ಬೆಂಗಳೂರು,ಜ.4- ರಾಜ್ಯದ ಗುತ್ತಿಗೆದಾರರ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಕೇಳಿದರೆ ಅದನ್ನು ಒದಗಿಸಲು ಯಾವುದೇ ಅಡಚಣೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ಸರ್ಕಾರದ ದಾಖಲೆ. ಮುಚ್ಚಿಡುವ ಅಗತ್ಯವಿಲ್ಲ. 10 ರೂ. ಪಾವತಿಸಿ ಆರ್‍ಟಿಐ ಅರ್ಜಿ ಹಾಕಿದರೆ ದಾಖಲೆ ಕೊಡುತ್ತೇವೆ. ಇನ್ನು ಆದಾಯ ತೆರಿಗೆ ಸರ್ಕಾರಿ ಸಂಸ್ಥೆ ಕೇಳಿದರೆ ಕೊಡಲ್ಲ ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಆದಾಯ ತೆರಿಗೆ ಇಲಾಖೆ 6 ಬಾರಿ ಪತ್ರ ಬರೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಇದು ಸಚಿವರ ಅಥವಾ ಸರ್ಕಾರದವರೆಗೂ ಬರುವ ವಿಚಾರವಲ್ಲ. ಅಧಿಕಾರಿಗಳು ನಿರ್ಧಾರ ತೆಗೆದುಕೊಂಡು ಮಾಹಿತಿ ಒದಗಿಸುತ್ತಾರೆ ಎಂದರು.
ಇತ್ತೀಚೆಗೆ ತಾವು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಟ್ಕರಿ ಅವರನ್ನು ಭೇಟಿ ಮಾಡಿದ್ದು, ರಾಜ್ಯದಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ 20 ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸುವ ಸಂಬಂಧ ಪಟ್ಟಂತೆ ಚರ್ಚೆ ನಡೆಸಿದ್ದೇವೆ. ಭೂ ಸ್ವಾೀಧಿನ, ಅರಣ್ಯ ಪ್ರದೇಶದ ಪೂರ್ವಾನುಮತಿ, ನಿರಪೇಕ್ಷಣಾ ಪತ್ರ ಸೇರಿದಂತೆ ಹಲವು ರೀತಿಯ ತೊಡಕುಗಳು ಬಾಕಿ ಉಳಿದಿವೆ. ಅವುಗಳನ್ನು 3 ತಿಂಗಳಲ್ಲಿ ಬಗೆಹರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವುದಾಗಿ ಸತೀಶ್ ಜಾರಕಿಹೊಳಿ ತಿಳಿಸಿದರು.
ಬೆಂಗಳೂರು ನಗರದಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಆಸಕ್ತಿ ಹೊಂದಿದೆ. ರಾಜ್ಯಸರ್ಕಾರ ನಿರಪೇಕ್ಷಣಾ ಪತ್ರ ನೀಡಿದ್ದೇ ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಸುರಂಗ ನಿರ್ಮಾಣಕ್ಕೆ ಮುಂದಾಗಲಿದೆ. ಆದರೆ ಯಾರಿಂದ ಕಾಮಗಾರಿ ನಡೆಸಬೇಕೆಂಬುದು ನಿರ್ಣಯವಾಗಿಲ್ಲ. ಸದ್ಯಕ್ಕೆ ಬಿಬಿಎಂಪಿ ಅದರ ಮೇಲುಸ್ತುವಾರಿಯನ್ನು ವಹಿಸುತ್ತಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
75 ವರ್ಷದ ನಂತರ ಕಾಶ್ಮೀರ ಗಡಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ
ಹುಬ್ಬಳ್ಳಿಯಲ್ಲಿನ ಕರಸೇವಕನ ಬಂಧನ ಪ್ರಕರಣದಲ್ಲಿ ರಾಜಕೀಯ ಅನಗತ್ಯ. ಬಾಕಿ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನನ್ನು ಬಿಡುಗಡೆ ಮಾಡಲು ಬಿಜೆಪಿ ಗಡುವು ನೀಡಿದರೆ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಏಕೆಂದರೆ ಅದು ಇನ್ನೇನ್ನಿದ್ದರೂ ಕಾನೂನಾತ್ಮಕ ಹೋರಾಟ ನಡೆಯಬೇಕೇ ಹೊರತು, ರಾಜಕೀಯ ಸಂಘರ್ಷದಿಂದ ಪ್ರಯೋಜನವಾಗುವುದಿಲ್ಲ ಎಂದರು.
ತಾನು ರಾಮಸೇವಕ. ತನ್ನನ್ನು ಬಂಧಿಸಿ ಎಂದು ಬಿಜೆಪಿಯವರು ಹೇಳುತ್ತಿರುವುದು ಅಪ್ರಸ್ತುತ ವಿಚಾರ. ಕ್ರಿಮಿನಲ್‍ಗಳಾಗಿದ್ದರೆ, ತಪ್ಪು ಮಾಡಿದರೆ ಮಾತ್ರ ಬಂಧಿಸಲಾಗುತ್ತದೆ. ಅನಗತ್ಯವಾಗಿ ಯಾರನ್ನೂ ಬಂಧಿಸುವ ಅಗತ್ಯವಿಲ್ಲ. ಬಿಜೆಪಿಯವರ ಹೋರಾಟಗಳೇ ಹಾಸ್ಯಾಸ್ಪದ ಎಂದರು.
ಅಯೋಧ್ಯೆಯಲ್ಲಿ ರಾಮಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ತೆರಳುವವರಿಗೆ ಸೂಕ್ತ ರಕ್ಷಣ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿರುವುದರಲ್ಲಿ ತಪ್ಪಿಲ್ಲ. ಜ.22 ರವರೆಗೂ ಅಯೋಧ್ಯೆಗೆ ಹೋಗಿಬರುವವರ ಸಂಖ್ಯೆ ಹೆಚ್ಚಿರುತ್ತದೆ. ಧ್ವಜ ಹಾಕಿಕೊಂಡು ಮೆರವಣಿಗೆ ನಡೆಸಿ ಅಯೋಧ್ಯೆಯತ್ತ ಪ್ರಯಾಣ ಮಾಡುತ್ತಾರೆ. ಈ ಸಂದರ್ಭದಲ್ಲಿ ಸಂಘರ್ಷಗಳಾಗಬಹುದು. ಹೀಗಾಗಿ ಹೆಚ್ಚಿನ ಸಮಸ್ಯೆಗಳಾಗದಂತೆ ಪೊಲೀಸರು ಮುಂಜಾಗ್ರತೆ ವಹಿಸಬೇಕಿದೆ ಎಂದು ಹೇಳಿದರು.
ರಾಮಮಂದಿರ ಒಂದು ಪಕ್ಷಕ್ಕೆ ಸೇರಿದ್ದಲ್ಲ. ಆದರೆ ಒಂದೇ ಪಕ್ಷ ಮುಂದಾಳತ್ವ ವಹಿಸುವುದ ರಿಂದ ಸಹಜವಾಗಿಯೇ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತವೆ. ಅದರ ಬದಲು ರಾಮ ಸಮಿತಿಯವರು ಎಲ್ಲಾ ಪಕ್ಷದವರ ವಿಶ್ವಾಸ ತೆಗೆದುಕೊಂಡು ಮುನ್ನಡೆದರೆ ಪಕ್ಷಾತೀತವಾಗಿರಲಿದೆ ಎಂದರು. ರಾಮಮೂರ್ತಿ ಉದ್ಘಾಟನೆಗೆ ಆಯ್ದ ವ್ಯಕ್ತಿಗಳಿಗೆ ಆಹ್ವಾನ ನೀಡಿದ್ದಾರೆ. ಅಲ್ಲಿಗೆ ಹೋಗುವವರಿಗೆ ಆಹ್ವಾನದ ಅಗತ್ಯವೂ ಇಲ್ಲ, ಆಸಕ್ತಿ ಇರುವವರು ಹೋಗಬಹುದು. ತಾವು ತಮ್ಮ ಊರಿನ ರಾಮ ಮಂದಿರದಲ್ಲಿ ಪೂಜೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಸೈಬರ್ ಕ್ರೈಂ ಭೇದಿಸುವಲ್ಲಿ ಹಿಂದೆ ಬಿದ್ದ ಬೆಂಗಳೂರು ಪೊಲೀಸರು..!
ರಾಮ ಮಂದಿರ ಪೂರ್ತಿಯಾಗದೇ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿರುವುದರ ಬಗ್ಗೆ ಪ್ರಶ್ನೆ ಮಾಡಿದರೆ ಹಿಂದೂ ವಿರೋಧಿ ಎಂದ ಆರೋಪ ಪಟ್ಟಿ ಕಟ್ಟುತ್ತಾರೆ. ಹೀಗಾಗಿ ತಾವು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಕಾರ್ಯಕರ್ತರ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗುವುದು. ತಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡುವುದಿಲ್ಲ. ಇಂದು ದೆಹಲಿಯಲ್ಲಿ ನಡೆಯುವ ಸಭೆಯ ಬಳಿಕ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡುತ್ತಿದ್ದೇವೆ. ಸಚಿವರು ಸ್ಪರ್ಧೆ ಮಾಡಬೇಕು ಎಂದಾದರೆ ಪಕ್ಷದ ಆದೇಶವನ್ನು ಪಾಲನೆ ಮಾಡುತ್ತೇವೆ ಎಂದು ಹೇಳಿದರು.