Tuesday, November 26, 2024
Homeರಾಜಕೀಯ | Politicsದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ : ವಿಜಯೇಂದ್ರ

ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ : ವಿಜಯೇಂದ್ರ

ಬೆಂಗಳೂರು,ಜ.8- ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ನಗರದ ಬೆಂಗಳೂರಿನ ಹೋಟೆಲ್ ರಮಾಡದಲ್ಲಿಂದು ನಡೆದ ಬಿಜೆಪಿ ಲೋಕಸಭಾ ಚುನಾವಣಾ ಯೋಜನಾ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ರಾಜ್ಯದ ಮತದಾರರು ಸಜ್ಜಾಗಿದ್ದಾರೆ. ಬಿಜೆಪಿ, ಸಂಘಟನೆಗೆ, ಪೂರಕ ಕ್ರಮಗಳನ್ನು ಪಕ್ಷ ಕೈಗೊಳ್ಳಲಿದೆ ಎಂದು ಪ್ರಕಟಿಸಿದರು. ಪಕ್ಷವು ರಾಜ್ಯದಲ್ಲಿ ಎಲ್ಲ 28 ಸ್ಥಾನಗಳನ್ನೂ ಗೆಲ್ಲಲಿದೆ. ಇದಕ್ಕಾಗಿ ಎಲ್ಲರೂ ಶ್ರಮಿಸುವುದಾಗಿ ತಿಳಿಸಿದರು.

ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಡದಲ್ಲಿ ಬಿಜೆಪಿ ಗೆದ್ದಿದೆ. ಐಎನ್‍ಡಿಐ (ಇಂಡಿ) ಒಕ್ಕೂಟ, ಕಾಂಗ್ರೆಸ್‍ಗೆ ಮರ್ಮಾಘಾತ ಆಗಿತ್ತು. ಒಕ್ಕೂಟಕ್ಕೆ ಇದೊಂದು ಸ್ಪಷ್ಟ ಸಂದೇಶವಾಗಿದೆ ಎಂದರು. ದೇಶ ಮತ್ತು ರಾಜ್ಯದ ಜನರು, ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷದ ಗಿಮಿಕ್ ಗ್ಯಾರಂಟಿಯನ್ನು ನಂಬಲು ತಯಾರಿಲ್ಲ. ಇದರಿಂದ ಮೋದಿ ಗ್ಯಾರಂಟಿಯೇ ಶ್ರೇಷ್ಠ ಎಂದು ಪ್ರಜ್ಞಾವಂತ ಮತದಾರರು ತಿಳಿದಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಲಿದ್ದು, ಮೂರನೇ ಬಾರಿಯೂ ನರೇಂದ್ರಮೋದಿಯವರೇ ಪ್ರಧಾನಮಂತ್ರಿ ಆಗಲಿದ್ದಾರೆ. ಅವರ ನೇತೃತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರಕಾರದ ಅಸಮರ್ಥ, ಅಸಮರ್ಪಕ ಆಡಳಿತದಿಂದ ಹಣಕಾಸು ವ್ಯವಸ್ಥೆ ಹದಗೆಟ್ಟಿದೆ. ಕಾನೂನು- ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. 14 ಬಜೆಟ್ ಮಂಡಿಸಿದ ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಪನ್ಮೂಲ ಕ್ರೋಢೀಕರಣದ ವಿಚಾರದಲ್ಲಿ ವಿಫಲವಾಗಿದ್ದಾರೆ. ಇದರಿಂದ ಭೀಕರ ಬರಗಾಲ, 500 ರೈತರ ಆತ್ಮಹತ್ಯೆ ಹೊರತಾಗಿಯೂ ರಾಜ್ಯ ಸರಕಾರ ಪರಿಹಾರ ಕೊಡದೆ, ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅತಿವೃಷ್ಟಿ ಉಂಟಾದಾಗ ತಕ್ಷಣ ಸ್ಪಂದಿಸಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಪ್ರಕೃತಿ ವಿಕೋಪಕ್ಕೆ ಕೂಡಲೇ ಸ್ಪಂದಿಸಿದ್ದನ್ನು ಜನರು ಮರೆತಿಲ್ಲ. ಈ ಸರಕಾರವು ಎಸ್‍ಸಿ, ಎಸ್‍ಟಿಗಳಿಗೆ ಮೀಸಲಿಟ್ಟ ಹಣವನ್ನೂ ಬೇರೆಡೆಗೆ ವರ್ಗಾಯಿಸಿ ದಲಿತರಿಗೂ ಅನ್ಯಾಯ ಮಾಡಿದೆ. ಇದಕ್ಕಾಗಿ ಜನರು ಈ ಕಾಂಗ್ರೆಸ್ ಸರಕಾರವನ್ನು ಶಪಿಸುವಂತಾಗಿದೆ ಎಂದರು.

ಕೋಟ್ಯಂತರ ಹಿಂದೂಗಳು ಭಗವಾನ್ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಎದುರು ನೋಡುತ್ತಿದ್ದು, ದೇಶದಲ್ಲಿ ಹಬ್ಬದ ವಾತಾವರಣವಿದೆ. ಮನೆಮನೆಗಳಲ್ಲಿ ಹಬ್ಬದ ಸಂಭ್ರಮ ಇದೆ. ಆದರೆ, ಭಗವಾನ್ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ಕಾಂಗ್ರೆಸ್ ಪಕ್ಷದವರು ವಿಧಿ ಇಲ್ಲದೇ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಲು ಸುತ್ತೋಲೆ ಹೊರಡಿಸಿದೆ. ಇದು ರಾಮಭಕ್ತರಿಗೆ ಸಂದ ಜಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತು ಮುಖಂಡರು ಉಪಸ್ಥಿತರಿದ್ದರು.

RELATED ARTICLES

Latest News