Homeರಾಷ್ಟ್ರೀಯದೆಹಲಿಯಲ್ಲಿ ಇಂಡಿ ಕೂಟದ ಪ್ರತಿಭಟನೆಗೆ ವ್ಯಾಪಾರಿಗಲಿಂಡಾ ತೀವ್ರ ಆಕ್ರೋಶ

ದೆಹಲಿಯಲ್ಲಿ ಇಂಡಿ ಕೂಟದ ಪ್ರತಿಭಟನೆಗೆ ವ್ಯಾಪಾರಿಗಲಿಂಡಾ ತೀವ್ರ ಆಕ್ರೋಶ

ನವದೆಹಲಿ,ನ.1- ಚುನಾವಣಾ ಅಕ್ರಮಗಳು ಹಾಗೂ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ವಿರೋಧ ಪಕ್ಷಗಳ ಇಂಡಿಯಾ ಬ್ಲಾಕ್‌ ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಬೃಹತ್‌ ಪ್ರತಿಭಟನಾ ರ್ಯಾಲಿಗೆ ವ್ಯಾಪಾರಿಗಳ ಒಕ್ಕೂಟ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ರ್ಯಾಲಿಯಿಂದಾಗಿ ದೆಹಲಿಯ ಪ್ರಮುಖ 20 ಮಾರುಕಟ್ಟೆಗಳ ವ್ಯಾಪಾರ ವಹಿವಾಟಿಗೆ ಭಾರಿ ಹೊಡೆತ ಬೀಳುವ ಸಾಧ್ಯತೆಯಿದ್ದು, ಸುಮಾರು ಶೇ.80ರಷ್ಟು ಅಂಗಡಿಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಆತಂಕ ವ್ಯಕ್ತಪಡಿಸಿದೆ.

ಈ ಸಂಬಂಧ ಕಾಂಗ್ರೆಸ್‌‍ ನಾಯಕ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ವ್ಯಾಪಾರಿಗಳ ಸಂಘಟನೆ ನಾಲ್ಕನೇ ಬಾರಿಗೆ ಪತ್ರ ಬರೆದಿದೆ. ರಾಮಲೀಲಾ ಮೈದಾನದ ಐದು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಸುಮಾರು ಮೂರು ಲಕ್ಷ ಅಂಗಡಿಗಳಿದ್ದು, ಅವುಗಳಲ್ಲಿ 2.5 ಲಕ್ಷ ಅಂಗಡಿಗಳು ಬಂದ್‌ ಆಗುವ ಸಾಧ್ಯತೆಯಿದೆ. ಇದರಿಂದ ಲಕ್ಷಾಂತರ ವ್‌ಯಾಪಾರಿಗಳು ಮತ್ತು ಕಾರ್ಮಿಕರ ಜೀವನೋಪಾಯಕ್ಕೆ ತೊಂದರೆಯಾಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

10 ಸಾವಿರದಿಂದ 12 ಸಾವಿರ ಕೋಟಿ ವಹಿವಾಟಿಗೆ ಆತಂಕ :
ಸಿಟಿಐ ಅಧ್ಯಕ್ಷ ಬ್ರಿಜೇಶ್‌ ಗೋಯಲ್‌ ಅವರ ಪ್ರಕಾರ, ರ್ಯಾಲಿಯಿಂದ ಕಾಶೀರಿ ಗೇಟ್‌, ಚಾಂದಿನಿ ಚೌಕ್‌, ಸದರ್‌ ಬಜಾರ್‌, ಖಾರಿ ಬಾವೋಲಿ, ಚಾವ್ರಿ ಬಜಾರ್‌, ದರಿಯಾಗಂಜ್‌, ಪಹರ್‌ಗಂಜ್‌, ಕನ್ನಾಟ್‌ ಪ್ಲೇಸ್‌‍, ಪಾಲಿಕಾ ಬಜಾರ್‌ ಸೇರಿದಂತೆ ಪ್ರಮುಖ ಮಾರುಕಟ್ಟೆಗಳ ವ್‌ಯಾಪಾರ ವಹಿವಾಟು ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ.

ದೀಪಾವಳಿ, ಛಠ್‌ ಮತ್ತು ಭಾಯ್‌ ದೂಜ್‌ ಹಬ್ಬಗಳ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವ್ಯಾಪಾರ ಚಟುವಟಿಕೆಗಳು ಗರಿಗೆದರಿರುವ ಸಮಯದಲ್ಲೇ ರ್ಯಾಲಿ ಆಯೋಜಿಸಿರುವುದು ವರ್ತಕರ ಆತಂಕಕ್ಕೆ ಕಾರಣವಾಗಿದೆ. ಹಬ್ಬದ ಋತುವಿನಲ್ಲಿ ಈ ಮಾರುಕಟ್ಟೆಗಳಲ್ಲಿ ಪ್ರತಿದಿನ ಸುಮಾರು 10,000ರಿಂದ 12,000 ಕೋಟಿ ವಹಿವಾಟು ನಡೆಯುವ ಸಾಧ್ಯತೆಯಿದ್ದು, ರ್ಯಾಲಿಯಿಂದ ಈ ವ್ಯಾಪಾರಕ್ಕೆ ದೊಡ್ಡ ಹೊಡೆತ ಬೀಳಬಹುದು ಎಂದು ಸಿಟಿಐ ಹೇಳಿದೆ.

ಪ್ರತಿಭಟನೆ ಮಾಡಿ, ಶಾಪಿಂಗ್‌ ಕೂಡ ಮಾಡಿ ಎಂದಿದ್ದ ರಾಹುಲ್‌ :
ವ್ಯಾಪಾರಿಗಳ ಆತಂಕದ ಬೆನ್ನಲ್ಲೇ ರಾಹುಲ್‌ ಗಾಂಧಿ ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸುವ ಜನರು ಸ್ಥಳೀಯ ವ್ಯಾಪಾರಿಗಳಿಂದ ಖರೀದಿ ಮಾಡುವಂತೆ ಮನವಿ ಮಾಡಿದ್ದರು. ಪ್ರತಿಭಟನೆ ಮಾಡಿ, ಮೆರವಣಿಗೆ ನಡೆಸಿ, ರ್ಯಾಲಿಯಲ್ಲಿ ಭಾಗವಹಿಸಿ. ಅದರ ಜೊತೆಗೆ ದೆಹಲಿಯ ಸ್ಥಳೀಯ ಮಾರುಕಟ್ಟೆಗಳಲ್ಲಿ ಶಾಪಿಂಗ್‌ ಮಾಡುವ ಮೂಲಕ ವ್ಯಾಪಾರಿಗಳಿಗೆ ನೆರವಾಗಿ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ನೀಡಿದ್ದರು.

ಹೊರರಾಜ್ಯಗಳಿಂದ ಬರುವ ಲಕ್ಷಾಂತರ ಜನರು ಸ್ಥಳೀಯ ವ್‌ಯಾಪಾರಿಗಳನ್ನು ಬೆಂಬಲಿಸಬೇಕು. ರ್ಯಾಲಿಯಿಂದ ವ್ಯಾಪಾರಿಗಳಿಗೆ ಯಾವುದೇ ಹಾನಿಯಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ರಾಹುಲ್‌ ಹೇಳಿದ್ದರು. ಆದರೆ, ಅಂಗಡಿಗಳೇ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಜನರು ಎಲ್ಲಿಗೆ ಹೋಗಿ ಖರೀದಿ ಮಾಡಬೇಕು ಎಂದು ವ್ಯಾಪಾರಿಗಳ ಒಕ್ಕೂಟ ಪ್ರಶ್ನಿಸಿದೆ.

ನಾವು ಬಿಜೆಪಿ ಏಜೆಂಟರಲ್ಲ :
ರ್ಯಾಲಿ ಮುಂದೂಡುವಂತೆ ಮನವಿ ಮಾಡಿದ್ದಕ್ಕೆ ತಮನ್ನು ಬಿಜೆಪಿ ಏಜೆಂಟರು ಎಂದು ಬಿಂಬಿಸಲಾಗುತ್ತಿದೆ ಎಂಬ ಆರೋಪಕ್ಕೂ ಸಿಟಿಐ ಪ್ರತಿಕ್ರಿಯಿಸಿದೆ. ಸುಮಾರು 100 ಪ್ರಮುಖ ಮಾರುಕಟ್ಟೆ ಸಂಘಟನೆಗಳು ರ್ಯಾಲಿಯನ್ನು ದೀಪಾವಳಿ ನಂತರ ನಡೆಸುವಂತೆ ಮನವಿ ಮಾಡಿದ್ದವು. ಈ ಸಂಘಟನೆಗಳು ಯಾವುದೇ ರಾಜಕೀಯ ಪಕ್ಷದ ಪರವಾಗಿಲ್ಲ ಅಥವಾ ವಿರೋಧವಾಗಿಲ್ಲ. ಅವು ಕೇವಲ ವ್ಯಾಪಾರಿಗಳ ಹಿತಾಸಕ್ತಿಯನ್ನು ಪ್ರತಿನಿಧಿಸುತ್ತವೆ ಎಂದು ಸ್ಪಷ್ಟಪಡಿಸಿದೆ. ರಾಜಕೀಯ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ಆದರೆ ಹಬ್ಬದ ವ್ಯಾಪಾರ ಅವಧಿಯಲ್ಲಿ ವರ್ತಕರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಕೂಡ ಅಗತ್ಯ ಎಂಬುದು ಸಂಘಟನೆಯ ವಾದವಾಗಿದೆ.

RELATED ARTICLES

Latest News