ಗುರುಗ್ರಾಮ, ಜುಲೈ 9-ಕುಖ್ಯಾತ ಅಪರಾಧಿ ದೀಪಕ್ ನಂದಾಲ್ ಗ್ಯಾಂಗ್ನ ನಾಲ್ವರು ಸಹಚರರು ಗುರುಗ್ರಾಮ ಪೊಲೀಸರೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಹತರಾಗಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುಶಾಂತ್ ಲೋಕ್ನ ಎ-ಬ್ಲಾಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಮತ್ತು ಗುಂಡಿನ ಚಕಮಕಿಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ.
ದೀಪಕ್ ನಂದಾಲ್ ಗ್ಯಾಂಗ್ಗೆ ಸೇರಿದ ಐವರು, ಎಸ್ಜಿಟಿ ವಿಶ್ವವಿದ್ಯಾಲಯದ ಸಂಸ್ಥಾಪಕರ ಪುತ್ರ ವಿಶಾಲ್ ಬೆರ್ರಿ ಅವರನ್ನು ಅವರ ಸುಶಾಂತ್ ಲೋಕ್ ನಿವಾಸದಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ನಿಯಂತ್ರಣ ಕೊಠಡಿಯಿಂದ ಶಸ್ತ್ರಸಜ್ಜಿತ ವ್ಯಕ್ತಿಗಳು ಮಹೀಂದ್ರಾ ಸ್ಕಾರ್ಪಿಯೊ ವಾಹನದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಪರಾಧ ವಿಭಾಗದ (ಕ್ರೈಂ ಬ್ರಾಂಚ್) ತಂಡಗಳು ಸ್ಥಳಕ್ಕೆ ಧಾವಿಸಿದ್ದವು. ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಆರೋಪಿಗಳು ಉದ್ಯಮಿಯ ಮನೆಯಿಂದಲೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ ಆರಂಭಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಾಂಛಿತ ಗ್ಯಾಂಗ್ಸ್ಟರ್ನಿಂದ ಉದ್ಯಮಿಗೆ ಪದೇ ಪದೇ ಹಣಕ್ಕಾಗಿ ಬೆದರಿಕೆ ಸಂದೇಶಗಳು ಬರುತ್ತಿದ್ದವು ಎಂದು ಪೊಲೀಸರು ಹೇಳಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಿದ್ದು, ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಆರೋಪಿಗಳು ಸಾವನ್ನಪ್ಪಿದ್ದಾರೆ.
ಘಟನೆ ಕುರಿತು ಮಾಹಿತಿ ದೊರಕುತ್ತಿದ್ದಂತೆ ಡಿಸಿಪಿ (ಕ್ರೈಂ) ಹಾಗೂ ಡಿಸಿಪಿ (ಪೂರ್ವ) ಸ್ಥಳಕ್ಕೆ ಆಗಮಿಸಿದ್ದು, ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ತಂಡಗಳು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿವೆ ಎಂದು ಗುರುಗ್ರಾಮ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಹತ್ಯೆಯಾದ ಆರೋಪಿಗಳ ಗುರುತು, ಅವರ ಅಪರಾಧ ಹಿನ್ನೆಲೆ, ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳು ಹಾಗೂ ಇತರೆ ಪ್ರಮುಖ ಮಾಹಿತಿಗಳನ್ನು ಪರಿಶೀಲನೆ ಮತ್ತು ತನಿಖೆ ಪೂರ್ಣಗೊಂಡ ಬಳಿಕ ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಒತ್ತೆಯಾಳಾಗಿದ್ದ ವಿಶಾಲ್ ಬೆರ್ರಿಹಾಗೂ ಅವರ ಕುಟುಂಬವನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
