Thursday, May 2, 2024
Homeರಾಜ್ಯಬಿಜೆಪಿಗೆ ಎನ್.ಆರ್.ರಮೇಶ್ ಗುಡ್‍ಬೈ..!?

ಬಿಜೆಪಿಗೆ ಎನ್.ಆರ್.ರಮೇಶ್ ಗುಡ್‍ಬೈ..!?

ಬೆಂಗಳೂರು,ಜ.8- ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಬಿಜೆಪಿಗೆ ಗುಡ್‍ಬೈ ಹೇಳಲು ಮುಂದಾಗಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ಸರ್ಕಾರಿ ನೆಲಗಳ್ಳರು ಮತ್ತು ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರಗಳ ವಿರುದ್ಧ ನೂರಾರು ಪತ್ರಿಕಾಗೋಷ್ಠಿಗಳನ್ನು ಮಾಡಿದ್ದಷ್ಟೇ ಅಲ್ಲದೇ, ನೂರಾರು ಪ್ರಕರಣಗಳನ್ನು ದಾಖಲೆಗಳ ಸಹಿತ ವಿವಿಧ ತನಿಖಾ ಸಂಸ್ಥೆಗಳಲ್ಲಿ ಮತ್ತು ನ್ಯಾಯಾಲಯಗಳಲ್ಲಿ ದಾಖಲಿಸಿರುವ ಮತ್ತು ಸರ್ಕಾರಿ ನೆಲಗಳ್ಳರು ಕಬಳಿಸಿದ್ದ ಸಾವಿರಾರು ಕೋಟಿ ಮೌಲ್ಯದ ಸರ್ಕಾರಿ ಸ್ವತ್ತುಗಳನ್ನು ವಾಪಸ್ಸು ಸರ್ಕಾರದ ವಶಕ್ಕೆ ಬರುವಂತೆ ಮಾಡಿರುವ ರಮೇಶ್ ಅವರು ಬಿಜೆಪಿಯ ರಾಜ್ಯ ನಾಯಕರಿಂದ ನಿರಂತರವಾಗಿ ತಮಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಸಿಡಿದೆದ್ದಿದ್ದಾರೆ ಎಂದು ತಿಳಿದುಬಂದಿದೆ.

ಕನಿಷ್ಠ ತಿಂಗಳಿಗೆ ಎರಡು ಹಗರಣಗಳನ್ನಾದರೂ ಬಯಲಿಗೆಳೆಯುತ್ತಿದ್ದ ರಮೇಶ್ ಅವರು ಕಳೆದ ಏಳೆಂಟು ತಿಂಗಳಿನಿಂದ ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಯಾವುದೇ ಧ್ವನಿಯನ್ನೂ ಎತ್ತದೆ ಮತ್ತು ದೂರುಗಳನ್ನು ದಾಖಲಿಸದೆ ಮಮೌನಿಯಾಗಿರುವುದರ ಹಿಂದೆ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ.

2018 ಮತ್ತು 2023 ರ ವಿಧಾನಸಭೆ ಚುನಾವಣೆಗಳ ಸಂದರ್ಭಗಳಲ್ಲಿ ಅವರು ಬಯಲಿಗೆಳೆದಿದ್ದ ಹಗರಣಗಳನ್ನೇ ಪುಸ್ತಕಗಳ ರೂಪದಲ್ಲಿ ಹೊರತಂದು ಕಾಂಗ್ರೆಸ್ ವಿರುದ್ಧದ ಪ್ರಚಾರದಲ್ಲಿ ಪ್ರಬಲ ಅಸ್ತ್ರವನ್ನಾಗಿಸಿಕೊಂಡಿದ್ದ ಬಿಜೆಪಿಯು ಎರಡೂ ಚುನಾವಣೆಗಳಲ್ಲಿ ಚಿಕ್ಕಪೇಟೆ ಮತ್ತು ಜಯನಗರ ಕ್ಷೇತ್ರಗಳ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಆದರೆ ಪಕ್ಷದ ವರಿಷ್ಠರು ಅವರಿಗೆ ಟಿಕೆಟ್ ನೀಡದಿರುವುದು ರಮೇಶ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಅವರ ಸಾವಿರಾರು ಅಭಿಮಾನಿಗಳು ಮತ್ತು ಕುಟುಂಬಸ್ಥರು ಇಷ್ಟೊಂದು ಅನ್ಯಾಯ ಮಾಡಿರುವ ಬಿಜೆಪಿಯಲ್ಲಿ ಇರುವುದು ಸರಿಯಲ್ಲ ಎಂದು ಒತ್ತಾಯಿಸುತ್ತಿದ್ದು, ನಿಮ್ಮ ರಾಜಕೀಯ ಜೀವನವನ್ನು ಹಾಳುಗೆಡವಿರುವ ಬೆಂಗಳೂರಿನ ಬಿಜೆಪಿ ನಾಯಕರಿಗೆ ಸರಿಯಾದ ಪಾಠ ಕಲಿಸಬೇಕು ನೀವು ಈ ಕೂಡಲೇ ಬಿಜೆಪಿಯಿಂದ ಹೊರಬಂದು ಬಿಜೆಪಿ ನಾಯಕರ ಹಗರಣಗಳನ್ನು ಬಯಲಿಗೆಳೆದು ದೂರುಗಳನ್ನು ದಾಖಲಿಸುವ ಮೂಲಕ ಸರಿಯಾದ ಪಾಠ ಕಲಿಸಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

ಅಭಿಮಾನಿಗಳು ಹಾಗೂ ಹಿತೈಷಿಗಳ ಒತ್ತಡಕ್ಕೆ ಮಣಿದಿರುವ ರಮೇಶ್ ಅವರು ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ತಯಾರಿ ಆರಂಭಿಸಿದ್ದಾರೆ ಎಂದು ಮೂಲಗಳು ಈ ಸಂಜೆಗೆ ಖಚಿತಪಡಿಸಿವೆ. ಟಿಕೆಟ್ ವಂಚಿತರಾಗಿದ್ದ ರಮೇಶ್ ಅವರನ್ನು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿಯಿಂದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ರ್ಪಧಿಸುವಂತೆ ಆ ಪಕ್ಷಗಳ ನಾಯಕರು ಆಹ್ವಾನ ನೀಡಿದ್ದರು. ಡಿ.ಕೆ ಶಿವಕುಮಾರ್ ಅವರಂತೂ ರಮೇಶ್ ಅವರನ್ನು ಕಾಂಗ್ರೆಸ್ಸಿನಿಂದ ಪದ್ಮನಾಭನಗರ ಕ್ಷೇತ್ರದಲ್ಲಿ ಅಶೋಕ್ ಅವರ ವಿರುದ್ಧ ಸ್ಪರ್ಧೆಗೆ ಇಳಿಸಬೇಕೆಂದು ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೂ ಕಾದಿದ್ದರು.

ಬಿಲ್ಕಿಸ್‍ಬಾನು ಪ್ರಕರಣ : ಗುಜರಾತ್ ಸರ್ಕಾರಕ್ಕೆ ಸುಪ್ರೀಂನಲ್ಲಿ ಮುಖಭಂಗ

ಹಾಗೆಯೇ, ಕಳೆದ ಏಳೆಂಟು ತಿಂಗಳಿನಿಂದ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ನಿರಂತರವಾಗಿ ರಮೇಶ್ ಜೊತೆ ಸಂಪರ್ಕದಲ್ಲಿದ್ದು, ಲೋಕಸಭೆ ಚುನಾವಣೆಯ ಮುಂಚಿತವಾಗಿಯೇ ಕಾಂಗ್ರೆಸ್ ಸೇರುವಂತೆ ಅವರ ಮನವೊಲಿಸುವ ಯತ್ನ ಮಾಡುತ್ತಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ.

ಒಂದು ವೇಳೆ ರಮೇಶ್ ಅವರು ಪಕ್ಷ ತೊರೆಯಲು ನಿರ್ಧರಿಸಿದ್ದೇ ಆದರೆ, ಭಾರತೀಯ ಜನತಾ ಪಾರ್ಟಿಗೆ ಬಹಳಷ್ಟು ನಷ್ಟ ಉಂಟಾಗುವುದಲ್ಲದೇ, ಆ ಪಕ್ಷದ ನಾಯಕರು ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಬಿಜೆಪಿ ನಾಯಕರುಗಳಿಗೆ ನಿರಂತರವಾದ ಸಂಕಷ್ಟಗಳು ಬಂದೊದಗುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.ಇದೇ ರೀತಿ ಅನ್ಯಾಯ ಮುಂದುವರೆದರೆ ಮುಂದೆ ತಮಗೆ ಉಪಯೋಗಕ್ಕೆ ಬರಬಹುದೆಂಬ ದೂರ ದೃಷ್ಟಿಯಿಂದ ರಮೇಶ್ ಅವರು ತಮ್ಮದೇ ಪಕ್ಷದ ನಾಯಕರ ಹಗರಣಗಳು ಮತ್ತು ಸರ್ಕಾರಿ ಭೂಕಬಳಿಕೆ ಪ್ರಕರಣಗಳಿಗೆ ಸಂಬಂಧಿಸಿದ ನೂರಾರು ದಾಖಲೆಗಳನ್ನು ಈಗಾಗಲೇ ಸಂಗ್ರಹಿಸಿಕೊಂಡಿದ್ದಾರೆ ಎನ್ನಲಾಗಿದೆ.

ರಮೇಶ್ ಅವರ ಆಪ್ತರಾಗಿರುವ ಗಣೇಶ್, ನವೀನ್ ಮತ್ತು ರಾಜೇಶ್ ರವರನ್ನು ಸಂಪರ್ಕಿಸಿದಾಗ ಹೌದು ನಾವುಗಳೆಲ್ಲೆ ನಮ್ಮ ನಾಯಕರು ಬಿಜೆಪಿಯಲ್ಲಿ ಮುಂದುವರೆಯುವುದು ಬೇಡ. ನಿಮಗೆ ಇಷ್ಟೊಂದು ಅನ್ಯಾಯ ಮಾಡಿರುವ ಪಕ್ಷದ ನಾಯಕರಿಗೆ ಸರಿಯಾದ ಪಾಠ ಕಲಿಸಲೇಬೇಕು. ಹಾಗಾಗಿ ನೀವು ಭಾರತೀಯ ಜನತಾ ಪಾರ್ಟಿಯಿಂದ ಹೊರಬಂದು ನಿಮಗಿಷ್ಟವಾದ ರಾಜಕೀಯ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಿ ಅಥವಾ ಹೋರಾಟಗಾರರಾಗಿಯೇ ಮುಂದುವರೆದು ಬಿಜೆಪಿ ಪಕ್ಷದ ನಾಯಕರಿಗೆ ಸರಿಯಾದ ಬುದ್ಧಿ ಕಲಿಸಿ ಎಂದು ಒತ್ತಾಯಿಸುತ್ತಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಈ ಕುರಿತಂತೆ ಪ್ರತಿಕ್ರಿಯೆ ನೀಡಲು ರಮೇಶ್ ನಿರಾಕರಿಸಿದ್ದಾರೆ.

ರಮೇಶ್ ಅವರ ಮೇಲೆ ಹಲವಾರು ಬಾರಿ ಹತ್ಯಾ ಯತ್ನಗಳು ನಡೆದರೂ ಸಹ ಎದೆಗುಂದದೆ ನಿರಂತರವಾಗಿ ಭ್ರಷ್ಟರ ವಿರುದ್ಧ ಸಮರ ಸಾರಿ ಹಲವಾರು ಪ್ರಕರಣಗಳಲ್ಲಿ ಕಾನೂನು ಹೋರಾಟಗಳ ಮೂಲಕ ಜಯವನ್ನೂ ಗಳಿಸಿರುವ ವಿಷಯವನ್ನು ಅವರ ವಿರೋಧಿಗಳೂ ಸಹ ಒಪ್ಪಿಕೊಳ್ಳುತ್ತಾರೆ. ಇಂತಹ ನಿರ್ಭೀತ ವ್ಯಕ್ತಿತ್ವದ ಹೋರಾಟಗಾರರನ್ನು ಕಳೆದುಕೊಂಡರೆ ಬಿಜೆಪಿ ಪಕ್ಷಕ್ಕೆ ಅನ್ಯಾಯವಾಗೊದಂತೂ ಖಚಿತ ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು.

RELATED ARTICLES

Latest News