ಬೆಂಗಳೂರು, ಮೇ 25- ಅಧಿಕಾರ ಹಂಚಿಕೆ, ಸಚಿವ ಸಂಪುಟ ಪುನರ್ರಚನೆ, ವಿಧಾನಪರಿಷತ್ ಮತ್ತು ರಾಜ್ಯಸಭೆ ಚುನಾವಣೆಗಳ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಚರ್ಚೆ ನಡೆಸಲು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಬರುವಂತೆ ಆಹ್ವಾನ ನೀಡಿದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಪ್ರತ್ಯೇಕ ಸಭೆಗಳು, ದೆಹಲಿಯಾತ್ರೆ ಮತ್ತೆ ಶುರುವಾಗಿವೆ.
ಹೈಕಮಾಂಡ್ನ ಆದೇಶದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇ 26ರಂದು ದೆಹಲಿಗೆ ತೆರಳುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರಿಗೂ ಏಕಕಾಲಕ್ಕೆ ಅಹ್ವಾನ ನೀಡಲಾಗಿದೆ ಎಂದು ಹೇಳಲಾಗಿತ್ತು. ಆದರೆ ಡಿ.ಕೆ.ಶಿವಕುಮಾರ್ ಅವರು ತಮಗೆ ಆಹ್ವಾನ ಇಲ್ಲ, ಹೈಕಮಾಂಡ್ನ ಕರೆಯ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಏಕಾಂಗಿ ದೆಹಲಿಯಾತ್ರೆ ತೀವ್ರ ಕುತೂಹಲ ಕೆರಳಿಸಿದೆ. ಆದರೆ ಮೂಲಗಳ ಪ್ರಕಾರ ಆಹ್ವಾನ ಇಲ್ಲದೇ ಇದ್ದರೂ ಡಿ.ಕೆ.ಶಿವಕುಮಾರ್ ಅವರು ಸ್ವಯಂ ಪ್ರೇರಿತವಾಗಿ ಸಿದ್ದರಾಮಯ್ಯ ಅವರಿಗಿಂತ ಮೊದಲೇ ದೆಹಲಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ. ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಡಿ.ಕೆ.ಶಿವಕುಮಾರ್ ಸಚಿವ ಸಂಪುಟ ಪುನರ್ ರಚನೆಗೆ ಅನುಮತಿ ನೀಡುವ ಮುನ್ನ ನಾಯಕತ್ವ ವಿವಾದವನ್ನು ಇತ್ಯರ್ಥ ಪಡಿಸಬೇಕೆಂದು ಹೈಕಮಾಂಡ್ನ ಮೇಲೆ ಒತ್ತಡ ಹೇರಲಿದ್ದಾರೆ.
ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ದೆಹಲಿಗೆ ಆಹ್ವಾನಿಸಿರುವುದು ರಾಜ್ಯಸಭೆ ಮತ್ತು ವಿಧಾನಪರಿಷತ್ ಸದಸ್ಯರನು್ನ ಚುನಾಯಿಸುವ ಚುನಾವಣೆ ಸಂಬಂಧಪಟ್ಟಂತೆ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲು ಎಂದು ಹೇಳಲಾಗಿದೆ.
ಇದೇ ವೇಳೆ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಪುನರ್ರಚನೆಗೆ ಅವಕಾಶ ನೀಡುವಂತೆ ಹೈಕಮಾಂಡ್ ಬಳಿ ಮನವಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಬಹುತೇಕ ಸಿದ್ದರಾಮಯ್ಯ ಅವರ ಬೇಡಿಕೆಗೆ ಹೈಕಮಾಂಡ್ ಸಮತಿಸಬಹುದು ಎಂದೂ ಹೇಳಲಾಗುತ್ತಿದ್ದು, ಒಂದು ವೇಳೆ ಸಚಿವ ಸಂಪುಟ ಪುನರ್ ರಚನೆಯಾದರೆ ನಾಯಕತ್ವದ ವಿವಾದ ಬಹುತೇಕ ಅಂತ್ಯಗೊಳ್ಳಲಿದೆ.
ಹೀಗಾಗಿಯೇ ಡಿ.ಕೆ.ಶಿವಕುಮಾರ್ ಅವರು ನಿನ್ನೆಯಿಂದಲೂ ಅಸಮಾಧಾನದಿಂದ ಇರುವಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಎಸ್ಐಆರ್ ಕುರಿತು ಕಾಂಗ್ರೆಸ್ ಸಭೆ ನಡೆಯುತ್ತಿದ್ದ ವೇಳೆಯಲ್ಲೇ ರಾಷ್ಟ್ರೀಯ ನಾಯಕರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ, ದೆಹಲಿಗೆ ಬರುವಂತೆ ಅಹ್ವಾನ ನೀಡಿದ್ದರು. ಆದರೆ ಪಕ್ಕದಲ್ಲೇ ಕುಳಿತ ಡಿ.ಕೆ.ಶಿವಕುಮಾರ್ ಅವರಿಗೆ ಯಾವುದೇ ಅಹ್ವಾನ ಸಿಗಲಿಲ್ಲ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ತಾವು ಪಕ್ಷದ ಸಂಘಟನೆ ಹಾಗೂ ಚುನಾವಣೆಯ ಸಿದ್ಧತೆ ಬಗ್ಗೆ ಹೆಚ್ಚು ಗಮನ ಹರಿಸಿದ್ದು, ಉಳಿದಂತೆ ಯಾವ ವಿಚಾರದ ಬಗ್ಗೆಯೂ ತಮಗೆ ಆಸಕ್ತಿಯಿಲ್ಲ ಎಂದು ಡಿ.ಕೆ.ಶಿವಕುಮಾರ್ ಪರೋಕ್ಷವಾದ ಅಸಮಾಧಾನ ಹೊರ ಹಾಕಿದ್ದಾರೆ. ಇದರ ನಡುವೆಯೂ ತಮ ವೈಯಕ್ತಿಯ ಕೆಲಸ ಹಾಗೂ ಇಲಾಖೆಯ ಜವಬ್ದಾರಿ ನಿರ್ವಹಣೆ ನೆಪದಲ್ಲಿ ಡಿ.ಕೆ.ಶಿವಕುಮಾರ್ ದೆಹಲಿಗೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರಿಗೂ ಮುಂಚೆ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿರುವ ಡಿ.ಕೆ.ಶಿವಕುಮಾರ್, ತಮ ಪರವಾಗಿ ವಾದ ಮಂಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಜೂನ್ 18ಕ್ಕೆ ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣಾ ನಿಗದಿಯಾಗಿದೆ. ಅದೇ ರೀತಿ ಇದೇ ತಿಂಗಳ 30ಕ್ಕೆ 7 ಮಂದಿ ವಿಧಾನ ಪರಿಷತ್ ಸದಸ್ಯರು ನಿವೃತ್ತರಾಗುತ್ತಿದ್ದು, ವಿಧಾನಸಭೆಯಿಂದ ಮತ್ತೆ 7 ಮಂದಿಯನ್ನು ಚುನಾಯಿಸಬೇಕಿದೆ. ಮುಂದಿನ ತಿಂಗಳು 21ಕ್ಕೆ 5 ಮಂದಿ ನಾಮ ನಿರ್ದೇಶಿತ ಸದಸ್ಯರ ಸ್ಥಾನಗಳು ಖಾಲಿಯಾಗುತ್ತಿವೆ. ಈ ಎಲ್ಲಾ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಹೈಕಮಾಂಡ್ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಸಿಎಂ-ಡಿಸಿಎಂ ನಡುವೆ ಮುನಿಸು:
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಮತ್ತೆ ಮುಸುಕಿನ ಗುದ್ದಾಟ ಕಂಡು ಬರುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಇಂದು ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಜಂಟಿ ಸುದ್ದಿಗೋಷ್ಠಿಯನ್ನು ಕರೆದಿದ್ದರು. ಆದರೆ ಅದರಲ್ಲಿ ಭಾಗವಹಿಸುವ ಬಗ್ಗೆ ಮುಖ್ಯಮಂತ್ರಿಯವರ ಕಾರ್ಯಸೂಚಿ ಪಟ್ಟಿಯಲ್ಲಿ ಮಾಹಿತಿ ಇರಲಿಲ್ಲ. ಸುರ್ಜೇವಾಲ ಅವರ ಒತ್ತಡದಿಂದಾಗಿ ಸಿದ್ದರಾಮಯ್ಯ ಅನಿವಾರ್ಯವಾಗಿ ಪತ್ರಿಕಾಗೋಷ್ಠಿಗೆ ಆಗಮಿಸಿದರು. ತಡವಾಗಿ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯವರನ್ನು ಸೌಜನ್ಯಕ್ಕಾದರೂ ಮಾತನಾಡಿಸುವ ಗೋಜಿಗೆ ಹೋಗಲಿಲ್ಲ.
ಡಿಕೆ ಸಹೋದರರ ಸಭೆ:
ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಜೊತೆ ನಿನ್ನೆ ರಾತ್ರಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಸಚಿವರ ಸಭೆ:
ಹೈಕಮಾಂಡ್ ಅಹ್ವಾನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಪ್ತ ಹಾಗೂ ಹಿರಿಯ ಸಚಿವರ ಜೊತೆ ಸಭೆ ನಡೆಸಿದ್ದಾರೆ. ಹೈಕಮಾಂಡ್ ನಾಯಕರ ಮುಂದೆ ಯಾವೆಲ್ಲಾ ವಿಷಯಗಳನ್ನು ಮಂಡಿಸಬೇಕು? ಸಂಪುಟ ಪುನರ್ ರಚನೆ, ನಾಯಕತ್ವ ಬದಲಾವಣೆ, ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿನ ಅಭ್ಯರ್ಥಿಗಳ ಆಯ್ಕೆ ಸಂಬಂಧಪಟ್ಟಂತೆ ತಮ ನಿಲುವುಗಳನ್ನು ಸಿದ್ದರಾಮಯ್ಯ ಸಚಿವರ ಜೊತೆ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಸಂಪುಟ ಪುನರ್ ರಚನೆಗೆ ಅವಕಾಶ ಸಿಕ್ಕರೆ ಕೆಲವರು ಅಧಿಕಾರ ತ್ಯಾಗಕ್ಕೆ ಮಾನಸಿಕವಾಗಿ ಸಿದ್ಧರಾಗಬೇಕು ಎಂದು ಸಲಹೆ ನೀಡಿರುವುದಾಗಿ ತಿಳಿದು ಬಂದಿದೆ.
ಶಾಸಕರ ಯಾತ್ರೆ:
ಸಂಪುಟ ಪುನರ್ ರಚನೆ ವಿಚಾರವಾಗಿ ಸಿದ್ದರಾಮಯ್ಯ ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ಸುಳಿವು ದೊರೆಯುತ್ತಿದ್ದಂತೆ ಕಾಂಗ್ರೆಸ್ನ ಸುಮಾರು 30ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಶಾಸಕರು ದೆಹಲಿಯಾತ್ರೆಗೆ ಮುಂದಾಗಿದ್ದಾರೆ. ಈ ಮೊದಲು ಪ್ರತ್ಯೇಕ ಸಭೆ ನಡೆಸಿ ದೆಹಲಿಯಾತ್ರೆ ನಡೆಸಿದ್ದ 25ಕ್ಕೂ ಹೆಚ್ಚು ಶಾಸಕರ ಜೊತೆಗೆ ಹೊಸಬರಿಗೂ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ್ದ ಕಿರಿಯ ಶಾಸಕರು ಸಿದ್ದರಾಮಯ್ಯ ಅವರಿಗಿಂತಲೂ ಮೊದಲು ದೆಹಲಿಗೆ ತಲುಪುತ್ತಿದ್ದಾರೆ.
