ಬೆಂಗಳೂರು, ಜ.9- ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ರಾಜ್ಯದ ಹಲವೆಡೆ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ 30ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ಅಕ್ರಮ ಸಂಪತ್ತು ಪತ್ತೆ ಮಾಡಿದ್ದಾರೆ. ಭ್ರಷ್ಟಾಚಾರ ದೂರು ಪರಿಶೀಲಿಸಿ ಈ ದಾಳಿ ನಡೆಸಲಾಗಿದ್ದು, ಅಪಾರ ಪ್ರಮಾಣದ ಅಕ್ರಮವಾಗಿ ಸಂಪಾದಿಸಿದ ಚರಾ ಮತ್ತು ಸ್ಥಿರಾಸ್ತಿಗಳನ್ನು ಬಹಿರಂಗ ಪಡಿಸಿದ್ದಾರೆ.
ಬೆಂಗಳೂರು, ರಾಮನಗರ, ಬಳ್ಳಾರಿ, ವಿಜಯನಗರ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳ್ಳಾರಿಯ ಜಿಲ್ಲೆಯ ಕುಂದೋಣ ಗ್ರಾಮ ಪಂಚಾಯಿತಿಯ ಪಿಡಿಒ ಪದ್ಮನಾಭ ಅವರಿಗೆ ಸೇರಿದ ತುಮಕೂರು, ದಾಬಾಸ್‍ಪೇಟೆಗಳಲ್ಲಿರುವ ಮನೆ ಹಾಗೂ ಕೆಲಸ ಮಾಡುವ ಕಚೇರಿಯಲ್ಲಿ ಶೋಧ ಕಾರ್ಯ ನಡೆದಿದೆ. ಈ ವೇಳೆ ನಿವಾಸದಲ್ಲಿ ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಆಭರಣಗಳು, ಕಂತೆ ಕಂತೆ ನೋಟು ಪತ್ತೆಯಾಗಿದೆ.
ಲೋಕಸಭೆ ಚುನಾವಣೆ : 10 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್
ವಿಜಯನಗರ ಜಿಲ್ಲೆಯ ಬೆಸ್ಕಾಂ ಜನರಲ್ ಮ್ಯಾನೇಜರ್ ನಾಗರಾಜ್ ಅವರ ಕೂಡ್ಲಿಗಿ ಪಟ್ಟಣದ ಮನೆ, ಗುಡೇಕೋಟೆ ಗ್ರಾಮದಲ್ಲಿರುವ ತೋಟದ ಮನೆ ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿದೆ. ಇವರು ಪೆಟ್ರೋಲ್ ಬಂಕ್ ಹಾಗೂ ಹಲವೆಡೆ ನಿವೇಶನ, ಕೃಷಿ ಜಮೀನು ಹೊಂದಿರುವುದು ಪತ್ತೆಯಾಗಿದೆ. ಈ ಅಧಿಕಾರಿ ಇತ್ತೀಚೆಗೆ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದರು.
ಬೆಂಗಳೂರಿನಲ್ಲಿ ಬಿಬಿಎಂಪಿ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕ ಡಿ.ಮಂಜೇಶ್ ಅವರ ನಿವಾಸ, ಅವರ ಸ್ವಂತ ಊರಾದ ಮಂಡ್ಯ ಸೇರಿದಂತೆ ವಿವಿದೆಡೆ ದಾಳಿ ನಡೆಸಲಾಗಿದೆ. ಮದ್ದೂರಿನ ಎಸ್‍ಐ ಕೋಡಿಹಳ್ಳಿಯಲ್ಲಿರುವ ಅಜ್ಜಿ ಮನೆ ಹಾಗೂ ಸಂಬಂ„ಕರ ಮನೆಯ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಇದಲ್ಲದೆ, ಹಲಗೂರು ಗ್ರಾಮ ಪಂಚಾಯಿತಿ ಸದಸ್ಯ ಸುರೇಂದ್ರ ಅವರ ಮನೆಯಲ್ಲೂ ದಾಳಿ ನಡೆದಿದೆ. ಬೆಂಗಳೂರಿನಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಯ್ಯದ್ ಮುನೀರ್ ಅವರ ನಿವಾಸದ ಮೇಲೂ ದಾಳಿ ನಡೆದಿದೆ. ಇದಲ್ಲದೆ, ಪಿಡಬ್ಲ್ಯೂಡಿ ಸೂಪರಿಂಡೆಂಟ್ ಎಂಜಿನಿಯರ್ ಸತೀಶ್‍ಬಾಬು ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಎಸ್‍ಪಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಇಲ್ಲಿ ಬೆಲೆಬಾಳುವ ವಾಚ್‍ಗಳು, ಐಷಾರಾಮಿ ವಸ್ತುಗಳು, ಚಿನ್ನಾಭರಣ ಪತ್ತೆಯಾಗಿದೆ.