ಬೆಂಗಳೂರು,ಜ.9- ಕಾಂಗ್ರೆಸ್ ಹೈಕಮಾಂಡ್ ಪ್ರತಿನಿಧಿಯಾಗಿ ಆಗಮಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರ ಬಳಿ ಕಾಂಗ್ರೆಸ್‍ನ ಹಿರಿಯ ಸಚಿವರು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಹಕ್ಕು ಪ್ರತಿಪಾದಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಲೋಕಸಭೆ ಚುನಾವಣೆ ತಯಾರಿಯ ಕುರಿತಂತೆ ಚರ್ಚೆ ನಡೆಸಲು ರಣದೀಪ್ ಸಿಂಗ್ ಸುರ್ಜೆವಾಲ ನಮ್ಮನ್ನು ಆಹ್ವಾನಿಸಿದ್ದು, ಹಿರಿಯ ಸಚಿವರಾಗಿರುವುದರಿಂದ ಸಹಜವಾಗಿ ನಮ್ಮ ಜೊತೆ ಹೈಕಮಾಂಡ್ ಚರ್ಚೆ ನಡೆಸಿದೆ ಎಂದರು.
ಈ ವೇಳೆ ಲೋಕಸಭೆ ಚುನಾವಣೆಗೂ ಮುನ್ನವೇ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಯಾದರೆ ಪಕ್ಷಕ್ಕೆ ಅನುಕೂಲ ವಾಗಲಿದೆ ಎಂದು ಹಕ್ಕು ಪ್ರತಿಪಾದಿಸಲಾಗಿದೆ. ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳುವುದು ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದರು. ಆದರೆ ನಿನ್ನೆ ರಾತ್ರಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಸಚಿವರೊಂದಿಗೆ ಪ್ರಮುಖವಾಗಿ ಲೋಕಸಭೆಯ ಚುನಾವಣೆಯ ತಯಾರಿಯ ಬಗ್ಗೆಯೇ ಹೆಚ್ಚು ಚರ್ಚೆಯಾಯಿತು. ವಿಶೇಷವಾಗಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಾಗಿಯೇ ಹೆಚ್ಚು ಚರ್ಚೆ ನಡೆಯಲಿಲ್ಲ. ಸಮಾಲೋಚನೆಯ ನಡುವೆ ಕೆಲವರು ವಿಚಾರವನ್ನು ಪ್ರಸ್ತಾಪಿಸಿದರು ಎಂದು ಹೇಳಿದರು.
ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ
ಲೋಕಸಭೆ ಚುನಾವಣೆಯಲ್ಲಿ ಯಾವ ರೀತಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂಬು ದರ ಬಗ್ಗೆ ಪ್ರಸ್ತಾಪಿಸಲಾಗಿದೆ. ನನಗೆ ಕೆಪಿಸಿಸಿ ಅಧ್ಯಕ್ಷನಾಗಿ 2 ಬಾರಿ ಲೋಕಸಭೆ ಚುನಾವಣೆ ನಡೆಸಿದ ಅನುಭವ ಇದೆ. ಅದರ ಆಧಾರದ ಮೇಲೆ ಕೆಲ ಸಲಹೆ ನೀಡಿದ್ದೇನೆ ಎಂದರು. ಅನಿವಾರ್ಯ ಸಂದರ್ಭ ಎದುರಾಗಿದ್ದೇ ಆದರೆ ಸಚಿವರು ಲೋಕಸಭೆ ಚುನಾವಣೆಯಲ್ಲಿ ಸ್ರ್ಪಧಿಸಬೇಕಾಗುತ್ತದೆ ಎಂದು ಹೈಕಮಾಂಡ್ ಸಂದೇಶ ರವಾನಿಸಿದೆ. ಕಳೆದ ಬಾರಿ ಕೃಷ್ಣಭೈರೇಗೌಡ ಅವರನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು. ಅದನ್ನು ಉದಾಹರಣೆಯಾಗಿ ಚರ್ಚಿಸಲಾಗಿದ್ದು, ಸಂದರ್ಭ ಬಂದರೆ ಸಚಿವರು ಸ್ರ್ಪಧಿಗಳಾಗಲು ಸಿದ್ಧವಾಗಿರಬೇಕಾಗುತ್ತದೆ ಎಂದು ಹೈಕಮಾಂಡ್ ತಿಳಿಸಿದೆ ಎಂದರು.
ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಪಟ್ಟಂತೆ ಈಗಾಗಲೇ ಚರ್ಚೆಗಳಾಗಿವೆ. ಯಾರೆಲ್ಲಾ ಆಕಾಂಕ್ಷಿಗಳಿದ್ದಾರೆ, ಸಮರ್ಥರ್ಯಾರು, ಜಾತಿವಾರು ಲೆಕ್ಕಾಚಾರವೇನು, ಯಾರನ್ನು ಕಣಕ್ಕಿಳಿಸಬೇಕು ಎಂಬ ಮಾಹಿತಿಗಳು ಈಗಾಗಲೇ ಲಭ್ಯವಿದೆ. ಅದರ ಆಧಾರದ ಮೇಲೆ ಮುಂದಿನ ಚರ್ಚೆಗಳು ನಡೆಯಲಿವೆ. ಎರಡು ದಿನ ಬಿಟ್ಟು ಎಲ್ಲಾ ಸಚಿವರೂ ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಲಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.
ಕರವೇ ಅಧ್ಯಕ್ಷ ನಾರಾಯಣಗೌಡ ಮತ್ತೆ ಪೊಲೀಸ್ ವಶಕ್ಕೆ
ಗಣರಾಜ್ಯೋತ್ಸವ ಸಂದರ್ಭದಲ್ಲಿ ಯಾವ ರೀತಿಯ ಸಂದೇಶ ಸಾರುವ ಸ್ತಬ್ಧ ಚಿತ್ರವನ್ನು ನಿರ್ಮಿಸಬೇಕೆಂಬ ಬಗ್ಗೆ ರಾಜ್ಯಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಯಾಂತ್ರಿಕವಾಗಿ ರವಾನೆ ಮಾಡಿರುವ ಮಾರ್ಗಸೂಚಿಗಳನ್ನು ಪರಿಗಣಿಸುತ್ತೇವೆ ಎಂದು ಹೇಳಿದರು.