ಬೆಂಗಳೂರು, ಮೇ.20 ದೇಶವ್ಯಾಪಿ ಕರೆಯಲಾಗಿರುವ ಮೆಡಿಕಲ್ ಸ್ಟೋರ್‌ಗಳ ಬಂದ್‌ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಸುಮಾರು 26 ಸಾವಿರಕ್ಕೂ ಅಧಿಕ ಮೆಡಿಕಲ್ ಅಂಗಡಿಗಳು ಹಾಗೂ ಬೆಂಗಳೂರಿನಲ್ಲಿ ಸುಮಾರು 6,500ಕ್ಕೂ ಹೆಚ್ಚು ಮೆಡಿಕಲ್ ಸ್ಟೋರ್‌ಗಳಿವೆ.
ಆದರೆ ರಾಜ್ಯದ ಮೆಡಿಕಲ್ ಸ್ಟೋರ್ ಮಾಲೀಕರಲ್ಲಿ ಪೂರ್ಣ ಒಮ್ಮತ ಕಾಣಿಸದ ಕಾರಣ ಕೆಲ ಅಂಗಡಿಗಳು ಮಾತ್ರ ಬಂದ್ ಆಗಿದ್ದು, ಇನ್ನೂ ಅನೇಕ ಮೆಡಿಕಲ್‌ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ದೇಶಾದ್ಯಂತ ಸುಮಾರು 12 ಲಕ್ಷ ಮೆಡಿಕಲ್ ಶಾಪ್‌ಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿವೆ ಎಂದು ಸಂಘಟನೆ ತಿಳಿಸಿದೆ.
ಹೋರಾಟದ ಪ್ರಮುಖ ಕಾರಣ ಏನು?
ಆನ್‌ಲೈನ್ ಮೂಲಕ ಔಷಧ ಮಾರಾಟ ವೇಗವಾಗಿ ಹೆಚ್ಚುತ್ತಿರುವುದು ಸಾಂಪ್ರದಾಯಿಕ ಮೆಡಿಕಲ್ ಅಂಗಡಿಗಳಿಗೆ ದೊಡ್ಡ ಹೊಡೆತವಾಗಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.
ವಿಶೇಷವಾಗಿ ಆನ್‌ಲೈನಲ್ಲಿ ಹಾಗೂ ಹಲವಾರು ಆ್ಯಪ್‌ಗಳ ಮೂಲಕ ಔಷಧಿ ವಿತರಣೆ ಹೆಚ್ಚುತ್ತಿರುವುದನ್ನು ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತಿವೆ.ಪ್ರಿಸ್ಕ್ರಿಪ್ಷನ್ ಇಲ್ಲದೇ ಔಷಧಿ ಮಾರಾಟ, ನಕಲಿ ಔಷಧಿಗಳ ಭೀತಿ, ಆಂಟಿಬಯೋಟಿಕ್ ದುರುಪಯೋಗ ಹಾಗೂ ನಿಯಂತ್ರಣರಹಿತ ಇ-ಫಾರ್ಮಸಿ ವ್ಯವಸ್ಥೆಯಿಂದ ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಉಂಟಾಗುತ್ತಿದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ವ್ಯಾಪಾರಿಗಳ ಪ್ರಮುಖ ಬೇಡಿಕೆಗಳು; ಅಕ್ರಮ ಇ-ಫಾರ್ಮಸಿಗಳನ್ನು ಬಂದ್ ಮಾಡಬೇಕು, ಅತಿಯಾದ ಡಿಸ್ಕೌಂಟ್ ನೀತಿಗೆ ಕಡಿವಾಣ ಹಾಕಬೇಕು, ಸಣ್ಣ ಔಷಧ ವ್ಯಾಪಾರಿಗಳನ್ನು ರಕ್ಷಿಸಬೇಕು ಎನ್ನುವುದು ಅವರ ಪ್ರಮುಖ ಬೇಡಿಕೆಯಾಗಿದೆ.
