ ಬೆಂಗಳೂರಿಗೆ ಬಂದು ಸುಸಜ್ಜಿತವಾದ ಲಾಡ್ಜ್ ವೊಂದರಲ್ಲಿ ರೂಂನ್ನು ಬಾಡಿಗೆ ಪಡೆದುಕೊಂಡಿದ್ದಾರೆ.

ಈ ಇಬ್ಬರು ಮಾದಕವ್ಯಸನಿಗಳಿಗೆ ಲಾಡ್ಜ್ ಮಾಲೀಕರೇ ಮಾದಕವಸ್ತು ಸರಬರಾಜು ಮಾಡಿ ವಿಶೇಷ ರೀತಿಯಲ್ಲಿ ಮಾರಾಟದಂಧೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಆ ಲಾಡ್ಜ್ ಮೇಲೆ ದಾಳಿ ಮಾಡಿ ಲಾಡ್ಜ್ ನ್ನು ಸೀಸ್‌‍ ಮಾಡಿದ್ದಾರೆ. ನಗರದಲ್ಲಿ ಮಾದಕವಸ್ತು ಮಾರಾಟ ಹಾಗೂ ಸಾಗಣೆಯನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಕಾರ್ಯೋನುಖರಾಗಿದ್ದಾರೆ.

RELATED ARTICLES

Latest News