Sunday, October 13, 2024
Homeರಾಜ್ಯರಾಜ್ಯದಲ್ಲಿ ತಗ್ಗಿದ ವರುಣನ ಆರ್ಭಟ, ಸದ್ಯಕ್ಕೆ ಭಾರೀ ಮಳೆ ಮುನ್ಸೂಚನೆಗಳಿಲ್ಲ

ರಾಜ್ಯದಲ್ಲಿ ತಗ್ಗಿದ ವರುಣನ ಆರ್ಭಟ, ಸದ್ಯಕ್ಕೆ ಭಾರೀ ಮಳೆ ಮುನ್ಸೂಚನೆಗಳಿಲ್ಲ

ಬೆಂಗಳೂರು, ಆ.5-ಕರಾವಳಿ ಹಾಗೂ ಮಲೆನಾಡಿನಲ್ಲಿ ಆರ್ಭಟಿಸುತ್ತಿದ್ದ ವರುಣ ಸೌಮ್ಯವಾಗಿರುವ ಹಿನ್ನಲೆಯಲ್ಲ ಮಳೆ ಕಡಿಮೆಯಾಗಿದೆ. ಸದ್ಯಕ್ಕೆ ಭಾರೀ ಮಳೆಯಾಗುವ ಮುನ್ಸೂಚನೆಗಳಿಲ್ಲ. ಆದರೂ ರಾಜ್ಯಾದ್ಯಂತ ಸಾಧಾರಣ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ.

ಆಗಸ್ಟ್‌ ಒಂದರಿಂದ ಇದುವರೆಗೆ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿದೆ. ಆದರೆ, ಉತ್ತರ ಕರ್ನಾಟಕದ ಭಾಗದಲ್ಲಿ ವಾಡಿಕೆಗಿಂತ ಶೇ.49ರಷ್ಟು ಕಡಿಮೆ ಮಳೆಯಾಗಿದೆ.ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣೆಗೆರೆ, ಮಂಡ್ಯ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ವಾಡಿಕೆಗಿಂತ ಕಡಿಮೆಯಾಗಿದೆ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ನೆರೆಹಾವಳಿ ಉಂಟಾಗಿದೆ.

ಕಳೆದ ಎರಡು ಮೂರು ದಿನಗಳಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಇಳಿಮುಖವಾಗಿದೆ. ಅಲ್ಲಲ್ಲಿ ಮಳೆ ಮುಂದುವರೆದಿದ್ದು, ನದಿಗಳ ಪ್ರವಾಹವೂ ಇಳಿಕೆಯಾಗುತ್ತಿದೆ. ಆದರೆ, ಬಹುತೇಕ ಜಲಾಶಯಗಳು ಭರ್ತಿಯಾಗಿರುವುದರಿಂದ ಜಲಾಶಯಗಳಿಂದ ಹೆಚ್ಚು ನೀರು ನದಿಗಳಿಗೆ ಬಿಡುತ್ತಿರುವುದರಿಂದ ಕಾವೇರಿ, ಶರಾವತಿ, ಕೃಷ್ಣಾ ಹಾಗೂ ತುಂಗಭದ್ರಾ, ಘಟಪ್ರಭಾ, ಮಲಪ್ರಭಾ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ.

ಮಹಾರಾಷ್ಟ್ರದಲ್ಲಿ ಭಾರೀ ಮಳೆ ಮುಂದುವರೆದಿದ್ದು, ಕೃಷ್ಣಾ ಕೊಳ್ಳದ ಜಲಾನಯನ ಭಾಗದ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆಯಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.ಕೃಷ್ಣಾ ನದಿ ಪಾತ್ರದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಉಳಿದಂತೆ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಜಲಾಶಯಗಳ ಒಳಹರಿವು ಸಹ ಗಣನೀಯವಾಗಿ ಇಳಿಕೆಯಾಗಲಿದೆ.

ಜುಲೈ ತಿಂಗಳಿಗೆ ಹೋಲಿಸಿದರೆ, ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೂ ನಿರಂತರ ಮಳೆಯಾಗಿರುವುದರಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಹಾನಿ ಸಮಸ್ಯೆಗಳು ತಲೆದೋರಿವೆ.

ಮುಂಗಾರು ಮಳೆ ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಯಾವುದೇ ಮಳೆ ಮುನ್ನಚ್ಚರಿಕೆ ನೀಡಿಲ್ಲ. ಹವಾಮಾನ ಮುನ್ಸೂಚನೆ ಪ್ರಕಾರ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ಸಂಜೆ ಹಾಗೂ ರಾತ್ರಿ ವೇಳೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.

RELATED ARTICLES

Latest News