ಬೆಂಗಳೂರು, ಜ.10- ಸಮಾಜದಲ್ಲಿ ಇಡೀ ವ್ಯವಸ್ಥೆಯನ್ನೇ ಬದಲಾಯಿಸಬೇಕು, ಅದರಲ್ಲೂ ಮುಖ್ಯವಾಗಿ ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿ ಮಾಡಬೇಕೆಂದು ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಹೇಳಿದ್ದಾರೆ. ಶಿವರಾಜ್‍ಕುಮಾರ್ ಹಾಗೂ ಧನುಷ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಚಿತ್ರರಂಗವು ಸಂಕ್ರಾಂತಿಯ ಸುಗ್ಗಿಯನ್ನು ಹೆಚ್ಚಿಸಲು ಬಿಡುಗಡೆಯಾಗುತ್ತಿದ್ದು, ನೀವು ಒಂದು ವೇಳೆ ಒಂದು ದಿನದ ಸಿಎಂ ಆದರೆ ನೀವು ಮಾಡುವ ಮುಖ್ಯ ಕೆಲಸವೇನು ಎಂದು ತಮಿಳು ಸಂದರ್ಶನವೊಂದರಲ್ಲಿ ಕೇಳಲಾಗಿತ್ತು.
ಅದಕ್ಕೆ ಉತ್ತರಿಸಿರುವ ಶಿವಣ್ಣ ಚಿತ್ರರಂಗದಲ್ಲಿ ಇರಬೇಕಾದರೆ ರಾಜಕೀಯದಿಂದ ದೂರವಿರಬೇಕಾಗಿರುತ್ತದೆ. ನಾನು ರಾಜಕೀಯ ಹಿನ್ನೆಲೆ ಕುಟುಂಬದಿಂದಲೇ ಮದುವೆ ಆಗಿರುವುದರಿಂದ ನಾನು ಈ ರಂಗಕ್ಕೆ ಬರುತ್ತೇನೆ ಎಂದು ಬಯಸಿದ್ದರೆ ಅಪ್ಪಾಜಿ (ಡಾ.ರಾಜ್‍ಕುಮಾರ್) ಕೂಡ ಬೇಡ ಅನ್ನುತ್ತಿರಲಿಲ್ಲ’ ಎಂದು ಹೇಳಿದ್ದಾರೆ.
ನಾನು ರಾಜಕೀಯಕ್ಕೆ ಬಂದು ಒಂದು ವೇಳೆ ಸಿಎಂ ಆದರೆ ಮೊದಲು ಎಲ್ಲ ಅಕಾರಿಗಳ ಸಭೆ ಕರೆದು ಪ್ರಾಮಾಣಿಕ ಹಾಗೂ ಒಳ್ಳೆ ಮನಸ್ಸಿನಿಂದ ಕೆಲಸ ಮಾಡಿ' ಎಂದು ಸೂಚನೆ ನೀಡುತ್ತೇನೆ.
ಸಮಾಜಕ್ಕೆ ಪೊಲೀಸ್ ಇಲಾಖೆಯು ರಕ್ಷಾ ಕವಚ ಇದ್ದಂತೆ. ಪೊಲೀಸ್ ಇಲಾಖೆಯು ಸಮಾಜದ ಕೀ ಇದ್ದಂತಿದ್ದು, ಮೊದಲು ಈ ಇಲಾಖೆ ಸರಿಯಾದರೆ ಇಡೀ ಸಮಾಜವೇ ಬದಲಾಗುತ್ತದೆ.
ಪೊಲೀಸ್ ಇಲಾಖೆ ಸ್ವಲ್ಪ ಕಟ್ಟುನಿಟ್ಟಾದರೆ ಉಳಿದದ್ದೆಲ್ಲಾ ತಾನಾಗಿಯೇ ಸರಿಯಾಗುತ್ತದೆ. ಮುಖ್ಯಮಂತ್ರಿ, ಸಚಿವ ಯಾರೇ ಆಗಿದ್ದರೂ ಬೇದಭಾವ ತೋರದೆ, ತಪ್ಪು ಮಾಡಿದವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಶಿವರಾಜ್‍ಕುಮಾರ್ ಹೇಳಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಧನುಷ್ ಅವರ ಸಹೋದರ ಪಾತ್ರದಲ್ಲಿ ನಟಿಸುತ್ತಿದ್ದು, ಈಗಾಗಲೇ ಈ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದು, ಈಗ ಅವರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲು ಸಂಕ್ರಾಂತಿ ಹಬ್ಬದ ಸುಗ್ಗಿಯನ್ನು ಹೆಚ್ಚಿಸಲು ತಮಿಳು ಹಾಗೂ ಕನ್ನಡ ಅವತರಣಿಕೆಯಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗುತ್ತಿದೆ.