ಬೆಂಗಳೂರು,ಮೇ 28- ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ ಕುರ್ಚಿಗೆ ಕಂಟಕ ಬಂದಾಗಲೆಲ್ಲಾ ಜಾತಿ ಜನಗಣತಿ ವರದಿ ಎಂಬ ಮಂಕುಬೂದಿ ಎರಚಿ ಜನರ ಅನುಕಂಪ ಗಳಿಸುವ ಕುತಂತ್ರ ಈಗ ಯಾರಿಗೂ ಗುಟ್ಟಾಗಿ ಉಳಿದಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ತಮ ಸಂಬಂಧ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ನಿರ್ಗಮಿತ ಸಿ.ಎಂ.ಸಿದ್ದರಾಮಯ್ಯ ವಿರುದ್ಧ ಪೋಸ್ಟ್ ಮಾಡಿರುವ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾದ ಕ್ಷಣದಲ್ಲಿ, ಅಧಿಕಾರದ ಕೊನೆಯ ದಿನಗಳಲ್ಲಿ ತರಾತುರಿಯಲ್ಲಿ ಜಾತಿ ಜನಗಣತಿ ವರದಿ ಸ್ವೀಕರಿಸುವುದು, ಅದರ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವುದು – ಇದನ್ನು ಆಷಾಢಭೂತಿತನ, ರಾಜಕೀಯ ಬೂಟಾಟಿಕೆ ಅನ್ನದೇ ಇನ್ನೇನು ಹೇಳಲು ಸಾಧ್ಯ?ಎಂದು ಪ್ರಶ್ನಿಸಿದ್ದಾರೆ.
ನಿಮ ಆಡಳಿತ ವಿಫಲವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇಲ್ಲ. ಸರ್ಕಾರದ ವಿರುದ್ಧ ಸ್ಪಷ್ಟ ಆಡಳಿತ ವಿರೋಧಿ ಅಲೆ ಇದೆ. ಹೈಕಮಾಂಡ್ ಬಳಿ ಛೀಮಾರಿ ಹಾಕಿಸಿಕೊಂಡು ಒಲ್ಲದ ಮನಸ್ಸಿನಿಂದ ರಾಜೀನಾಮೆ ಕಡೆಗೆ ಸಾಗುತ್ತಿರುವ ಸಿದ್ದರಾಮಯ್ಯನವರು, ಕನಿಷ್ಠ ಈಗಲಾದರೂ ತಮ ತುಷ್ಟೀಕರಣ ರಾಜಕಾರಣ ಮತ್ತು ಢೋಂಗಿ ಸಮಾಜವಾದದ ಬಗ್ಗೆ ಆತಾವಲೋಕನ ಮಾಡಿಕೊಳ್ಳುತ್ತಾರೆ, ಪಶ್ಚಾತಾಪ ಪಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಕುರ್ಚಿ ಬಿಡುವ ಕೊನೆಯ ಕ್ಷಣದಲ್ಲೂ ಕೂಡ ಓಲೈಕೆ ರಾಜಕಾರಣ ಮುಂದುವರಿಸಿ ತಮ ಭಂಡತನವನ್ನು ಮತ್ತೊಮೆ ಪ್ರದರ್ಶಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮೊದಲನೆಯದಾಗಿ, ಇಷ್ಟು ದೊಡ್ಡ ಪ್ರಮಾಣದ ದತ್ತಾಂಶವನ್ನು ಕೇವಲ ಕೆಲ ಗಂಟೆಗಳಲ್ಲಿ ಸಂಸ್ಕರಿಸಿ ಅಂತಿಮ ವರದಿ ರೂಪಿಸುವುದು ಅಸಾಧ್ಯ. ಇದಕ್ಕಾಗಿಯೇ ದೆಹಲಿ ಭೇಟಿಯಲ್ಲಿ ಹೈಕಮಾಂಡ್ ಮುಂದೆ ಸ್ವತಃ ಮುಖ್ಯಮಂತ್ರಿಗಳೇ 15 ದಿನಗಳ ಕಾಲಾವಕಾಶ ಕೇಳಿದ್ದಾರೆ ಎಂಬ ಸುದ್ದಿಗಳಿದ್ದವು. ಹಾಗಿದ್ದಾಗ ಕೇವಲ 24 ಗಂಟೆಗಳಲ್ಲಿ ವರದಿ ಸ್ವೀಕಾರ ಸಾಧ್ಯವೇ ? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಎರಡನೆಯದಾಗಿ, ಕೇಂದ್ರ ಸರ್ಕಾರ ಈಗಾಗಲೇ ದಶವಾರ್ಷಿಕ ಜನಗಣತಿಯಲ್ಲಿ ದೇಶವ್ಯಾಪಿ ಜಾತಿ ಜನಗಣತಿ ನಡೆಸುವುದಾಗಿ ಘೋಷಿಸಿದ್ದು, ಅದರ ಪ್ರಕ್ರಿಯೆಯೂ ಆರಂಭವಾಗಿದೆ. ಆದರೂ ತಮ ಸ್ವಾರ್ಥ ರಾಜಕಾರಣಕ್ಕಾಗಿ ಕನ್ನಡಿಗರ ತೆರಿಗೆ ಹಣವನ್ನು ಮಾಡಿ, ತರಾತುರಿಯಲ್ಲಿ ವರದಿ ಸ್ವೀಕರಿಸಿ ಅದನ್ನು ಸೋರಿಕೆ ಮಾಡುವ ಮೂಲಕ ಸಮಾಜದಲ್ಲಿ ಜಾತಿಜಾತಿಗಳ ನಡುವೆ ಬೆಂಕಿ ಹಚ್ಚುವ ಅಪಾಯಕಾರಿ ರಾಜಕಾರಣಕ್ಕೆ ಕೈ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜೀನಾಮೆ ಕೊಡುವ ಹೊಸ್ತಿಲಲ್ಲೂ ತಮ ಒಣ ಪ್ರತಿಷ್ಠೆ ಮತ್ತು ಸ್ವಹಿತಾಸಕ್ತಿ ಬಿಡದ ಸಿದ್ದರಾಮಯ್ಯನವರ ಸಣ್ಣತನ ಹಾಗೂ ಕೀಳು ಮಟ್ಟದ ರಾಜಕಾರಣ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅಶೋಕ್ ಎಚ್ಚರಿಸಿದ್ದಾರೆ.
