ಪಣಜಿ ,ಜ.9- ಗೋವಾದ ಹೋಟೆಲ್‍ನಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿ ಬೆಂಗಳೂರಿಗೆ ಪರಾರಿಯಾಗುತ್ತಿದ್ದ ಸ್ಟಾರ್ಟ್‍ಅಪ್‍ನ ಸಿಇಒ ಅವರನ್ನು ಚಿತ್ರದುರ್ಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ಮೂಲದ ಕೃತಕ ಬುದ್ದಿಮತ್ತೆ ಸ್ಟಾರ್ಟ್‍ಅಪ್‍ನ ಸಿಇಒ ಸುಚನಾ ಸೇಠ್(39) ಬಂಧಿತ ಆರೋಪಿಯಾಗಿದ್ದಾರೆ.
ಸುಚನಾ ಸೇಠ್ ಅವರು ಹೋಟೆಲ್‍ನಿಂದ ಹೊರಬಂದ ನಂತರ ಕೊಠಡಿಯನ್ನು ಸ್ವಚ್ಛಗೊಳಿಸುತ್ತಿದ್ದ ಹೋಟೆಲ್ ಸಿಬ್ಬಂದಿಯೊಬ್ಬರು ಹಾಳೆಯಲ್ಲಿ ರಕ್ತದ ಕಲೆಗಳನ್ನು ಗಮನಿಸಿದ ನಂತರ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ಎಐ ಸ್ಟಾರ್ಟ್‍ಅಪ್‍ನ ಸಿಇಒ ನಿನ್ನೆ ತನ್ನ ನಾಲ್ಕು ವರ್ಷದ ಮಗನನ್ನು ಗೋವಾದ ಹೋಟೆಲ್‍ನಲ್ಲಿ ಕೊಲೆ ಮಾಡಿ ಶವವನ್ನು ಬ್ಯಾಗ್‍ನಲ್ಲಿ ತುಂಬಿ ಟ್ಯಾಕ್ಸಿಯಲ್ಲಿ ಪರಾರಿಯಾಗುತ್ತಿದ್ದಾಗ ಕರ್ನಾಟಕ ಪೊಲೀಸರು ಚಿತ್ರದುರ್ಗದಿಂದ ಅವರನ್ನು ಬಂಧಿಸಿದ್ದಾರೆ.
ಕೊಲೆ ಆರೋಪಿ ಸೆಠ್ ತನ್ನ ಮಗನೊಂದಿಗೆ ಜ. 6 ರಂದು ಉತ್ತರ ಗೋವಾದ ಸಿಂಕ್ವೆರಿಮ್‍ನಲ್ಲಿರುವ ಹೋಟೆಲ್‍ಗೆ ಚೆಕ್ ಇನ್ ಮಾಡಿದ್ದರು. ಆಕೆ ಚೆಕ್‍ಔಟ್ ಮಾಡಿದಾಗ ಕೊಠಡಿಯನ್ನು ಸ್ವಚ್ಛಗೊಳಿಸುತ್ತಿದ್ದ ಹೋಟೆಲ್ ಸಿಬ್ಬಂದಿ, ಹಾಳೆಗಳ ಮೇಲೆ ರಕ್ತದ ಕಲೆಗಳನ್ನು ಗಮನಿಸಿದ ನಂತರ ಹೊಟೆಲ್ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ತ್ರಿಪುರಾದ ಧಲೈನಲ್ಲಿ NLFT ಉಗ್ರ ಬಿಎಸ್‍ಎಪ್ ಮುಂದೆ ಶರಣಾಗತಿ
ಪೊಲೀಸರ ಪ್ರಕಾರ, ಸೇಠ್ ತನ್ನ ಮಗನನ್ನು ಹರಿತವಾದ ಆಯುಧದಿಂದ ಕೊಂದು ನಂತರ, ತಾನು ರಸ್ತೆಯಲ್ಲಿ ಪ್ರಯಾಣಿಸಬೇಕೆಂದು ಒತ್ತಾಯಿಸಿ ಬೆಂಗಳೂರಿಗೆ ಹಿಂತಿರುಗಲು ಟ್ಯಾಕ್ಸಿ ವ್ಯವಸ್ಥೆ ಮಾಡುವಂತೆ ಹೋಟೆಲ್ ಆಡಳಿತ ಮಂಡಳಿಯನ್ನು ಕೇಳಿಕೊಂಡಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆಕೆ ಹೋಟೆಲ್‍ನಿಂದ ಒಬ್ಬಳೇ ಚೆಕ್ ಔಟ್ ಮಾಡಿದ್ದಾಳೆಂದು ತಿಳಿದುಬಂದಿದೆ.
ಆರಂಭದಲ್ಲಿ ಆಕೆ ತನ್ನ ಮಗನನ್ನು ದಕ್ಷಿಣ ಗೋವಾದಲ್ಲಿ ಸಂಬಂಧಿಕರೊಬ್ಬರ ಬಳಿ ಬಿಟ್ಟು ಹೋಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಳು, ಆದರೆ ಕಥೆಯನ್ನು ನಂಬದೆ ನಾವು ಕ್ಯಾಬ್ ಡ್ರೈವರ್‍ಗೆ ಕರೆ ಮಾಡಿ ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡಲು ಹೇಳಿದೆವು. ಬೆಂಗಳೂರಿಗೆ ತೆರಳುತ್ತಿದ್ದಾಗ ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ನಾಟಕ ಪೊಲೀಸರ ಸಹಾಯದಿಂದ ಆಕೆಯನ್ನು ಬಂಧಿಸಲಾಯಿತು ಎಂದು ಕ್ಯಾಲಂಗುಟ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ವಿಚಾರಣೆಗಾಗಿ ಮಹಿಳೆಯನ್ನು ವಶಕ್ಕೆ ಪಡೆಯಲು ಕಲಾಂಗುಟೆ ಪೊಲೀಸರ ತಂಡ ಕರ್ನಾಟಕಕ್ಕೆ ತೆರಳಿದೆ. ಅಪರಾಧದ ಉದ್ದೇಶವನ್ನು ಪೊಲೀಸರು ಇನ್ನೂ ಪತ್ತೆ ಮಾಡಿಲ್ಲ ಎಂದು ತಿಳಿದುಬಂದಿದೆ.