Friday, February 23, 2024
Homeರಾಜ್ಯರಾಮ, ಶಿವ ಎಲ್ಲರ ದೇವರು, ಇದರಲ್ಲಿ ಅನಗತ್ಯ ರಾಜಕೀಯ ಬೇಡ : ಸಚಿವ ಎಂ.ಬಿ.ಪಾಟೀಲ್

ರಾಮ, ಶಿವ ಎಲ್ಲರ ದೇವರು, ಇದರಲ್ಲಿ ಅನಗತ್ಯ ರಾಜಕೀಯ ಬೇಡ : ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು,ಜ.11- ಅಯೋಧ್ಯೆಯಲ್ಲಿ ನಡೆಯುವ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ಅಳೆದೂ ತೂಗಿ ತೆಗೆದುಕೊಂಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಿರ್ಧಾರದಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಲಾಭವಾಗಲಿದೆಯೇ, ನಷ್ಟವಾಗಲಿದೆಯೇ ಎಂಬುದನ್ನು ನಾವು ಲೆಕ್ಕಾಚಾರ ಹಾಕುವುದಿಲ್ಲ. ರಾಮ, ಶಿವ ಎಲ್ಲರ ದೇವರು. ಇದರಲ್ಲಿ ರಾಜಕೀಯ ಅನಗತ್ಯ ಎಂದರು.

ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರಿಗೆ ನೀಡಿದ ಆಹ್ವಾನದಲ್ಲಿ ನಾಟಕೀಯತೆ ಇತ್ತು. ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅತ್ಯಂತ ಹಿರಿಯ ನಾಯಕರು. 50 ವರ್ಷಗಳ ಅನುಭವ ಇರುವವರು. ಅವರಿಗೆ ಕಾಟಾಚಾರಕ್ಕೆ ಆಹ್ವಾನ ನೀಡಲಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾಗಾಂಧಿಯವರಿಗೆ ಆಹ್ವಾನ ನೀಡುವ ವಿಷಯದಲ್ಲೂ ನೆಪಮಾತ್ರ ಎಂಬಂತೆ ನಡೆದುಕೊಳ್ಳಲಾಗಿದೆ. ಎಲ್ಲರಿಗೂ ಗೌರವ ಕೊಟ್ಟು, ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮ ಮಾಡಿದ್ದರೆ ಅದರ ಘನತೆ ಹೆಚ್ಚಾಗುತ್ತಿತ್ತು ಎಂದು ಹೇಳಿದರು.

ಕೋಟ್ಯಂತರ ಹಿಂದೂಗಳ ಭಾವನೆಗೆ ಕಾಂಗ್ರೆಸ್ ಧಕ್ಕೆ ತಂದಿದೆ : ಬಿಎಸ್‌ವೈ

ಬಿಜೆಪಿ ರಾಮಮಂದಿರ ವಿಷಯದಲ್ಲಿ ರಾಜಕೀಯ ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆ ಗೆಲ್ಲುವ ಹುನ್ನಾರ ನಡೆಸಿದೆ. ಕಳೆದ ಚುನಾವಣೆಯಲ್ಲಿ ಪುಲ್ವಾಮ ಮತ್ತು ಬಾಲಕೋಟ್‍ನಲ್ಲಿ ನಡೆದ ಭಯೋತ್ಪಾದಕ ದಾಳಿಗಳನ್ನು ಚುನಾವಣೆಗೆ ಬಳಸಿಕೊಂಡಿತ್ತು. ಈ ಬಾರಿ ರಾಮನನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರತಿಯೊಂದೂ ಚುನಾವಣೆಯಲ್ಲೂ ಒಂದೊಂದು ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತದೆ ಎಂದರು.

ಲೋಕಸಭೆ ಚುನಾವಣೆ ತಯಾರಿಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿಂದು ಸಭೆ ನಡೆಯಲಿದೆ. ಅದರಲ್ಲಿ ವೀಕ್ಷಕರಾಗಿರುವ ಎಲ್ಲಾ ಸಚಿವರೂ ಭಾಗವಹಿಸುತ್ತಿದ್ದೇವೆ. 20 ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿ ಎಂದು ಹೇಳಿದರು.

RELATED ARTICLES

Latest News