ನವದೆಹಲಿ,ಆ.5- ನೆರೆಯ ಬಾಂಗ್ಲಾ ದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಭಾರತೀಯ ನಾಗರೀಕರು ಎಚ್ಚರಿಕೆ ವಹಿಸಬೇಕು ಹಾಗೂ ಚಲನವಲನಗಳನ್ನು ನಿರ್ಬಂಧಿಸಬೇಕು ಎಂದು ಭಾರತ ಮನವಿ ಮಾಡಿಕೊಂಡಿದೆ.
ಇದರ ಜೊತೆಗೆ ಮುಂದಿನ ಸೂಚನೆ ನೀಡುವವರೆಗೆ ಬಾಂಗ್ಲಾಕ್ಕೆ ಪ್ರಯಾಣ ಬೆಳೆಸದಿರುವಂತೆಯೂ ಮನವಿ ಮಾಡಿಕೊಳ್ಳಲಾಗಿದೆ.ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಪ್ರತಿಭಟನಾಕಾರರು ಒತ್ತಾಯಿಸಿ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ಭದ್ರತಾ ಪಡೆ ಸಿಬ್ಬಂದಿ ಮತ್ತು ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ 14 ಪೊಲೀಸರು ಸೇರಿದಂತೆ ಕನಿಷ್ಠ 90 ಜನರು ಸಾವನ್ನಪ್ಪಿದ್ದಾರೆ ಎಂದು ಢಾಕಾದ ವರದಿಗಳು ತಿಳಿಸಿವೆ.
ಸಾಗುತ್ತಿರುವ ಬೆಳವಣಿಗೆಗಳ ದಷ್ಟಿಯಿಂದ, ಮುಂದಿನ ಸೂಚನೆ ಬರುವವರೆಗೆ ಬಾಂಗ್ಲಾದೇಶಕ್ಕೆ ಪ್ರಯಾಣಿಸದಂತೆ ಭಾರತೀಯ ಪ್ರಜೆಗಳಿಗೆ ಬಲವಾಗಿ ಸಲಹೆ ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಲಹೆಯಲ್ಲಿ ತಿಳಿಸಿದೆ.
ಪ್ರಸ್ತುತ ಬಾಂಗ್ಲಾದೇಶದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ತೀವ್ರ ಎಚ್ಚರಿಕೆ ವಹಿಸಲು, ತಮ ಚಲನವಲನಗಳನ್ನು ನಿರ್ಬಂಧಿಸಲು ಮತ್ತು ಢಾಕಾದಲ್ಲಿರುವ ಭಾರತದ ಹೈಕಮಿಷನ್‌ನೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ ಎಂದು ಅದು ಹೇಳಿದೆ.
ವಿವಾದಾತಕ ಉದ್ಯೋಗ ಕೋಟಾ ಯೋಜನೆಯ ವಿರುದ್ಧ ಕಳೆದ ತಿಂಗಳು ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳು ಪ್ರಾರಂಭವಾಗಿದ್ದವು. ಈಗ ನಡೆಯುತ್ತಿರುವ ಪ್ರತಿಭಟನೆಗಳು ಸರ್ಕಾರದ ವಿರುದ್ಧದ ಆಂದೋಲನವಾಗಿ ಮಾರ್ಪಟ್ಟಿವೆ.
ಜುಲೈ 25 ರಂದು, ಆ ದೇಶದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸುಮಾರು 6,700 ಭಾರತೀಯ ವಿದ್ಯಾರ್ಥಿಗಳು ಬಾಂಗ್ಲಾದೇಶದಿಂದ ಮರಳಿದ್ದಾರೆ ಎಂದು ತಿಳಿದುಬಂದಿದೆ.