Homeಬೆಂಗಳೂರುಡೇಟಿಂಗ್‌ ಆ್ಯಪ್‌ನಲ್ಲಿ ಮಾಯಾಂಗನೆಗೆ ಮರುಳಾಗಿ 1.66 ಕೋಟಿ ಹಣ ಕಳೆದುಕೊಂಡ ಟೆಕ್ಕಿ

ಡೇಟಿಂಗ್‌ ಆ್ಯಪ್‌ನಲ್ಲಿ ಮಾಯಾಂಗನೆಗೆ ಮರುಳಾಗಿ 1.66 ಕೋಟಿ ಹಣ ಕಳೆದುಕೊಂಡ ಟೆಕ್ಕಿ

Techie loses Rs 1.66 crore after falling for a scam on a dating app

ಬೆಂಗಳೂರು,ಮೇ 28- ಡೇಟಿಂಗ್‌ ಆ್ಯಪ್‌ನಲ್ಲಿ ಮಾಯಾಂಗನೆಯ ಗಾಳಕ್ಕೆ ಸಿಲುಕಿಕೊಂಡ ಅಮಾಯಕ ಸಾಫ್ಟ್ ವೇರ್‌ ಎಂಜಿನಿಯರ್‌ ಆಕೆಯ ಮಾತಿಗೆ ಮರುಳಾಗಿ, ಬಾಹ್ಯ ಸೌಂದರ್ಯಕ್ಕೆ ಮಾರುಹೋಗಿ ಕೋಟ್ಯಂತರ ಹಣ ಕಳೆದುಕೊಂಡು ಇದೀಗ ದಿಕ್ಕೇ ತೋಚದಂತಾಗಿ ಪರಿತಪಿಸುವಂತಾಗಿದೆ.

ಈ ಸುಂದರಿ ತನ್ನನ್ನು ಮದುವೆಯಾಗುತ್ತಾಳೆ ಎಂದು ನಂಬಿ ನಗರದ ಸಾಫ್ಟ್ ವೇರ್‌ ಎಂಜಿನಿಯರ್‌ ಸೌರವ್‌ ದುಬೆ ಎಂಬುವರು 1.66 ಕೋಟಿ ಹಣ ಕಳೆದುಕೊಂಡಿದ್ದಾರೆ.
ಸೈಬರ್‌ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಆ್ಯಪ್‌ಗಳ ಬಗ್ಗೆ ಜಾಗರೂಕರಾಗಿರಿ ಎಂದು ಆಗಾಗ್ಗೆ ಪೊಲೀಸರು ಎಚ್ಚರಿಸುತ್ತಲೇ ಬಂದಿದ್ದರೂ ಸಹ ಯಾವುದಾದರೂ ಒಂದು ರೂಪದಲ್ಲಿ ತಗಲಾಕಿಕೊಂಡು ಕೋಟ್ಯಂತರ ಹಣ ಕಳೆದುಕೊಳ್ಳುತ್ತಿರುವುದು ದುರ್ದೈವ. ಇದಕ್ಕೆ ಉದಾಹರಣೆಯೇ ಈ ಟೆಕ್ಕಿ.

ಸಾಫ್‌್ಟವೇರ್‌ ಎಂಜಿನಿಯರ್‌ ಸೌರವ್‌ ದುಬೆ ಎಂಬುವರು ಫೆ.15 ರಂದು ಟಂಟನ್‌ ಎಂಬ ಡೇಟಿಂಗ್‌ ಆ್ಯಪ್‌ನಲ್ಲಿ ರಿಯಾ ಅಗರ್ವಾಲ್‌ ಎಂಬ ಹೆಸರಿನ ಯುವತಿಯ ಪರಿಚಯವಾಗಿದೆ.
ಚಾಟಿಂಗ್‌ ಮೂಲಕ ಇವರಿಬ್ಬರಲ್ಲಿ ಅನ್ಯೋನ್ಯತೆ ಬೆಳೆದು ದಿನಕಳೆದಂತೆ ಆತೀಯತೆ ಹೆಚ್ಚಾಗಿ ಸ್ನೇಹಕ್ಕೆ ತಿರುಗಿದೆ.

ತದನಂತರದಲ್ಲಿ ಸೌರವ್‌ ಮೊಬೈಲ್‌ ನಂಬರನ್ನು ಪಡೆದುಕೊಂಡ ಯುವತಿ ನಿರಂತರವಾಗಿ ವಿಡಿಯೋ ಕಾಲ್‌ ಮಾಡುವ ಮೂಲಕ ಆತನನ್ನು ಬಲೆಗೆ ಬೀಳಿಸಿಕೊಂಡಿದ್ದಾಳೆ.
ಯಾವಾಗ ಸೌರವ್‌ ತನ್ನನ್ನು ಪೂರ್ತಿಯಾಗಿ ನಂಬಿದ್ದಾನೆ ಎಂದು ಖಚಿತವಾಗುತ್ತಿದ್ದಂತೆ ಸಂಪೂರ್ಣ ವಿಶ್ವಾಸ ಗಳಿಸಿ, ನಿಮನ್ನು ಮದುವೆಯಾಗುವುದಾಗಿ ಹೇಳಿದ್ದಾಳೆ.
ಆಕೆಯ ಮಾತು ಹಾಗೂ ಸೌಂದರ್ಯಕ್ಕೆ ಮರುಳಾದ ಸೌರವ್‌ ಆಕೆಯನ್ನು ಸಂಪೂರ್ಣವಾಗಿ ನಂಬಿ ಆಕೆ ಹೇಳಿದ್ದನ್ನೆಲ್ಲಾ ಒಪ್ಪಿಕೊಂಡಿದ್ದಾರೆ.

ತನ್ನನ್ನು ಈತ ಸಂಪೂರ್ಣವಾಗಿ ನಂಬಿದ್ದಾನೆ ಎಂಬುದನ್ನು ಖಚಿತಪಡಿಸಿಕೊಂಡ ಮಾಯಾಂಗನೆ, ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅತೀ ಕಡಿಮೆ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಲಾಭ ಗಳಿಸಬಹುದೆಂಬ ಆಮಿಷವೊಡ್ಡಿದ್ದಾಳೆ.

ಹೇಗಿದ್ದರೂ ತಾನು ಮದುವೆಯಾಗುವ ಹುಡುಗಿ ಎಂದು ನಂಬಿದ ಸೌರವ್‌ ಆಕೆಯ ಮಾತನ್ನು ನಿಜವೆಂದು ಭಾವಿಸಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಹಂತಹಂತವಾಗಿ ವಿವಿಧ ಬ್ಯಾಂಕ್‌ ಖಾತೆಗಳ ಮೂಲಕ ತಾನು ದುಡಿದಿದ್ದ ಹಣವನ್ನೆಲ್ಲಾ ಅಂದರೆ ಬರೋಬ್ಬರಿ 1.66 ಕೋಟಿ ಹಣ ಹೂಡಿಕೆ ಮಾಡಿದ್ದಾರೆ.

ಹೂಡಿಕೆ ಮಾಡಿದ ಕೆಲ ದಿನಗಳ ನಂತರ ಸೌರವ್‌ಗೆ ಸಿಕ್ಕಿದ್ದು ಕೇವಲ 4,250 ರೂ. ಮಾತ್ರ. ಇದರಿಂದ ಒಂದು ಕ್ಷಣ ಆತಂಕಕೊಂಡ ಸೌರವ್‌ ಹೂಡಿಕೆ ಮೇಲೆ ಅನುಮಾನಗೊಂಡು ತನಗೆ ಬರಬೇಕಾದ ಲಾಭಾಂಶದ ಹಣ ಹಾಗೂ ಹೂಡಿಕೆ ಮಾಡಿರುವ ಅಸಲು ವಾಪಸ್‌‍ ಕೊಡುವಂತೆ ರಿಯಾ ಬಳಿ ಕೇಳಿದ್ದಾರೆ.

ಸೌರವ್‌ ಹಣಕ್ಕಾಗಿ ಒತ್ತಾಯಿಸಲು ಯಾವಾಗ ಆರಂಭಿಸಿದನೋ ಆಗ ತಾನು ಸಿಕ್ಕಿಬೀಳಬಹುದೆಂದು ತಿಳಿದು ತಕ್ಷಣ ತನ್ನ ಮೊಬೈಲ್‌ ಅನ್ನು ಸ್ವಿಚ್‌ ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದಾಳೆ.

ಹಲವಾರು ಬಾರಿ ತಾನು ನಂಬಿದ್ದ ರಿಯಾ ಮೊಬೈಲ್‌ಗೆ ಕರೆ ಮಾಡಿದರೂ ಆಕೆ ಸ್ವೀಕರಿಸದಿದ್ದಾಗ ತಾನು ಮೋಸ ಹೋಗಿರುವುದು ಅರಿವಿಗೆ ಬರುವಷ್ಟರಲ್ಲಿ ಕೋಟ್ಯಂತರ ಹಣ ಕಳೆದುಕೊಂಡಿರುವುದು ಗೊತ್ತಾಗಿದೆ.

ಮುಂದೇನು ಮಾಡಬೇಕೆಂದು ತೋಚದ ಟೆಕ್ಕಿ ಸೌರವ್‌ ದುಬೆ ಅವರು ಆಗ್ನೇಯ ವಿಭಾಗದ ಸೆನ್‌ ಸೈಬರ್‌ ಕ್ರೈಂ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕಿ ಹಾಗೂ ಆಕೆಯ ಬ್ಯಾಂಕ್‌ ಖಾತೆಗಳ ಜಾಡು ಹಿಡಿದು ಕಾರ್ಯಾಚರಣೆ ಕೈಗೊಂಡು ತನಿಖೆ ತೀವ್ರಗೊಳಿಸಿದ್ದಾರೆ.

ಡೇಟಿಂಗ್‌ ಆ್ಯಪ್‌ ಸೇರಿದಂತೆ ಇನ್ನಿತರೆ ಆ್ಯಪ್‌ಗಳನ್ನು ನಂಬಿ ಪರಿಚಯವಾಗುವ ಅಪರಿಚಿತರ ಮಾತಿಗೆ ತಮ ಪ್ರಲೋಭನೆಗೆ ಒಳಗಾಗಬೇಡಿ ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

RELATED ARTICLES

Latest News