ಬೆಂಗಳೂರು, ನ.1-ನಗರದ ಕಾನಾರ್ಡ್ ಹೋಟೆಲ್‌ನ ಈಜುಕೊಳದಲ್ಲಿ ಅಳವಡಿಸಿದ್ದ ಎಲ್‌ಇಡಿ ದೀಪಗಳಿಂದ ವಿದ್ಯುತ್ ಸೋರಿಕೆಯಾಗಿ ಇಬ್ಬರು ವಿದೇಶಿಗರು ಮೃತಪಟ್ಟಿದ್ದಾರೆ ಎಂಬುವುದು ಹಲಸೂರು ಠಾಣೆ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳ ಹಾಗೂ ಪರಿಣಿತರ ತಂಡಗಳು ಭೇಟಿ ನೀಡಿ ಪರಿಶೀಲಿಸಿದ್ದು, ಮೇಲ್ನೋಟಕ್ಕೆ ವಿದ್ಯುತ್ ಸೋರಿಕೆಯಿಂದ ದುರಂತ ಸಂಭವಿಸಿದೆ ಎಂದು ಕಂಡುಬಂದಿದೆ.
ಮೊನ್ನೆ ಸಂಜೆ ಈ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಪ್ರವಾಸಿಗರಾದ ಜರ್ಮನಿಯ ಅಲೆಗ್ಸಾಂಡರ್ (57) ಮತ್ತು ಸ್ಲೋವಾಕಿಯಾದ ಓರಿಯಾಟ್(45) ಈಜುಕೊಳದಲ್ಲಿ ಈಜಾಡುತ್ತಿದ್ದಾಗ ವಿದ್ಯುತ್ ಸ್ಪರ್ಶ ಉಂಟಾಗಿ ಮೃತಪಟ್ಟಿದ್ದಾರೆ.
ಈ ಇಬ್ಬರ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಇಂದು ಪೊಲೀಸರು ಹಸ್ತಾಂತರಿಸಲಿದ್ದಾರೆ. ಈಜುಕೊಳದಲ್ಲಿ ಒದ್ದಾಡುತ್ತಿದ್ದ ಇವರನ್ನು ರಕ್ಷಿಸಲು ಹೋದ ಅಮೆರಿಕಾದ ಪ್ರಜೆ ಮ್ಯಾಥ್ಯು ಮತ್ತು ಈಜುಕೊಳದ ಲೈಫ್ ಗಾರ್ಡ್ ರಾಹುಲ್ ತಿವಾರಿ ಎಂಬುವರು ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರು ಪ್ರಾಣಾಪಯದಿಂದ ಪಾರಾಗಿದ್ದಾರೆ.
ಈ ದುರಂತದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಬೆಸ್ಕಾಂ ಅಧಿಕಾರಿಗಳ ತಂಡ ನೀಡುವ ವರದಿ ಮತ್ತು ಪೊಲೀಸರ ತನಿಖೆ ಪೂರ್ಣಗೊಂಡ ನಂತರವೇ ಇಬ್ಬರು ವಿದೇಶಿಗರ ಸಾವಿನ ದುರಂತಕ್ಕೆ ನಿಖರ ಕಾರಣವೇನೆಂಬುದು ತಿಳಿದು ಬರಲಿದೆ.
