ಬೆಂಗಳೂರು, ನ.1- ವಿದ್ಯಾರ್ಥಿಗಳನ್ನು ಆಧುನಿಕ ತಂತ್ರಜ್ಞಾನಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರರಿಂದ 12ನೇ ತರಗತಿವರೆಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ತರಬೇತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಕನ್ನಡದ ಭಾಷಾ ಬುನಾದಿಯನ್ನು ಗಟ್ಟಿಗೊಳಿಸುವುದರ ಜೊತೆಗೆ ಮಕ್ಕಳನ್ನು ಜಾಗತಿಕ ತಂತ್ರಜ್ಞಾನದ ಸ್ಪರ್ಧೆಗೆ ಸಿದ್ಧಪಡಿಸುವುದು ಸರ್ಕಾರದ ಗುರಿಯಾಗಿದೆ. ಎಐ ತರಬೇತಿಯನ್ನು ಹನ್ನೆರಡನೇ ತರಗತಿಯವರೆಗೂ ಮುಂದುವರಿಸಲಾಗುವುದು ಎಂದು ಪ್ರಕಟಿಸಿದರು.
ನಮ ಉಸಿರು ಕನ್ನಡ, ನಮ ಹೆಸರು ಕನ್ನಡ, ನಮ ಕಸುಬು ಕನ್ನಡ. ಕನ್ನಡ ನುಡಿ ಬಹಳ ಚೆಂದ. ಅದರಲ್ಲಿ ಏನೇ ಗೀಚಿದರೂ ಅದು ಶ್ರೀಗಂಧವಾಗುತ್ತದೆ. ನಮ ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ನಡೆ ಕನ್ನಡವಾಗಿರಬೇಕು. ಜಗತ್ತಿನ ಏಳಿಗೆ ಕರ್ನಾಟಕದಿಂದ ಆಗಲಿದೆ ಎಂದು ಕವಿ ದ.ರಾ. ಬೇಂದ್ರೆ ಅವರು ಬಹಳ ಹಿಂದೆಯೇ ಹೇಳಿದ್ದಾರೆ. ಕನ್ನಡ ಕರ್ನಾಟಕದ ದಿಕ್ಸೂಚಿಯಾಗಿದ್ದು, ಕರ್ನಾಟಕ ಭಾರತದ ಭವಿಷ್ಯವಾಗಿದೆ ಎಂದು ಹೇಳಿದರು.
ಮಾತೃಭಾಷೆಯ ಮೂಲಕ ಜ್ಞಾನ ಮತ್ತು ಸಂಸ್ಕೃತಿ ಹರಿಯುತ್ತದೆ. ಭಾಷೆ ಎನ್ನುವುದು ಸಂಸ್ಕೃತಿ ಹಾಗೂ ಜ್ಞಾನದ ಪ್ರತಿಬಿಂಬ. ಹೆತ್ತ ತಾಯಿ ಮತ್ತು ಹುಟ್ಟಿದ ನಾಡು ಸ್ವರ್ಗಕ್ಕಿಂತಲೂ ಮಿಗಿಲು. ನಾವು ಇತರರ ಮನಸ್ಸುಗಳನ್ನು ಕನ್ನಡದ ಮೂಲಕ ಗೆಲ್ಲಬೇಕು. ನಮ ದೇಹ ಯಾವುದೇ ದೇಶದಲ್ಲಿದ್ದರೂ ಉಸಿರು ಮಾತ್ರ ಕನ್ನಡವಾಗಿರಬೇಕು.
ನುಡಿ ಉಳಿದರೆ ನಾಡು ಉಳಿಯುತ್ತದೆ, ನಾಡು ಉಳಿದರೆ ನುಡಿ ಉಳಿಯುತ್ತದೆ. ರಾಜ್ಯೋತ್ಸವ ಕೇವಲ ಆಚರಣೆಯಲ್ಲ, ಇದು ಕನ್ನಡ ತಾಯಿ ಭುವನೇಶ್ವರಿಯ ಸೇವೆ ಹಾಗೂ ಮಾತೃಪೂಜೆಯಾಗಿದೆ. ತಾಯಿನುಡಿಯ ಸೇವೆಗಿಂತ ದೊಡ್ಡ ಧರ್ಮ ಮತ್ತೊಂದಿಲ್ಲ. ಕನ್ನಡವನ್ನು ಪ್ರೀತಿಸುವುದು ತಾಯಿಯನ್ನು ಪ್ರೀತಿಸಿದಂತೆ ಎಂದು ತಿಳಿಸಿದರು.
ಮಾತೃಭಾಷೆಯಲ್ಲಿ ಕಲಿತ ಜ್ಞಾನ ಗಟ್ಟಿಯಾಗಿರುತ್ತದೆ. ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಅದು ಗೋವರ್ಧನಗಿರಿಯಷ್ಟಾಗುತ್ತದೆ ಎಂದು ಕುವೆಂಪು ಅವರು ಹೇಳಿದ್ದಾರೆ. ಅಂದು ಕುವೆಂಪು ಕನ್ನಡದ ಮೂಲಕ ವಿಶ್ವಮಾನವ ಸಂದೇಶ ಸಾರಿದ್ದರು. ಇಂದು ಕನ್ನಡತನ ಜಾಗತಿಕ ಮಟ್ಟದಲ್ಲಿ ಹರಡಿಕೊಂಡಿದೆ. ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡ ಭಾಷೆ ಪಂಪ, ರನ್ನ, ಜನ್ನ, ಕುಮಾರವ್ಯಾಸ, ಕನಕದಾಸ, ಪುರಂದರದಾಸ, ಸರ್ವಜ್ಞ ಹಾಗೂ ಬಸವಣ್ಣನವರಂತಹ ಮಹನೀಯರನ್ನು ನಾಡಿಗೆ ನೀಡಿದೆ. ಡಿವಿಜಿ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಗೋಕಾಕ್, ಯು.ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಸಿದ್ದಲಿಂಗಯ್ಯ, ನಿಸಾರ್ ಅಹಮದ್ ಹಾಗೂ ಚಂದ್ರಶೇಖರ ಕಂಬಾರರಂತಹ ದಿಗ್ಗಜ ಸಾಹಿತಿಗಳಿಂದ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ ಎಂದರು.
ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿದ ಪುಣ್ಯಭೂಮಿ ಕನ್ನಡನಾಡು. ಇಂತಹ ಶ್ರೀಮಂತ ಭಾಷೆಯ ಬಗ್ಗೆ ಮಕ್ಕಳಲ್ಲಿ ಪ್ರೀತಿ ಮತ್ತು ಗೌರವ ಬೆಳೆಸಬೇಕು. ನಾವು ಭಾಷೆಯನ್ನು ಪ್ರೀತಿಸಿದರೆ ಭಾಷೆಯೇ ನಮನ್ನು ಕಾಪಾಡುತ್ತದೆ. ಭಾಷೆಗಳಿಗೆ ಯಾವುದೇ ಗಡಿಗಳಿಲ್ಲ. ಇದು ಡಿಜಿಟಲ್ ಯುಗವಾಗಿದ್ದು, ವಿಶ್ವದ ಎಲ್ಲ ಭಾಷೆಗಳೂ ಮೊಬೈಲ್ ಮೂಲಕ ಲಭ್ಯವಾಗುತ್ತಿವೆ.
ಕಲಿಕೆಯ ವ್ಯಾಪ್ತಿ ವಿಸ್ತಾರಗೊಂಡಿರುವ ಇಂದಿನ ಸ್ಪರ್ಧಾತಕ ಜಗತ್ತಿನಲ್ಲಿ ಕನ್ನಡವೂ ಬೆಳಗಬೇಕು. ಅದಕ್ಕಾಗಿ ಮಕ್ಕಳು ಮೊದಲು ಕನ್ನಡ ಕಲಿಯಬೇಕು. ಕಲಿತರೆ ಸಾಲದು, ನಿತ್ಯ ಜೀವನದಲ್ಲಿಯೂ ಕನ್ನಡವನ್ನು ಬಳಸಬೇಕು. ಮಕ್ಕಳಲ್ಲಿ ಕನ್ನಡದ ಬಗ್ಗೆ ಆಸಕ್ತಿ ಮೂಡಿಸುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರ ಮೇಲಿದೆ. ಕನ್ನಡ ಕೇವಲ ಸರ್ಕಾರಿ ಭಾಷೆಯಾಗದೆ ಪ್ರತಿಯೊಬ್ಬರ ಹೃದಯದ ಭಾಷೆಯಾಗಬೇಕು. ಭಾಷೆ ಎನ್ನುವುದು ಬದುಕು. ಭಾಷೆಯಿಲ್ಲದ ಬದುಕು ಮೂಕಿ ಚಿತ್ರವಿದ್ದಂತೆ ಎಂದು ಹೇಳಿದರು.
ಕನ್ನಡದ ಬೇರುಗಳು ಕರ್ನಾಟಕದಲ್ಲಿದ್ದರೂ ಅದರ ರೆಂಬೆ-ಕೊಂಬೆಗಳು ವಿಶ್ವದಾದ್ಯಂತ ಹರಡಿಕೊಂಡಿವೆ. ಸಾವಿರಾರು ಕನ್ನಡಿಗರು ಜಗತ್ತಿನ ವಿವಿಧ ದೇಶಗಳಲ್ಲಿ ನೆಲೆಸಿ ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ. ಕಲೆ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಹಾಗೂ ಮಾಹಿತಿ ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಕನ್ನಡಿಗರು ತಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ನಮ ಸರ್ಕಾರ ಕನ್ನಡ, ನೆಲ, ಜಲ ಹಾಗೂ ಸಂಸ್ಕೃತಿಯ ರಕ್ಷಣೆಗೆ ಬದ್ಧವಾಗಿದೆ ಎಂದರು.
ನಮ ಮಕ್ಕಳು ಜಾಗತಿಕ ಸ್ಪರ್ಧೆಗೆ ಸಿದ್ಧರಾಗಬೇಕು. ಅದಕ್ಕೆ ಕನ್ನಡದ ಬೇರುಗಳು ಗಟ್ಟಿಯಾಗಿರಬೇಕು. ಆ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸವನ್ನು ಸರ್ಕಾರ, ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ ಮಾಡಬೇಕಿದೆ. ಸರ್ಕಾರಿ ಶಾಲೆಗಳು ಪ್ರತಿಭೆಯ ಗಣಿಗಳಾಗಿದ್ದು, ಕನ್ನಡ ಭಾಷೆಯ ನಿಜವಾದ ಬೇರುಗಳಿರುವುದು ಸರ್ಕಾರಿ ಶಾಲೆಗಳಲ್ಲಿ. ಕಳೆದ ಮೂರು ವರ್ಷಗಳಿಂದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಮೊದಲ ಸ್ಥಾನಗಳನ್ನು ಗಳಿಸುತ್ತಿದ್ದಾರೆ. ಕನ್ನಡದ ಅಳಿವು-ಉಳಿವು ನಮ ವಿದ್ಯಾರ್ಥಿಗಳ ಕೈಯಲ್ಲಿದೆ ಎಂದು ತಿಳಿಸಿದರು.
