ಬೆಂಗಳೂರು,ಜ.11- ನಾವು ಶ್ರೀರಾಮನ ವಿರುದ್ಧವಾಗಿಲ್ಲ. ಆದರೆ ಅದರಲ್ಲಿ ರಾಜಕೀಯ ಮಾಡುವುದನ್ನು ವಿರೋಧಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಛರಿಸಿದ್ದಾರೆ. ಮಾಜಿ ಪ್ರಧಾನಿ ಲಾಲ್‍ಬಹದ್ದೂರ್ ಶಾಸ್ತ್ರಿಯವರ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧದಲ್ಲಿನ ಆವರಣದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂಬ ಕಾಂಗ್ರೆಸ್‍ನ ನಿಲುವೇ ನಮ್ಮ ನಿಲುವಾಗಿದೆ. ಬಿಜೆಪಿಯವರು ಉದ್ದೇಶಪೂರ್ವಕವಾಗಿ ರಾಜಕೀಯ ಮಾಡುತ್ತಿದ್ದಾರೆ. ಇದನ್ನು ಖಂಡಿಸುತ್ತೇವೆ ಎಂದರು. ನಾವೂ ಕೂಡ ಶ್ರೀ ರಾಮಚಂದ್ರನ ಭಕ್ತರು. ಪೂಜೆ ಮಾಡುತ್ತೇವೆ, ಭಜನೆ ಮಾಡುತ್ತೇವೆ, ರಾಮಮಂದಿರ ಕಟ್ಟುತ್ತೇವೆ, ರಾಮನಿಗೆ ವಿರೋಧವಿಲ್ಲ. ಅದೇ ರೀತಿ ರಾಜಕೀಯವಾಗಿ ಮಾತನಾಡುವವರಿಗೆ ಮದ್ದಿಲ್ಲ ಎಂದು ಹೇಳಿದರು.
ಇಂದು ಲಾಲ್‍ಬಹದ್ದೂರ್ ಶಾಸ್ತ್ರಿ ಅವರ 58ನೇ ಪುಣ್ಯಸ್ಮರಣೆ
ಬಿಜೆಪಿಯವರು ಅಯೋಧ್ಯೆಗೆ ಏಕೆ ಹೋಗುತ್ತಿದ್ದಾರೆ. ಇಲ್ಲಿ ಶ್ರೀ ರಾಮಮಂದಿರವಿದೆ. ಇಲ್ಲೇ ಪೂಜೆ ಮಾಡಿದರೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು. ಜನವರಿ 22 ರಂದು ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಸಂದರ್ಭದಲ್ಲಿ ಪೂಜೆ ಮಾಡಲು ಮುಜರಾಯಿ ಇಲಾಖೆ ನಿರ್ಧಾರ ತೆಗೆದುಕೊಂಡಿದೆ. ಅದು ನನ್ನ ಹೇಳಿಕೆಯಲ್ಲ ಎಂದು ಸ್ಪಷ್ಟಪಡಿಸಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ದೇಶ ಕಂಡ ಪ್ರಾಮಾಣಿಕ ಪ್ರಧಾನಿ. ಆಹಾರದ ಕೊರತೆಯಾದಾಗ ಒಂದು ದಿನ ಉಪವಾಸ ಮಾಡುವಂತೆ ಕರೆ ನೀಡಿದರು. ಜೈ ಜವಾನ್, ಜೈ ಕಿಸಾನ್ ಘೋಷಣೆ ಬಳಸಿದರು. ರೈಲ್ವೆ ಅಪಘಾತದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಮಾದರಿಯಾಗಿದ್ದ ಅವರು, ಸ್ವಲ್ಪ ಕಾಲ ಪ್ರಧಾನಿಯಾಗಿದ್ದರೂ ಕೂಡ ಆಹಾರ ಸ್ವಾವಲಂಬನೆಗೆ ಮುನ್ನುಡಿ ಬರೆದರು. ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿದರು ಎಂದು ಹೇಳಿದರು.